ಎಸ್ಎಸ್ಎಲ್‌ಸಿ ಪರೀಕ್ಷೆ ರದ್ದು, ಪಿಯುಸಿ ಮುಂದೂಡಿಕೆ ಸಾಧ್ಯತೆ..?

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ತೀವ್ರತೆ ಹೆಚ್ಷುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಿ, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಕುರಿತು ಚಿಂತನೆ ನಡೆದಿದೆ.

ಮೇ‌ 24 ರಿಂದ ಜೂನ್ 16ರ ವರೆಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿತ್ತು. ಆದರೆ ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸುವುದು ಕಷ್ಟಕರ. ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡುವುದು ಅಥವಾ ಮುಂದೂಡಿಕೆ ಮಾಡುವುದು ಮಾತ್ರವೇ ಸರಕಾರ ಮುಂದಿರುವ ಅವಕಾಶ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಿರ್ಣಾಯಕ ಕಾಲಘಟ್ಟ. ವೃತ್ತಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಆಯ್ಕೆಯ ದೃಷ್ಟಿಯಿಂದ ಲೂ ದ್ವಿತೀಯ ಪಿಯುಸಿಯ ಅಂಕ ಅತ್ಯಗತ್ಯ. ಈ ನಿಟ್ಟಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಬೇಕೆಂದು ಹಲವು ಅಧಿಕಾರಿಗಳು ಸಲಹೆ ಕೊಟ್ಟಿದ್ದಾರೆ. ಕೇಂದ್ರ ಸರಕಾರ ನೀಟ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಇನ್ನೂ ಕನಿಷ್ಟ 2 ತಿಂಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಇನ್ನು ಜೂನ್ ಎರಡನೇ ವಾರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗಳು ಆರಂಭವಾಗುವುದು ಅನುಮಾನ. 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಇನ್ನೂ ಬಂದಿಲ್ಲ. ಇನ್ನೊಂದೆಡೆ ಸೋಂಕು ತೀವ್ರವಾಗಿ ಹರಡುತ್ತಿದೆ. ಸದ್ಯದ ಸ್ಥಿತಿಯಲ್ಲಿ ಕೊರೊನಾ ನಿಯಂತ್ರಣ ಕಷ್ಟ ಸಾಧ್ಯ. ಒಂದೊಮ್ಮೆ ಪರೀಕ್ಷೆಯನ್ನು ನಡೆಸಿದ್ರೆ ದೊಡ್ಡ ಮಟ್ಟದಲ್ಲಿ ಸೋಂಕು ಹರಡುವ ಸಾಧ್ಯತೆಯಿದೆ. ಹೀಗಾಗಿ ಇತರ ರಾಜ್ಯಗಳ ಮಾದರಿ ಯಲ್ಲಿಯೇ ಕರ್ನಾಟಕ ದಲ್ಲಿಯೂ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಹಿರಿಯ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.

ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಗಳ ಸಭೆ ನಡೆಯಲಿದ್ದು, ಪರೀಕ್ಷೆಯ ಬಗ್ಗೆ ಅಂತಿಮ ನಿರ್ಧಾರ ಹೊರಬರುವ ಸಾಧ್ಯತೆಯಿದೆ.

Comments are closed.