ಕರ್ನಾಟಕದಲ್ಲಿ ರದ್ದಾಗುತ್ತಾ SSLC, ಪಿಯುಸಿ ಪರೀಕ್ಷೆ..? ಶಿಕ್ಷಣ ತಜ್ಞರು ಕೊಟ್ರು ಮಹತ್ವದ ಸಲಹೆ

ಬೆಂಗಳೂರು : ಕೊರೊನಾ ವೈರಸ್ ಸೋಂಕು ಮಿತಿ ಮೀರುತ್ತಿರುವ ಬೆನ್ನಲ್ಲೇ ಹಲವು ರಾಜ್ಯಗಳು ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಿವೆ. ಕರ್ನಾಟಕದಲ್ಲಿಯೂ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು, ಪರೀಕ್ದೆ ರದ್ದು ಮಾಡುವಂತೆ ಪ್ರಾಮಾಣಿಕ ಅಧಿಕಾರಿಗಳು, ಶಿಕ್ಷಣ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಅತೀ ಹೆಚ್ಚು ಕೊರೊನಾ ಸೋಂಕು ಹೊಂದಿರುವ ನೆರೆಯ‌ ಮಹಾರಾಷ್ಟ್ರ ಸರಕಾರ ಆರಂಭದಲ್ಲಿಯೇ 10ನೇ ತರಗತಿ ಪರೀಕ್ಷೆ ಯನ್ನು ರದ್ದು ಮಾಡಿ ವಿದ್ಯಾರ್ಥಿಗಳಿಗೆ ಪೋಷಕರಿಗೆ ರಿಲ್ಯಾಕ್ಸ್ ನೀಡಿದೆ. ಇನ್ನು ಕರ್ನಾಟಕಕ್ಕಿಂತಲೂ ಕಡಿಮೆ ಸೋಂಕು ಇರುವ ತಮಿಳುನಾಡು ಪರೀಕ್ಷೆಯನ್ನು ರದ್ದು ಮಾಡಿ ಮಕ್ಕಳ ಅರೊಗ್ಯಕ್ಕಿಂತ ಪರೀಕ್ಷೆ ಮುಖ್ಯ ವಲ್ಲ ಎಂದಿದೆ. ಜೊತೆಗೆ ಪರೀಕ್ಷೆಗಾಗಿ ವ್ಯಯಿಸಬೇಕಾಗಿದ್ದ ಕೋಟ್ಯಾಂತರ ರೂಪಾಯಿ ಹೊರೆಯನ್ನೂ ತಗ್ಗಿಸಿಕೊಂಡಿದೆ.

ಆದರೆ ಕರ್ನಾಟಕದಲ್ಲೀಗ ಹಳ್ಳಿ ಹಳ್ಳಿಗೂ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಮಕ್ಕಳು ಶಿಕ್ಷಕರಿಗೆ ಕೊರೊನಾ ಭೀತಿ ಎದುರಾಗಿದೆ. ಈಗಾಗಲೇ ಮಕ್ಕಳು, ಶಿಕ್ಷಕರು ಕೊರೊನಾ ಹೆಮ್ಮಾರಿಗೆ ಬಲಿಯಾಗಿ ದ್ದಾರೆ. ಜೊತೆಗೆ ಪರೀಕ್ಷೆಯ ಒತ್ತಡದಲ್ಲಿದ್ದಾರೆ. ಸಿಬಿಎಸ್ಇ ಬೋರ್ಡ್, ಐಸಿಎಸ್ಇ ಈಗಾಗಲೇ 10ನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಿವೆ. ನೆರೆಯ ರಾಜ್ಯ ಸರಕಾರಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ವಾಪಾಸ್ ನೀಡುವ ಕುರಿತು ಚಿಂತನೆ ನಡೆಸಿವೆ. ಆದರೆ ಕರ್ನಾಟಕದ ಶಿಕ್ಷಣ ಸಚಿವರು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿಯ ರಾಜ್ಯದ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ನಿತ್ಯವೂ ರಾಜ್ಯದಲ್ಲಿ ಸರಿ ಸುಮಾರು 40 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇನ್ನೊಂದೆಡೆ 200 ಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ‌. ಕಳೆ‌ದ ವರ್ಷ ಕರ್ನಾಟಕದಲ್ಲಿ ನಿತ್ಯವೂ ಮೇ ತಿಂಗಳಲ್ಲಿ 7 ಸಾವಿರ ದಷ್ಟು ಕೊರೊನಾ ಸೋಂಕು ಕಂಡು ಬರುತ್ತಿದ್ದರೆ, ಈ‌‌‌ ಬಾರಿ ಸೋಂಕಿನ ಪ್ರಮಾಣ‌ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಸಾಲದಕ್ಕೆ ರಾಜ್ಯದಲ್ಲೀಗ 4 ಲಕ್ಷಕ್ಕೂ ಅಧಿಕ ಸಕ್ರೀಯ ಕೊರೊನಾ‌ ಪ್ರಕರಣಗಳಿವೆ. ಅಲ್ಲದೇ ಮೇ ಅಂತ್ಯಕ್ಕೆ ಸೋಂಕು ಇನ್ನಷ್ಟು ವ್ಯಾಪಿಸುವ ಕುರಿತು ಕೋವಿಡ್ ತಾಂತ್ರಿಕ‌ ಸಮಿತಿ ಸರಕಾರಕ್ಕೆ ಎಚ್ಚರಿಕೆ ಯನ್ನು ನೀಡಿದೆ. ಕೊರೊನಾ ಸೋಂಕಿನ ನಡುವಲ್ಲೇ ಪರೀಕ್ಷೆಯನ್ನು ನಡೆಸಿದ್ರೆ, ಲಕ್ಷಾಂತರ ಸಂಖ್ಯೆಯಲ್ಲಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿ ಗಳು ಮಹಾಮಾರಿಗೆ ತುತ್ತಾಗುವ ಸಾಧ್ಯತೆ‌ಯಿದೆ ಹೆಚ್ಚಾಗಿದೆ. ಈ ಹಿನ್ನೆಲೆ ಯಲ್ಲಿ ನೆರೆಯ ರಾಜ್ಯಗಳಂತೆಯೇ ಕರ್ನಾಟಕದಲ್ಲಿ ಯೂ ಈ ಬಾರಿ  ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಬೇಕೆಂಬ ಸಲಹೆಯನ್ನು ಖುದ್ದು ಶಿಕ್ಷಣ ತಜ್ಞರೇ  ಕೊಟ್ಟಿದ್ದಾರೆ.

ಇನ್ನು ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಆದರೆ ಕೊರೊನಾ ಸೋಂಕಿನ ಹಿನ್ನೆಲೆ ಯಲ್ಲಿ ರಾಜ್ಯದಲ್ಲಿ ಕೊರೊನಾ ಕರ್ಪ್ಯೂ ಜಾರಿಯಲ್ಲಿದೆ. ಇನ್ನೊಂದೆಡೆ ಕೊರೊನಾ ಸೋಂಕಿನ ಆರ್ಭಟ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆತಂಕವನ್ನು ತಂದೊಡ್ಡಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗುತ್ತಾ..? ಇಲ್ಲಾ ಮುಂದೂಡಿಕೆ ಯಾಗುತ್ತಾ..? ಅನ್ನುವ ಕುರಿತು ಶಿಕ್ಷಣ ಇಲಾಖೆ ಸ್ಪಷ್ಟನೆಯನ್ನು ಕೊಟ್ಟಿಲ್ಲ. ಒಂದೊಮ್ಮೆ ಪರೀಕ್ಷೆ ನಡೆಸುವ ಬಗ್ಗೆಯೂ ಯಾವುದೇ ಸ್ಪಷ್ಟತೆಯೂ ಇಲ್ಲ. ಇನ್ನು ಪರೀಕ್ಷೆಯನ್ನು ನಡೆಸಿದ್ದೇ ಆದ್ರೆ‌ ಎದುರಾಗುವ ಕೊರೊನಾತಂಕವನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಸಮರ್ಥವಾಗಿದೆಯೇ ..? ಹೀಗಾಗಿ ಶಿಕ್ಷಣ ಇಲಾಖೆಯ ಎಡವಟ್ಟು ನಿರ್ಧಾರದಿಂದ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.

ಕೊರೊನಾ ಆರ್ಭಟದ ನಡುವಲ್ಲೇ ಪರೀಕ್ಷೆ ನಡೆಸಿದ್ರೆ ಸೋಂಕು ಹರಡುವ ಸಾಧ್ಯತೆ ತೀರಾ‌ ಹೆಚ್ಚಿದೆ. ಒಂದೊಮ್ಮೆ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದ್ರೆ ವಿದ್ಯಾರ್ಥಿಗಳು ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆಯಿದೆ. ಇಲ್ಲಾ ಪರೀಕ್ಷೆ ರದ್ದಾದ್ರೆ ಮುಂದೇನು ಅನ್ನುವ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಸರಕಾರ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸಬೇಕಾದ ಅನಿವಾರ್ಯತೆಯಿದೆ. ಇನ್ನು ಎಸ್ಎಸ್ಎಲ್ ಸಿ ಪರೀಕ್ಷೆಗೆ ಇನ್ನೊಂದು ತಿಂಗಳ ಕಾಲಾವಕಾಶವಿದೆ.  ಆದರೆ ಸದ್ಯದ ಸ್ಥಿತಿಯನ್ನು ನೋಡಿದ್ರೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗುವ ಸಾಧ್ಯತೆ ತೀರಾ ಕಡಿಮೆ. ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸಿದ್ರೆ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕುವ ಸಾಧ್ಯತೆ ತೀರಾ ಹೆಚ್ಚಾಗಿದೆ. ನೆರೆಯ ರಾಜ್ಯಗಳು ಕಳೆದ ಎರಡು ವರ್ಷಗಳ ಕಾಲ ಪರೀಕ್ಷೆಯನ್ನು ರದ್ದು ‌ಮಾಡಿರುವಾಗ ರಾಜ್ಯದಲ್ಲಿಯೂ ಪರೀಕ್ಷೆ ರದ್ದು ಮಾಡಿದ್ರೆ ಏನೂ ಆಗೋದಿಲ್ಲ. ಸಿಬಿಎಸ್ಇ ಹಾಗೂ ಐಸಿಎಸ್ಇ ಗಳಂತೆಯೇ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ರದ್ದು ಮಾಡಲಿ ಅನ್ನೋದು ವಿದ್ಯಾರ್ಥಿಗಳು, ಪೋಷಕರ ಆಗ್ರಹ.

ಸಮರ್ಥ ಜನಪ್ರತಿನಿಧಿಯೆಂಬ ಖ್ಯಾತಿಗೆ ಪಾತ್ರರಾಗಿದ್ದ ಸುರೇಶ್ ಕುಮಾರ್ ಅವರೇ ಖುದ್ದು ಶಿಕ್ಷಣ ಸಚಿವರಾಗಿದ್ದಾರೆ. ಆದರೆ ಶಿಕ್ಷಣ ಸಚಿವರಿಗೆ ಅದೇನಾಗಿದೆಯೋ ತಿಳಿಯುತ್ತಿಲ್ಲ. ಕೊರೊನಾ ಆರಂಭದ ಬಳಿಕ ಸಚಿವ ಸುರೇಶ್ ಕುಮಾರ್ ಯಾವುದೇ ವಿಚಾರದಲ್ಲೂ ಗೊಂದಲವಿಲ್ಲದ ನಿರ್ಧಾರವನ್ನು ಕೈಗೊಂಡಿದ್ದೇ ಇಲ್ಲ. ಅವರ ಎಲ್ಲಾ ಆದೇಶ, ನಿರ್ಣಯಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆಯೇ ಇರುತ್ತಿವೆ. ಸರಕಾರ, ಆರೋಗ್ಯ‌ ಸಚಿವರು ಕೈಗೊಳ್ಳುವ ನಿರ್ಧಾರಕ್ಕೂ ಸಹಮತವನ್ನು ನೀಡುತ್ತಿಲ್ಲ. ಹೋಗಲಿ ಸಚಿವರೇ ಜನ ಮೆಚ್ಚುವ ನಿರ್ಧಾರವನ್ನೂ ಪ್ರಕಟಿಸುತ್ತಿಲ್ಲ. ತನ್ನ ಕ್ಷೇತ್ರದಲ್ಲಿ ಕೊರೊನಾ ಕಾರ್ಯ ದಲ್ಲಿ ತೊಡಗಿರುವ ಸಚಿವರು ತುರ್ತಾಗಿ ಪರೀಕ್ಷೆ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ.

ಕಳೆದ ಬಾರಿ ಕೊರೊನಾ ಸೋಂಕು ಕಡಿಮೆಯಿದ್ದ ಕಾರಣಕ್ಕೆ ಸಚಿವ ಸುರೇಶ್ ಕುಮಾರ್ ಪರೀಕ್ಷೆ ನಡೆಸಿ ಯಶಸ್ವಿಯಾಗಿದ್ದರು. ಆದ್ರೀಗ ಕಾಲ ಬದಲಾಗಿದೆ. ಪರೀಕ್ಷೆ ನಡೆಸಲೇ ಬೇಕೆಂಬ ಹಠವನ್ನು ಕೈಬಿಟ್ಟು, ಸಾಧಕ‌ ಬಾಧಕಗಳನ್ನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಪ್ರಕಟಿಸಬೇಕಾಗಿದೆ. ಶೀಘ್ರದಲ್ಲಿ ಪರೀಕ್ದೆ ರದ್ದಾದ್ರೆ ಪರೀಕ್ಷೆಗಾಗಿ ವ್ಯಯಿಸುವ ಕೋಟ್ಯಾಂತರ ರೂಪಾಯಿಯ ಹೊರೆ ತಪ್ಪಿಸಬಹುದಾ ಗಿದೆ. ಕೇಂದ್ರ ಸರಕಾರವೇ ಪರೀಕ್ಷೆ ರದ್ದು ಮಾಡಲು ಸಲಹೆ ನೀಡಿರು ವಾಗ ರಾಜ್ಯದ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲೇ ಬೇಕೆಂದು ಹೊರಟಿರುವುದು ಹಾಸ್ಯಾಸ್ಪದವೇ ಸರಿ.

Comments are closed.