ಇಂಥಹ ಸೋಲುಗಳನ್ನು ಬದುಕಿನಲ್ಲಿ ತುಂಬ ನೋಡಿದ್ದೇನೆ…! ಫಲಿತಾಂಶದ ಬಳಿಕ ಮಾಜಿಐಪಿಎಸ್ ಅಣ್ಣಾಮಲೈ ಟ್ವೀಟ್….!!

ತಮಿಳುನಾಡಿನ ರಾಜಕೀಯದ ದಿಶೆಯನ್ನೇ ಬದಲಾಯಿಸುವ ಕನಸಿನೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ಮಾಜಿ ಐಪಿಎಸ್ ಅಣ್ಣಾಮಲೈ, ಮೊದಲ ಚುನಾವಣೆಯಲ್ಲೇ ಮುಗ್ಗರಿಸಿದ್ದಾರೆ. ತಮ್ಮ ಹುಟ್ಟೂರಿನ ಸನಿಹದ ಆರವಕುರುಚಿಯಿಂದ ಕಣಕ್ಕಿಳಿದ ಅಣ್ಣಾಮಲೈ 68 ಸಾವಿರ ಮತ ಗಳಿಸಿದ್ದು, ಸೋಲುಕಂಡಿದ್ದಾರೆ.

ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹುಟ್ಟೂರಿಗೆ ಮರಳಿದ್ದರು. ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದ ಅಣ್ಣಾಮಲೈ, ಆರವಕುರುಚಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ತಮ್ಮ ಸೋಲಿನ ಬಗ್ಗೆ ಟ್ವೀಟ್ ಮಾಡಿರುವ ಅಣ್ಣಾಮಲೈ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂಬ ಸಂದೇಶ ನೀಡಿದ್ದಾರೆ.

ನಾನು ಗೆಲುವಿನ ರೇಖೆಯನ್ನು ದಾಟುವುದಕ್ಕೆ ಆಗಿಲ್ಲ. ಆದರೆ ಆರವಕುರುಚಿ ಮತದಾರರಿಗೆ ಧನ್ಯವಾದ ಹೇಳುತ್ತೇನೆ.  68 ಸಾವಿರ ಮತಗಳನ್ನು ನೀಡಿ ನನ್ನನ್ನು ಹರಸಿದ್ದೀರಿ. ಅದಕ್ಕಾಗಿ ಧನ್ಯವಾದ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಕೆಲಸ ನಿರ್ವಹಿಸಿದ್ದ ಅಣ್ಣಾಮಲೈ, ಕರ್ನಾಟಕದ ಸಿಂಗಂ ಎಂಬ ಖ್ಯಾತಿ ಗಳಿಸಿದ್ದರು. ಆದರೆ ದಿಢೀರ್ ಖಾಕಿ ತೊರೆದಿದ್ದ ಸಿಂಗಂ  ಮೋದಿಯಿಂದ ಪ್ರಭಾವಿತರಾಗಿ ಬಿಜೆಪಿ ಸೇರಿರುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ತಮಿಳುನಾಡಿನಲ್ಲಿ  ಬಿಜೆಪಿಯನ್ನು ಬಲಗೊಳಿಸಿ ರಾಜಕೀಯ ಚಿತ್ರಣವನ್ನೇ ಬದಲಾಯಿಸುವುದಾಗಿ ಅಣ್ಣಾಮಲೈ ಹಲವು ಸಂದರ್ಭದಲ್ಲಿ ಹೇಳಿಕೊಂಡಿದ್ದರು.

ಆದರೆ ಮೊದಲ ಚುನಾವಣೆಯಲ್ಲೇ ಜನರು ಅಣ್ಣಾಮಲೈಯನ್ನು ಸ್ವೀಕರಿಸಿಲ್ಲ. ಚುನಾವಣಾ ನಾಮಪತ್ರ ಸಲ್ಲಿಕೆ ವೇಳೆ ಅಣ್ಣಾಮಲೈ ವಿರುದ್ಧ ಹಲವು ಕ್ರಿಮಿನಲ್ ಮೊಕದ್ದಮೆ ಇದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಅಲ್ಲದೇ ಬಿಜೆಪಿಗೆ ತಮಿಳುನಾಡಿನಲ್ಲಿ ಇನ್ನೂ ಅಂತಹ ಜನಸ್ಪಂದನೆ ಸಿಕ್ಕಿಲ್ಲ. ಜನರು ಬದಲಾವಣೆಗೆ ಸಿದ್ಧವಾಗಿಲ್ಲ ಎಂಬುದಕ್ಕೆ ಅಣ್ಣಾಮಲೈ ಸೋಲು ಸಾಕ್ಷಿ ಎಂಬುದು ರಾಜಕೀಯ ತಜ್ಞರ ಅಭಿಮತ.

Comments are closed.