ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಭಾಗ್ಯ : ಶೀಘ್ರದಲ್ಲೇ ಬರಲಿದೆ ಹೊಸ ನಿಯಮ
ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಈ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ಪಡೆಯಲು ಅವಕಾಶ ಇರಲಿದೆ. ದಶಕಗಳ ಹಳೆಯ ನಿಯಮಾವಳಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದ್ದು ಈ ಮೂಲಕ ಶಾಲಾ ಶಿಕ್ಷಕರಿಗೆ ಬಡ್ತಿ ಭಾಗ್ಯ ನೀಡಲಿದೆ.
ಒಂದು ವೇಳೆ ಈ ನಿಯಮ ಜಾರಿಗೆ ಬಂದಲ್ಲಿ, 1ರಿಂದ 5ನೇ ತರಗತಿ ಹಾಗೂ 6 ರಿಂದ 8ನೇ ತರಗತಿಗಳಿಗೆ ಬೋಧನೆ ಮಾಡುವ ಶಿಕ್ಷಕರು ಬಡ್ತಿ ಪಡೆಯಲಿದ್ದಾರೆ. ಇನ್ನು ಈ ಬಡ್ತಿಯನ್ನು ಪಡೆಯಲು ಶಿಕ್ಷಕರು ಕನಿಷ್ಟ 12 ವರ್ಷಗಳ ಸೇವಾ ಅನುಭವ ಹೊಂದಿರುವುದು ಕಡ್ಡಾಯವಾಗಿರಲಿದೆ. ಒಂದು ವೇಳೆ ಶಿಕ್ಷಕರು ಈ ಬಡ್ತಿಯನ್ನು ನಿರಾಕರಿಸಿದಲ್ಲಿ ಜ್ಯೇಷ್ಠತೆಯ ಆಧಾರದ ಮೇಲೆ ಈ ಬಡ್ತಿ ಬೇರೆಯವರ ಪಾಲಾಗಲಿದೆ.
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ ನಿಯಮಗಳಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. 12 ವರ್ಷಗಳ ಸೇವೆ ಸಲ್ಲಿಸಿದ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಬದಲಾವಣೆಯಿಂದ ಅನುಕೂಲವಾಗಲಿದೆ. ಪ್ರತಿ ಮೂರು ಮುಖ್ಯೋಪಾಧ್ಯಯ ಹುದ್ದೆಗಳಲ್ಲಿ 2 ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಪಾಲಾದರೆ 1 ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಪಾಲಾಗಲಿದೆ.
ಇದನ್ನೂ ಓದಿ: SSLC ಪರೀಕ್ಷೆ ಹೊಸ ಗೈಡ್ಲೈನ್ಸ್: ಶಿಕ್ಷಕರಿಗೆ ಮೊಬೈಲ್ ಬಳಕೆ ನಿರ್ಬಂಧ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ ಜೈಲೂಟ
ಹೊಸ ಶಿಕ್ಷಕರ ಬಡ್ತಿ ನಿಯಮಗಳ ಕರಡು ಪ್ರತಿ ಪ್ರಕಟಿಸಿರುವ ಸರಕಾರ, ಈ ಬಗ್ಗೆ ಆಕ್ಷೇಪಣೆಗಳ ಸಲ್ಲಿಕೆಗೆ ಜ.21 ರಿಂದ 15 ದಿನಗಳವರಗೆ ಕಾಲಾವಕಾಶ ನೀಡಲಾಗಿದೆ..ಸಾರ್ವಜನಿಕರು ಅಥವಾ ಸಂಬಂಧಪಟ್ಟವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬಹುದಾಗಿದೆ.



