Summer Vacation : ಮಾರ್ಚ್‌ನಲ್ಲೇ ಬೇಸಿಗೆ ರಜೆ, ಜೂನ್‌ 1 ರಿಂದ ಶಾಲಾರಂಭ : ಹೊಸ ಚಿಂತನೆ ನಡೆಸಿದ ಶಿಕ್ಷಣ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಭೀತಿ ಕಾಡುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಏರುತ್ತಲೇ ಇದೇ. ರಾಜ್ಯದಲ್ಲಿ ಫೆಬ್ರವರಿ ತಿಂಗಳಲ್ಲಿ ಕೊರೊನಾ ಸ್ಪೋಟವಾಗುವ ಕುರಿತು ತಜ್ಞರ ವರದಿ ಹೇಳುತ್ತಿದೆ. ವಿಶ್ವದ ಹಲವು ರಾಷ್ಟ್ರಗಳು ನಾಲ್ಕನೇ ಅಲೆಗೆ ತತ್ತರಿಸಿ ಹೋಗಿವೆ. ಈ ಹಿನ್ನೆಲೆಯಲ್ಲೀಗ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲಿ ಅಂತಿಮ ಪರೀಕ್ಷೆಯನ್ನು ಮಗಿಸಿ, ಬೇಸಿಗೆ ರಜೆ (Summer Vacation) ನೀಡುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಜೊತೆಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಯಾವುದೇ ತೊಂದರೆಯಾಗದಂತೆ ಜೂನ್‌ 1 ರಿಂದಲೇ ಶಾಲೆಗಳನ್ನು ಆರಂಭಿಸಲು ಫ್ಲ್ಯಾನ್‌ ಮಾಡಿಕೊಳ್ಳುತ್ತಿದೆ.

ಕಳೆದ ಎರಡು ವರ್ಷಗಳಿಂದಲೂ ಕೋವಿಡ್‌ ಹೆಮ್ಮಾರಿ ಶೈಕ್ಷಣಿಕ ಚಟುವಟಿಕೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಬೋಧನೆ, ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮದ ಮೂಲಕ ಅಂತಿಮ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ನಡೆಸಲು ಸಾಧ್ಯವಾಗಿಲಿಲ್ಲ. ಆದರೆ ಈ ಬಾರಿ ಕೊರೊನಾ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿರುವ ಕಾರಣದಿಂದಾಗಿ ಶೈಕ್ಷಣಿಕ ಚಟುವಟಿಕೆ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ. ಬೆಂಗಳೂರು ಹೊರತು ಪಡಿಸಿದ್ರೆ ಉಳಿದ ಜಿಲ್ಲೆಗಳಲ್ಲಿ ಕೊರೊನಾ ನಡುವಲ್ಲೇ ಭೌತಿಕ ತರಗತಿಗಳು ನಡೆಯುತ್ತಿದೆ.

ಕೊರೊನಾ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಬಾರಿ ಪಠ್ಯದಲ್ಲಿ ಕಡಿತ ಮಾಡಿತ್ತು. ಈಗಾಗಲೇ ಬಹುತೇಕ ಶಾಲೆಗಳಲ್ಲಿ ಶೇ. 80ಕ್ಕೂ ಅಧಿಕ ಪಠ್ಯ ಚಟುವಟಿಕೆಯನ್ನು ನಡೆಸಲಾಗಿದ್ರೆ, ಕೆಲವು ಶಾಲೆಗಳಲ್ಲಿ ಪಠ್ಯ ಬೋಧನೆ ಪೂರ್ಣಗೊಂಡು, ಪುನರ್ಮನನ ತರಗತಿಗಳು ಆರಂಭಗೊಂಡಿವೆ. ಹೀಗಾಗಿ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಕೊರೊನಾ ಎಫೆಕ್ಟ್‌ ಅಷ್ಟೊಂದು ಪ್ರಮಾಣದಲ್ಲಿ ಬಾಧಿಸಿಲ್ಲ. ಪ್ರೌಢಶಾಲಾ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿವೆ. ಎಸ್‌ಎಸ್‌ಎಲ್‌ ಸಿ ಪರೀಕ್ಷೆಗಳು ಮಾರ್ಚ್‌ 28 ರಿಂದ ಆರಂಭಗೊಳ್ಳಲಿದ್ದು ಏಪ್ರಿಲ್ 11ರ ವರೆಗೆ ನಡೆಯಲಿದೆ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಗಳು ಏ.16 ರಂದು ಆರಂಭಗೊಂಡು ಮೇ 04ರ ವರೆಗೆ ನಡೆಯಲಿದೆ. ಈ ಬಾರಿ ಪರೀಕ್ಷೆಯಲ್ಲಿ ಯಾವುದೇ ರೀತಿಯಲ್ಲಿಯೂ ವಿನಾಯಿತಿ ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿಯೂ ಕೊರೊನಾ ಹೆಮ್ಮಾರಿ ಮಾರ್ಚ್‌, ಎಪ್ರೀಲ್‌ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಹೊಡೆತವನ್ನು ಕೊಟ್ಟಿತ್ತು. ಆದರೂ ಕಳೆದ ಬಾರಿ ಎಪ್ರೀಲ್‌ ಅಂತ್ಯದ ವರೆಗೆ ಶಾಲೆಗಳನ್ನು ನಡೆಸಲು ಸರಕಾರ ಮುಂದಾಗಿತ್ತು. ಹಲವು ಕಡೆಗಳಲ್ಲಿ ಬಿಸಿಲ ಆರ್ಭಟ, ಇನ್ನೂ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಜೊತೆಗೆ ಕೊರೊನಾ ಆರ್ಭಟ ವಿದ್ಯಾರ್ಥಿಗಳನ್ನು ತತ್ತರಿಸುವಂತೆ ಮಾಡಿತ್ತು. ಆದರೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮಾರ್ಚ್‌ನಲ್ಲಿಯೇ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಲ್ಲದೇ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿಗೂ ಮುನ್ನವೇ ಪರೀಕ್ಷೆಗಳನ್ನು ನಡೆಸಿ, ಬೇಸಿಗೆ ರಜೆ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಒಂದೊಮ್ಮೆ ಮಾರ್ಚ್‌ ತಿಂಗಳಲ್ಲೇ ಮಕ್ಕಳಿಗೆ ಬೇಸಿಗೆ ರಜೆಯನ್ನು ಘೋಷಣೆ ಮಾಡಿದ್ರೆ, ಕೊರೊನಾ ಸಂಕಷ್ಟವೂ ತಪ್ಪಲಿದೆ, ಜೊತೆಗೆ ಮುಂದಿನ ಶೈಕ್ಷಣಿಕ ವರ್ಷವನ್ನೂ ಜೂನ್‌ 1 ರಿಂದಲೇ ಆರಂಭಿಸಲು ಅನುಕೂಲವಾಗಲಿದೆ. ಮಾರ್ಚ್‌ನಲ್ಲಿ ಪರೀಕ್ಷೆ ಮುಗಿಸಿ ಫಲಿತಾಂಶವನ್ನು ಪ್ರಕಟಿಸಿದ್ರೆ, ಶಾಲೆಗಳಿಗೆ ದಾಖಲಾತಿ ಪ್ರಕ್ರೀಯೆ ನಡೆಸಲು ಅನುಕೂಲವಾಗಲಿದೆ. ಕಳೆದ ಸಾಲಿನಲ್ಲಿ ಎಪ್ರೀಲ್‌ ಅಂತ್ಯದ ವರೆಗೂ ಶೈಕ್ಷಣಿಕ ಚಟುವಟಿಕೆ ನಡೆದಿದ್ದರಿಂದ ಶಾಲೆಗಳ ದಾಖಲಾತಿಯ ಮೇಲೆ ಹೊಡೆತ ಬಿದ್ದಿತ್ತು. ಅಲ್ಲದೇ ಕೊರೊನಾ ಭೀತಿಯಿಂದಾಗಿ ಮುಂದಿನ ಶೈಕ್ಷಣಿಕ ಚಟುವಟಿಕೆ ನಡೆಯುತ್ತೋ ಇಲ್ಲವೋ ಅನ್ನುವ ಗೊಂದಲದಲ್ಲಿ ಪೋಷಕರು ಸಿಲುಕಿದ್ದರು. ಇದರಿಂದಾಗಿ ಖಾಸಗಿ ಶಾಲೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗಿತ್ತು. ಇದೆಲ್ಲವನ್ನೂ ಹೋಗಲಾಡಿಸುವ ನಿಟ್ಟಿನಲ್ಲಿಯೇ ಇಲಾಖೆ ಹೊಸ ಚಿಂತನೆಗೆ ಮುಂದಾಗಿದೆ ಎನ್ನಲಾಗುತ್ತಿದೆ.

ಇನ್ನು ಬೆಂಗಳೂರಲ್ಲಿ ಬಂದ್‌ ಆಗಿರುವ ಶಾಲೆಗಳು ಫೆಬ್ರವರಿ ಮೊದಲ ವಾರದಲ್ಲೇ ಆರಂಭವಾಗುವ ಸಾಧ್ಯತೆಯಿದೆ. ಶೀಘ್ರದಲ್ಲಿಯೇ ಬಾಕಿ ಉಳಿದ ಪಠ್ಯಗಳನ್ನು ಪೂರ್ಣಗೊಳಿಸುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡುವ ಸಾಧ್ಯತೆಯಿದೆ. ಒಂದು ತಿಂಗಳ ಅವಧಿಯಲ್ಲಿ ಪಠ್ಯವನ್ನು ಪೂರ್ಣಗೊಳಿಸಿ ಪರೀಕ್ಷೆಯನ್ನು ನಡೆಸಿದ್ರೆ, ಫಲಿತಾಂಶ ಪ್ರಕಟಿಸಲು ಸಹಕಾರಿಯಾಗಲಿದೆ. ಒಂದೊಮ್ಮೆ ಈ ಬಾರಿಯೂ ಕೊರೊನಾ ಹೆಮ್ಮಾರಿ ಆರ್ಭಟಿಸಿದ್ರೆ, ಪರೀಕ್ಷೆ ನಡೆಸಲು ಕಷ್ಟ ಸಾಧ್ಯವಾಗಬಹುದು ಅನ್ನೋದು ಶಿಕ್ಷಣ ಇಲಾಖೆಯ ಲೆಕ್ಕಾಚಾರ.

ಹಿಂದಿನಿಂದಲೂ ಮಾರ್ಚ್‌ನಲ್ಲಿಯೇ ಪರೀಕ್ಷೆಗಳು ಮುಕ್ತಾಯಗೊಂಡು ಎಪ್ರೀಲ್‌ 1 ರಿಂದಲೇ ಶಾಲೆಗಳಿಗೆ ರಜೆಯನ್ನು ನೀಡಲಾಗುತ್ತಿತ್ತು. ಆದರೆ ಕೆಲವು ವರ್ಷಗಳಿಂದಲೂ ಬೇಸಿಗೆ ರಜೆಯ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದೀಗ ರಾಜ್ಯ ಸರಕಾರ ಕೊರೊನಾ ಕಾರಣಕ್ಕೆ ಮಾರ್ಚ್‌ ತಿಂಗಳಿನಲ್ಲೇ ಪರೀಕ್ಷೆ ಮುಗಿಸಿ ರಜೆ ನೀಡುವ ಮೂಲಕ ಹಳೆಯ ಪದ್ದತಿಗೆ ಮರಳುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಕೊರೋನಾ ಭಯದ ನಡುವೆಯೂ ಪಿಯುಸಿ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿಯೇ ಅಂತಿಮ

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಧಿಕೃತ ವೇಳಾಪಟ್ಟಿ ಪ್ರಕಟ : ಯಾವ ವಿಷಯಕ್ಕೆ ಯಾವಾಗ ಪರೀಕ್ಷೆ

(Summer Vacation in March and schools start in June 1 in Karnataka)

Comments are closed.