SC On NEET-PG Admissions For 2021-22: ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿ: ಒಬಿಸಿ, ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿಹಿಡಿದ ಸುಪ್ರೀಂಕೋರ್ಟ್

ನವದೆಹಲಿ: ಸ್ನಾಕೋತ್ತರ ವೈದ್ಯಕೀಯ ಕೋರ್ಸ್(NEET-PG) ಪ್ರವೇಶಕ್ಕೆ(Admission) ತೊಡಕ್ಕಾಗಿದ್ದ ಇತರ ಹಿಂದುಳಿದ ವರ್ಗ (OBC) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಮೀಸಲಾತಿ ಕುರಿತ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್(Supreme Court) ಇತ್ಯರ್ಥ ಪಡಿಸಿದೆ. ಸರ್ಕಾರ ಒಬಿಸಿಗೆ ಕಲ್ಪಿಸಿದ್ದ ಶೇ. 27 ಮತ್ತು ಇಡಬ್ಲ್ಯೂಎಸ್‌ಗೆ ಕಲ್ಪಿಸಿದ್ದ ಶೇ. 10ರ ಮೀಸಲಾತಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಪಿಜಿ ಕೌನ್ಸಲಿಂಗ್‌ ನಡೆಯುವುದಕ್ಕೆ ಇದ್ದ ಅಡಚಣೆ ನಿವಾರಣೆ ಆಗಿದೆ. ಶೀಘ್ರ ಪಿಜಿ ಕೌನ್ಸಲಿಂಗ್‌ ದಿನಾಂಕವನ್ನು ಘೋಷಿಸಬೇಕು ಎಂದು ಉನ್ನತ ಶಿಕ್ಷಣ ಬಯಸಿದ ಸ್ಥಾನಿಕ ವೈದ್ಯರು ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.

ಹಿನ್ನೆಲೆ: ಕಳೆದ ಜುಲೈನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಒಬಿಸಿಗೆ ಶೇ. 27 ಮತ್ತು ಇಡಬ್ಲ್ಯೂಎಸ್‌ಗೆ ಶೇ. 10 ಮೀಸಲಾತಿ ಕಲ್ಪಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಆಗಿತ್ತು. ಇದರಿಂದ ನೀಟ್‌ ಬರೆದು ಸೀಟು ಹಂಚಿಕೆಗೆ ಕೌನ್ಸಲಿಂಗ್‌ ಎದುರು ನೋಡುತ್ತಿದ್ದ ಅಭ್ಯರ್ಥಿಗಳಿಗೆ ಸಮಸ್ಯೆ ಆಯಿತು. ಈ ಮಧ್ಯೆ, ಇಡಬ್ಲ್ಯೂಎಸ್ ವರ್ಗವನ್ನು ಗುರುತಿಸಲು ಸರ್ಕಾರ ನಿಗದಿ ಮಾಡಿದ್ದ ವಾರ್ಷಿಕ 8 ಲಕ್ಷ ರೂಪಾಯಿ ಆದಾಯ ಮಿತಿ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಪೀಠ ಪ್ರಶ್ನಿಸಿತು. ಈ ಆದಾಯ ಮಿತಿಯನ್ನು ನಿಗದಿ ಮಾಡಲು ಮಾನದಂಡವೇನು ಎಂದು ಸರ್ಕಾರವನ್ನು ಪ್ರಶ್ನಿಸಿತು. ಸರ್ಕಾರ ತಜ್ಞರ ಸಮಿತಿ ಶಿಫಾರಸಿನ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷದಲ್ಲಿ ಇದನ್ನು ಬದಲಿಸಲು ಆಗದು ಎಂದು ಅಫಿಡವಿಟ್‌ನಲ್ಲಿ ತಿಳಿಸಿತ್ತು. ಇದನ್ನು ಈಗ ಒಪ್ಪಿರುವ ಸುಪ್ರೀಂಕೋರ್ಟ್‌ ಮೀಸಲಾತಿಗೆ ಸಮ್ಮತಿಸಿದೆ.

ಪ್ರಧಾನಿ ಭದ್ರತಾ ಲೋಪ; ವಿರಳಾತಿವಿರಳ ಪ್ರಕರಣ
ನವದೆಹಲಿ: ಪಂಜಾಬ್‌(Punjab)ನ ಭಂಟಿಡಾದಿಂದ ಫಿರೋಜ್‌ಪುರ್‌ಗೆ ರಸ್ತೆ ಮಾರ್ಗದಲ್ಲಿ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಕಾರು ಮತ್ತು ಬೆಂಗಾವಲು ವಾಹನಗಳು ರೈತರ ಪ್ರತಿಭಟನೆ ಕಾರಣ ಸಂಚರಿಸಲು ಆಗದೆ ಫ್ಲೈ ಓವರ್‌ನಲ್ಲಿ 20 ನಿಮಿಷ ನಿಂತು ಎದುರಾದ ಭದ್ರತಾ ಲೋಪವನ್ನು (PM Narendra Modi Security Lapse in Punjab)  ವಿರಳಾತಿವಿರಳ (Rarest of the Rare) ಪ್ರಕರಣ ಎಂದು ಸುಪ್ರೀಂಕೋರ್ಟ್‌ (Supreme Court) ಹೇಳಿದೆ.

ಪ್ರಧಾನಿಗೆ ಎದುರಾದ ಭದ್ರತಾ ಲೋಪದ ಪ್ರಕರಣ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು. ಮುಂದೆ ಈ ರೀತಿ ಲೋಪಗಳು ಉಂಟಾಗದಂತೆ ಸರ್ಕಾರಗಳು ಎಚ್ಚರಿಕೆ ವಹಿಸಬೇಕು ಎಂದು ಕೋರಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಇದರ ತುರ್ತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ, ಸಾಂವಿಧಾನಿಕ ಹುದ್ದೆಯಲ್ಲಿರುವ ದೇಶದ ಮುಖ್ಯಸ್ಥರ ಭದ್ರತೆಯಲ್ಲಿ ಆಗಿರುವ ಲೋಪವು ವಿರಳಾತಿವರಳ ಪ್ರಕರಣ ಎಂದು ಹೇಳಿದೆ.ಈ ಮಧ್ಯೆ, ಪಂಜಾಬ್ ಸರ್ಕಾರ ಭದ್ರತಾ ಲೋಪ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು; ತನಿಖೆ ನೇಮಿಸಿರುವ ತಂಡವು ಮೂರು ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಪಂಜಾಬ್ ಸರ್ಕಾರ ಕೇಂದ್ರಕ್ಕೆ ತಿಳಿಸಿದೆ.

ಇದನ್ನೂ ಓದಿ: PM Kisan Samman Nidhi : ಕಿಸಾನ್ ಸಮ್ಮಾನ್ ನಿಧಿ: ಪ್ರಧಾನಿ ಮೋದಿ ಹಾಕಿದ ಹಣ ಬಂತಾ ಎಂದು ಚೆಕ್ ಮಾಡುವುದು ಹೇಗೆ?

(Supreme Court allows NEET PG Counselling for 2021 2022 based on existing EWS OBC reservation)

Comments are closed.