ಮತ ಕೇಳಲು ಬರುವವರ ಈ ಮಾತು ಕತೆಯಾಗಿಯೇ ಉಳಿಯುವುದು…

(Election Funny campaign) ಮತ್ತೆ ಬಂದಿದೆ ಚುನಾವಣೆ. ದೂರವಿದ್ದವರೆಲ್ಲ ಹತ್ತಿರವಾಗುತ್ತಿದ್ದಾರೆ. ಅಣ್ಣ, ತಮ್ಮ, ಅಕ್ಕ, ತಂಗಿ, ಮಾಮ, ತಾಯಿ ಸಮಾನ, ತಂದೆ ಸಮಾನ, ನಮ್ಮ ನೆಂಟರು, ಇವರು ನನಗೆ ಭಾವ ಆಗುತ್ತೆ, ನನ್ನ ಪಾಲಿನ ದೇವರು…ನಿಮ್ಮ ಮನೆಯವ ..ನಿಮ್ಮ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿರುವೆ,. ಈ ಸಲ ಒಂದು ಉಪಕಾರ ಮಾಡಿ… ಮೊದಲಾದ ಪದಗಳು ಜನಪ್ರತಿನಿಧಿಗಳು ಹಾಗೂ ಅವರ ಹಿಂಬಾಲಕರ ನಾಲಗೆಯ ಮೇಲೆ ಲಾಸ್ಯವಾಡಲಿವೆ. ಅನಿರೀಕ್ಷಿತ ಭೇಟಿಗಳು, ನಿರಂತರ ಮಾತುಕತೆ, ಮದುವೆ, ಮಸಣ ಎಲ್ಲವೂ ಪ್ರಮುಖವಾಗುತ್ತಿದೆ. ಕೆಣಕುವ ಆಸೆಗಳು, ಜೀವ ಪಡೆಯುವ ಹೊಸ ಭರವಸೆಗಳು, ತ್ವರಿತಗತಿಯಾಗಿ ಮುಗಿಯುವ ಕಾಮಗಾರಿಗಳು, ಕಂಡಕಂಡಲ್ಲಿ ಶಿಲಾನ್ಯಾಸಗಳು, ಗುದ್ದಲಿ ಪೂಜೆಗಳು, ಬಾಡೂಟ, ಗುದ್ದಾಟ, ಗುಂಡೇಟು, ಬಹಳ ಕಾಲದಿಂದ ದೂರವಾಗಿದ್ದ ಪತಿ ಪತ್ನಿಯರು ಮತ್ತೊಮ್ಮೆ ಒಂದಾಗುವ ರೀತಿಯಲ್ಲಿ ಬೆಸೆಯುವ ಗೆಳೆತನ.

ವಾಹನಗಳೇ ಚಲಿಸದ ರಸ್ತೆಗೆ ಕಾಂಕ್ರೀಟು, ನಳ್ಳಿ ಹಾಕದಿದ್ದರೂ ಉದ್ಘಾಟನೆಗೊಂಡ ನೀರಿನ ಟ್ಯಾಂಕ್‌. ಕೈ ಎತ್ತಿದರೆ ಕಾಂಗ್ರೆಸ್‌ ಅಭಿಮಾನಿ, ಕೇಸರಿ ಅಂಗಿ ಧರಿಸಿದವನಿಗೆ ಬಿಜೆಪಿ ಪಟ್ಟ, ಓಟು ಹಾಕುವುದಿಲ್ಲ ಎಂದು ಗೊತ್ತಿದ್ದರೂ ಮತ್ತೊಮ್ಮೆ ಮನೆಗೆ ಭೇಟಿ, ಒಮ್ಮೆಯೂ ಮನೆಗೆ ಬಾರದವರು ದಿನವೂ ಬಂದವರಂತೆ ನಟನೆ, ಅವರಾ ಗೊತ್ತು ಬಿಡಿ, ಇವರಾ ಗೊತ್ತು ಬಿಡಿ, ನಮ್ಮ ದೊಡ್ಡಮ್ಮನ ತಂಗಿಯ ಹೆಂಡತಿಯ ತಮ್ಮ ಗೊತ್ತು ಬಿಡಿ, ಅದು ನಾನೇ ಮಾಡಿದ್ದು, ಇದು ನಾನೇ ಮಾಡಿದ್ದು, ಹಿಂದೆ ಕಸದಂತೆ ಕಂಡರೂ ಈಗ ಕಾಲಿಗೆ ಬೀಳುವರು, ನೂರರ ಅಜ್ಜಿಗೂ ಎಲ್ಲಿಲ್ಲದ ಡಿಮಾಂಡು, ಬೆಂಗಳೂರಿನಲ್ಲಿರುವವರಿಗೆ ನಿಂತಲ್ಲೇ ಒಂದು ಕರೆ, “ಅಮ್ಮನಿಗೆ ಹೇಳಿದ್ದೆ ಮರೆಯಬೇಡ” ಎಂಬ ವಿನಂತಿ. ಮೇಸ್ಟ್ರಿಗೆ ಕರೆ ಮಾಡಿ ನಿಮ್ಮ ಹಳೆ ವಿದ್ಯಾರ್ಥಿಗಳಿಗೆ ಹೇಳಿ, ಚಿಕ್ಕ ಮಗುವಿನ ಕೈಗೊಂದು ನೂರು ರೂಪಾಯಿ ನೋಟು, ಪೇಟಿಯಲ್ಲಿ ಸಿಕ್ಕವರಿಗೆ ಎಣ್ಣೆಗೊಂದು ನೆರವು, ದೇವರ ದರುಶನದಲ್ಲೂ ಪಾತ್ರಿಯಿಂದ ಆಶೀರ್ವಾದ.

ಚುನಾವಣೆಗೆ ಮುನ್ನ ಮದುವೆಗೆ ಹೇಳಿದರೆ ಬಾರದವರು, ಈಗ ಯಾವ ಮದುವೆ ಇದ್ದರೂ ಹಾಜರ್‌. ಊಟದ ಸರದಿಯಲ್ಲಿ ಕೈಮುಗಿದು, “ಆರಾಮ ಇದ್ದೀರಾ?” ಎಂಬ ಕಾಳಜಿಯ ಮಾತು. ನಿರುದ್ಯೋಗಿಗೆ “ನಿನ್ನದೊಂದು ರೆಸ್ಯೂಮ್‌ ಕೊಡು, ಮಾತನಾಡುವೆ,” ಎಂಬ ಹುಸಿ ಬರವಸೆ. ಎಂದೂ ಸರ್ವಿಸ್‌ ರೋಡಿಗೆ ಇಳಿಯದ ಇನೋವಾ, ಬೆಂಝ್‌, ಆಡಿ ಕಾರುಗಳಿಗೆ ಒಳ ದಾರಿಯ ಭಾಗ್ಯ. ಕ್ರಿಕೆಟ್‌ ಮ್ಯಾಚ್‌ಗೆ ಯಾರಿಗೂ ತಿಳಿಯದಂತೆ ಪ್ರಾಯೋಜಕತ್ವ, ಗುತ್ತಿಗೆದಾರರೊಂದಿಗೆ ನಿರಂತರ ಸಂಪರ್ಕ, ಬಾರ್‌ ಬಿಲ್ಲಿಗೆ ಎಲ್ಲಿಂದಲೋ ಪೇಮೆಂಟ್‌, ಹಳೆ ದ್ವೇಶಕ್ಕೆ ತಾಲ್ಕಾಲಿಕ ತೆರೆ, ಸಮಾಜ ಸೇವೆ, ಬಡವರಿಗೆ ನನಗೆ ಮೊದಲ ಆದ್ಯತೆ, ಹತ್ಯೆಗೀಡಾದವನ ಮನೆಗೆ ನಿತ್ಯವೂ ಭೇಟಿ, ಅಭ್ಯರ್ಥಿಯ ಆಪ್ತ ಸಹಾಯಕನಿಗೆ ಎಲ್ಲಿಲ್ಲದ ಡಿಮ್ಯಾಂಡ್‌, ಇನ್‌ ಶರ್ಟ್‌ ಮಾಡಿ ಶೂ ಧರಿಸಿದರೆ ಶಿಸ್ತಿನ ಮನುಷ್ಯ, ಆನ್‌ ಶರ್ಟ್‌ ಮಾಡಿ ಚಪ್ಪಲಿ ಹಾಕಿದರೆ ಸರಳ ಸಜ್ಜನ, ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿ ಮಾತನಾಡಿದಿಸರೆ, “ಎಷ್ಟು ಒಳ್ಳೆಯವರು ನೋಡಿ”, ಹಾಗೆ ಹೊರಟು ಹೋದರೆ, “ಎಂಥ ಅಹಂಕಾರ ನೋಡಿ,”. ಕಾಂಗ್ರೆಸ್‌ನಲ್ಲಿ ಇದ್ದ ಈಗ ನೋಡಿ ಬಿಜೆಪಿಯಲ್ಲಿ, ಬಿಜೆಪಿಯಲ್ಲಿದ್ದ ಈಗ ನೋಡಿ ಕಾಂಗ್ರೆಸ್‌, ಎಲ್ಲ ಪಕ್ಷ ಆಯ್ತು ನೋಡಿ ಈಗ ಜೆಡಿಎಸ್‌ನಲ್ಲಿ.

ಅವರು ಬಿಡಿ ನ್ಯೂಟ್ರಲ್‌, ಅವರು ರಾಮ ಭಕ್ತ, ಅವರು ಕೃಷ್ಣನ ಭಕ್ತ. ಒಂದು ಮಾತು ಹೇಳಿದರೆ ಸಾಕು ನೂರಾರು ಜನರ ಸಾಲು ನಿಲ್ಲುತ್ತಾರೆ, ಅವನ ಸ್ವಲ್ಪ ನೋಡಿಕೊಳ್ಳಿ, ಅವರ ಮನೆಯಲ್ಲಿ ಒಟ್ಟು 25 ಓಟು ಇದೆ, ಅವರ ಅಪ್ಪ ಹೇಳಿದ್ರೆ ಮುಗಿಯಿತು, ಅವರ ಅಣ್ಣ ನನಗೆ ತುಂಬಾ ಕ್ಲೋಸ್‌, ಅವರ ಅಕ್ಕನಿಗೆ ಟ್ರಾನ್ಸ್‌ಫರ್‌ ಮಾಡಿದ್ದು ನಾನೇ, ಅವರಿಗೆ ಪ್ರಮೋಷನ್‌ ಕೊಟ್ಟಿದ್ದು ನಾನೇ, ಅವರ ಅಪ್ಪ ಆಸ್ಪತ್ರೆಯಲ್ಲಿದ್ದಾಗ ಡಾಕ್ಟರಿಗೆ ಫೋನ್‌ ಮಾಡಿ ಬಿಲ್‌ನಲ್ಲಿ ಕಡಿಮೆ ಮಾಡಿಸಿದ್ದು ನಾನೇ, ಅವರ ದೇವಸ್ಥಾನದ ಜೀರರ್ಣೋದ್ಧಾರಕ್ಕೆ ಹೆಚ್ಚು ಅನುದಾನ ನೀಡುವಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು, ಇನ್ನೂ ಬೇಕಾದರೂ ಹಣ ಬಿಡುಗಡೆ ಮಾಡಿಸುವೆ.

ನಿಮ್ಮನ್ನು ಎಸ್‌ಸಿ ಎಸ್‌ಟಿ ಮಾಡಿದ್ದು ನಾನೇ, ನಿಮ್ಮನ್ನು ಒಬಿಸಿ ಮಾಡಿಸಿದ್ದು ನಾನೇ, ನಾವೆಲ್ಲ ಒಂದೇ ಮನೆಯವರಾಗಿರುವಾಗ ಸ್ಪರ್ಧೆ ಯಾಕೆಂಬುದು ನನ್ನ ನಿಲುವು, ಆದರೆ ನಿಮ್ಮ ಒತ್ತಾಯಕ್ಕೆ ಮಣಿದಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಸಕ್ತಿ ಇರಲಿಲ್ಲ, ಆದರೆ ನೀವೆಲ್ಲ ಒತ್ತಾಯ ಮಾಡಿದ್ದಕ್ಕೆ ನಿಂತಿದ್ದೇನೆ, ನಾನು ಹಣ ಮಾಡುವುದಕ್ಕಾಗಿ ಸ್ಪರ್ಧಿಸುತ್ತಿಲ್ಲ, ಗೆದ್ದು ನನಗೇನೂ ಆಗಬೇಕಾಗಿಲ್ಲ, ಜನರ ಸೇವೆ ಮಾಡಬೇಕು ಅಷ್ಟೆ, ರಾಜಕೀಯದಿಂದಾಗಿ ನಾನು ಕೋಟ್ಯಂತರ ರೂ. ಕಳೆದುಕೊಂಡೆ, ಸಾಲ ಮಾಡಿ ಮನೆ ಕಟ್ಟಿದೆ, “ಅವರು ದನ ತಿಂದರೆ ಅದು ಅವರ ಆಹಾರದ ಕ್ರಮ, ಅವರು ಹಿಂದೂ ವಿರೋಧಿ ನಿಜ, ಚುನಾವಣೆ ಮುಗಿಯುವವರೆಗೂ ಸುಮ್ಮನಿರಿ, ಅವತ್ತು ಅವನು ಅರೆಸ್ಟ್‌ ಆದಾಗ ಇನ್‌ಸ್ಪೆಕ್ಟರ್‌ ಜೊತೆ ಮಾತನಾಡಿ ಆರೋಪಿಗಳ ಪಟ್ಟಿಯಿಂದ ಹೆಸರು ತೆಗೆಸಿದ್ದು ನಾನೇ, ಅಪ್ಪನಿಗೆ ಕೇಸಿನಲ್ಲಿ ಬೇಲ್‌ ಕೊಡಿಸಿದ್ದೆ, ನಮ್‌ ಜಾತಿಯವರೆಲ್ಲ ಒಂದಾಗಬೇಕು, ಅವರದ್ದು ಸಣ್ಣ ಜಾತಿ ಹೇಗೂ ಬದಲಾಯಿಸಬಹುದು, ಓಟ್‌ ಹಾಕಿಲ್ಲ ಅಂದ್ರೆ ಏನ್‌ ಮಾಡಬೇಕಂತ ಗೊತ್ತು, ಅವನ ಹಳೆ ಕೇಸ್‌ ಓಪನ್‌ ಮಾಡಿಸುವೆ, ಅವತ್ತು ಗೆದ್ದು ಹೋದವ ಈಗ ಬಂದ, ಅವಳು ನಮ್ಮ ಊರನ್ನೇ ಮರೆತಿದ್ದಾಳೆ ಈಗ ಬರಲಿ,.. ನಿಮ್‌ ಫೈಲು ಸಿಎಂ ಹತ್ರ ಇದೆ, ಈ ಚುನಾವಣೆ ಬಳಿಕ ಫೈನಲ್‌ ಆಗುತ್ತೆ, ಚುನಾವಣೆ ಒಂದ್‌ ಮುಗಿಲಿ ನಾನ್‌ ನಿಮ್ಮ್‌ ಜೊತೆ ಇದ್ದೆ.

“ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ್ರೆ ಏನಾಯ್ತು? ಅವರು ಮನುಷ್ಯರಲ್ವ, ಗ್ಯಾಸ್ ಬೆಲೆ ಜಾಸ್ತಿಯಾಯ್ತು ನಿಜ, ಈ ಸಲ ಅಧಿಕಾರಕ್ಕೆ ಬಂದರೆ ಕಡಿಮೆ ಮಾಡುತ್ತೇವೆ, ಇದಕ್ಕೆಲ್ಲ ಕಾಂಗ್ರೆಸ್‌ ಕಾರಣ. ಈ ಸಲ ಒಂದ್‌ ಚೇಂಜ್‌ ಆಗಬೇಕು. ಎಲ್ಲ ನಿಮ್ಮ ಕೈಯಲ್ಲಿದೆ. ಅವತ್ತು ಅಬ್ದುಲ್‌ ಸಾಹೇಬರೇ ನನ್ನ ಸೈಕಲ್‌ಗೆ ಪಂಚರ್‌ ಹಾಕಿದ್ದು, ಪುಣ್ಯಾತ್ಮ, ನಿಮ್ಮೂರಲ್ಲಿರುವ ಅನ್ಯೋನ್ಯತೆ ಬೇರೆಲ್ಲೂ ಇಲ್ಲ, ಬುರ್ಕಾ ಇರ್ಲಿ ಬಿಡಿ, ಅದ್‌ ನಿಮ್‌ ಸಂಪ್ರದಾಯ ನಾನೇನಾದ್ರೂ ಬೇಡ ಅಂದಿನಾ?, ನಿಮ್ದ್‌ ಆರ್‌ಟಿಸಿ ಸಿಗ್ತಾ? ನಾನೇ ತಹಶಿಲ್ದಾರರಿಗೆ ಒಂದ್‌ ಫೋನ್‌ ಮಾಡಿ ಹೇಳಿದ್ದು.” “ಕಲ್‌ ಕ್ವಾರಿ ಹ್ಯಾಂಗಿತ್‌ ಅಡ್ಡಿಲ್ಲ ಅಲ್ದಾ?, ಮರಳು ಸಿಗತ್ತಲ್ದಾ?, ನಿಮ್ದ್‌ ಸೀಜ್‌ ಆದ್‌ ಗಾಡಿ ಬಿಡುಕ್‌ ಹೇಳಿದಿ, ಆ ಹಳೆಯ ಕೇಸು ತೆಗೆಸಿ ಒಂದಾಗಿ, ಪಾಪ ಮಗನ್‌ ಕಳೆದುಕೊಂಡ ನೋವು ನನಗೂ ಇದೆ, ನಿಮ್‌ ಮಗ ಬೇರೆ ಅಲ್ಲ ನಮ್‌ ಮಗ ಬೇರೆ ಅಲ್ಲ. (ನಿಮ್‌ ಮಗ ಸತ್ತು ಹೋದ, ನನ್‌ ಮಗ ಫಾರಿನ್‌ನಲ್ಲಿದ್ದ).

“ ಆ ಕಾರಲ್ಲಿ ಯಾರಿದ್ರ?, ಮುಟ್ಟಿತಲ್ದ?, ಬಿಲ್‌ ನಾ ಕೊಡುವೆ ಅನ್ನು, ಸಂತು ಒಂದ್‌ ಐದ್‌ ಸಾವಿರ ಆತ ಹೇಳುವ ನಂಬರಿಗೆ ಗೂಗಲ್‌ ಪೇ ಮಾಡು, ಬಾಸ್‌ ಊರಲ್ಲಿಲ್ಲ, ಫೀಲ್ಡಲ್ಲಿದ್ದಾರೆ, ಸೋಮವಾರ ಬನ್ನಿ, ಇಲ್ಲ ಅವರೇ ಮಂಗಳವಾರ ಬರ್ತಾರೆ. ಹಲೋ ಮೊನ್ನೆ ಮನಿಗ್‌ ಬಂದಿದ್ದೆ, ನೀವ್‌ ಇರ್ಲಿಲ್ಲ, ಈ ಸಲ ಒಂದ್‌ ಕೈ ಬಿಡ್‌ಬ್ಯಾಡಿ, ಯೋಚನೆ ಮಾಡ್ಲಿಕ್ಕೆ ಟೈಮ್‌ ಇಲ್ಲ. ನಾಳೆ ಸಂಜೆ ನಮ್‌ ಹುಡುಗರು ಬರ್ತಾರೆ ಮನೆಗೆ….. ದೇವ್ರಾಣೆ ನಿಮ್‌ ಕೈ ಬಿಡೊಲ್ಲ, ನೀವ್‌ ನಮ್‌ ಕೈ ಬಿಡಬೇಡಿ,”…..
ಫಲಿತಾಂಶದ ಮರುದಿನ..
“ಅವ್ರ್‌ ಫೋನ್‌ ಎತ್ತಾ ಇಲ್ಲ ಮರ್ರೆ……..”

ಇದನ್ನೂ ಓದಿ : ತಂದೆ ತಾಯಿಯನ್ನು ಕಳೆದುಕೊಂಡ ನೋವಿನಲ್ಲೇ ಚುನಾವಣಾ ಪ್ರಚಾರಕ್ಕಿಳಿದ ದರ್ಶನ್‌ ಧ್ರುವನಾರಾಯಣ್‌

ಬರಹ : ಸೋಮಶೇಖರ್‌ ಪಡುಕರೆ

Election Funny campaign: This speech of those who come to ask for votes will remain a story…

Comments are closed.