Hassan ticket fight : ಟಿಕೆಟ್ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ : ಹಾಸನಕ್ಕಾಗಿ ಹೊಸತಂತ್ರ ಹೂಡಿದ ಎಚ್.ಡಿ.ರೇವಣ್ಣ

ಹಾಸನ : (Hassan ticket fight) ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದಾಗಿನಿಂದ ಕುತೂಹಲ ಮೂಡಿಸಿರುವ ಕ್ಷೇತ್ರ ಹಾಸನ. ದೊಡ್ಡಗೌಡ್ರ ಕುಟುಂಬದಲ್ಲೇ ಒಡಕು ಮೂಡಿಸಿರುವ ಈ ಕ್ಷೇತ್ರದ ಟಿಕೇಟ್ ಘೋಷಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಮಧ್ಯೆ ಹಾಸನ ಟಿಕೇಟ್ ಫೈಟ್ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸೋಮವಾರ ರಾತ್ರಿ ದೇವೇಗೌಡರನ್ನು ಭೇಟಿ ಮಾಡಿದ ರೇವಣ್ಣ ತಮ್ಮ‌ಕೊನೆಯ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣರನ್ನು ಕಣಕ್ಕಿಳಿಸಿ ಗೆಲ್ಲಿಸಿ ತಮ್ಮ ಕುಟುಂಬಕ್ಕೆ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳೋದು ರೇವಣ್ಣನವರ ಆಸೆ. ಆದರೆ ಕುಟುಂಬದಿಂದ ಇನ್ಯಾರೂ ಕಣಕ್ಕಿಳಿಯಲ್ಲ.‌ಕಾರ್ಯಕರ್ತರಿಗೆ ಟಿಕೇಟ್ ಎಂದಿರೋ ಮಾತು ಉಳಿಸಿ ಕೊಳ್ಳಬೇಕೆಂಬ ಒತ್ತಡ ಎಚ್.ಡಿ.ಕುಮಾರಸ್ವಾಮಿಯವರಿಗೆ. ಈ ಆಂತರಿಕ ಕಲಹದಿಂದಾಗಿ ಜೆಡಿಎಸ್ ಪಾಲಿಗೆ ಹಾಸನ ಟಿಕೇಟ್ ಕಗ್ಗಂಟಾಗಿ ಪರಿಣಮಿಸಿದೆ.

ಈ ಮಧ್ಯೆ ರೇವಣ್ಣನವರು ಪತ್ನಿ ಭವಾನಿಗೆ ಟಿಕೇಟ್ ಕೊಡಿಸಲೇಬೇಕೆಂದು ಪಟ್ಟು ಹಿಡಿದಿದ್ದು, ಇದಕ್ಕಾಗಿ ಕೊನೆಯ ಅಸ್ತ್ರ ಎಂಬಂತೆ ಮತ್ತೊಮ್ಮೆ ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿ ದೊಡ್ಡಗೌಡರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರಂತೆ. ಮಾತ್ರವಲ್ಲ ಟಿಕೆಟ್ ನೀಡಲೇಬೇಕೆಂದು ಒತ್ತಡ ಹೇರಿದ್ದಾರಂತೆ. ಆದರೆ ಮೂಲಗಳ ಮಾಹಿತಿ ಪ್ರಕಾರ ರೇವಣ್ಣನವರು ಹೊಸತೊಂದು ತಂತ್ರದೊಂದಿಗೆ ದೇವೇಗೌಡರನ್ನು ಭೇಟಿ ಮಾಡಿ ಮನವೊಲಿಸಿದ್ದಾರಂತೆ.

ಶತಾಯ ಗತಾಯ ಪತ್ನಿಯನ್ನು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿಸಿ ಶಾಸಕಿಯಾಗಿಸುವ ಕನಸಿನಲ್ಲಿರೋ ರೇವಣ್ಣ ಇದಕ್ಕಾಗಿ ಸಖತ್ ಪ್ಲ್ಯಾನ್ ಮಾಡಿದ್ದಾರಂತೆ. ಥೇಟ್ ಎಚ್ಡಿಕೆಯಂತೆ ಪ್ಲ್ಯಾನ್ ಮಾಡಿರೋ ರೇವಣ್ಣ ಭವಾನಿಗೆ ಟಿಕೇಟ್ ನೀಡದಿದ್ದರೂ ಪರವಾಗಿಲ್ಲ. ಬದಲಾಗಿ ತಮಗೆ ಎಚ್ಡಿಕೆ ಮಾದರಿಯಲ್ಲೇ ಎರಡು ಕಡೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರಂತೆ. ಹಾಸನ ಹಾಗೂ ಹೊಳೆ‌ನರಸೀಪುರ ಎರಡು ಕಡೆಗೆ ನಾನೇ ಸ್ಪರ್ಧಿಸುತ್ತೇನೆ ಎಂದು ದೇವೇಗೌಡರ ಬಳಿ ರೇವಣ್ಣ ಪಟ್ಟು ಹಿಡಿದಿದ್ದಾರಂತೆ.

ಇದನ್ನೂ ಓದಿ : JDS Guarantee : ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂ ಅನುದಾನ

ಎರಡೂ ಕ್ಷೇತ್ರದಿಂದ ಗೆದ್ದು ಬಳಿಕ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿ, ಬೈ ಎಲೆಕ್ಷನ್ ನಲ್ಲಿ ಪತ್ನಿಯನ್ನು ಗೆಲ್ಲಿಸಿಕೊಳ್ಳೋದು ರೇವಣ್ಣ ಮಾಸ್ಟರ್ ಪ್ಲ್ಯಾನ್. 2018 ರಲ್ಲಿ ಪತ್ನಿಯನ್ನು ರಾಜಕೀಯಕ್ಕೆ ತರಲು ಸ್ವತಃ ಎಚ್ಡಿಕೆ ಕೂಡ ಇದೇ ಪ್ಲ್ಯಾನ್ ಮಾಡಿದ್ದರು. ಎಲ್ಲಾ ವಿಚಾರದಲ್ಲೂ ಕುಮಾರಸ್ವಾಮಿ ಗೆ ಟಕ್ಕರ್ ಕೊಡಲು ಮುಂದಾಗಿರೋ ರೇವಣ್ಣ ಹಾಗೂ ಕುಟುಂಬ ಅದಕ್ಕಾಗಿಯೇ ಎರಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರಂತೆ. ಇನ್ನೂ ರೇವಣ್ಣ ಹಾಗೂ ಎಚ್ಡಿಕೆ ನಡುವೆ ಸಮತೋಲನ ಹಾಗೂ ಕುಟುಂಬದ ಶಾಂತಿ ಕಾಪಾಡಲು ದೇವೇಗೌಡರು ಕೂಡ ರೇವಣ್ಣ ಮನವಿಗೆ ಒಕೆ ಎಂದಿದ್ದಾರಂತೆ. ಹೀಗಾಗಿ ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಖುಷಿಯಲ್ಲಿ ಮಾತನಾಡಿದ ರೇವಣ್ಣ, ಹಾಸನ ಟಿಕೇಟ್ ಫೈನಲ್ ಮಾಡೋದು ದೇವೇಗೌಡರು ಅವರ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದಾರೆ.

Hassan ticket fight : Tong to HD Kumaraswamy on the ticket issue : HD Revanna made a new strategy for Hassan

Comments are closed.