ಕೊರೊನಾ ಎಷ್ಟು ಡೇಂಜರಸ್ ಗೊತ್ತಾ ?

0

ಕೊರೊನಾ…ಈ ಹೆಸರು ಕೇಳಿದ್ರೆ ಸಾಕು ವಿಶ್ವದ ಜನರೇ ಬೆಚ್ಚಿ ಬೀಳ್ತಾರೆ. ಚೀನಾ ದೇಶದಲ್ಲಿ ಮರಣ ಮೃದಂಗವನ್ನು ಬಾರಿಸಿದ್ದು, ಇತರ ದೇಶಗಳಿಗೆ ಕೊರೊನಾ ವೈರಸ್ ಹರಡೋ ಭೀತಿ ಎದುರಾಗಿದೆ. ಅಷ್ಟಕ್ಕೂ ಈ ಕೊರೊನಾ ಎಂದರೇನು ? ಕೊರೊನಾ ವೈರಸ್ ಹೇಗೆ ಹರುತ್ತೆ ? ಕೊರೊನಾ ಎಷ್ಟು ಡೇಂಜರಸ್ ಅನ್ನೋ ಮಾಹಿತಿ ಇಲ್ಲಿದೆ.

ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದ ವಿನ್ಯಾಸವಿರೋದ್ರಿಂದಲೇ ಕೊರೊನಾ ಅಂತಾ ಹೆಸರಿಡಲಾಗಿದೆ. ಕೊರೊನಾ ವೈರಸ್ (ತೀವ್ರ ಉಸಿರಾಟದ ಸಿಂಡ್ರೋಮ್- ಎಸ್ಎಆರ್ಎಸ್) ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ಗೆ 2019-ಎನ್ಸಿಓವಿ ಎಂದು ನಾಮಕರಣ ಮಾಡಿದೆ. ಈ ವೈರಸ್ ದೇಹಕ್ಕೆ ಸೇರಿದರೆ ನ್ಯೂಮೊನಿಯಾ ಮತ್ತಿತರ ಉಸಿರಾಟದ ತೊಂದರೆಗಳು ಉಂಟಾಗುತ್ತವೆ. ಕೊರೊನಾ ವೈರಸ್ ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಆದ್ರೆ ಕೆಲವು ವೈರಸ್ ಗಳು ಮಾನವನ ಮೇಲೆಯೂ ಪರಿಣಾಮ ಬೀರುತ್ತದೆ. ಸಾಮಾನ್ಯ ಶೀತದಂತೆ ಕಾಣಿಸಿಕೊಳ್ಳುವ ಕೊರೊನಾ ಶ್ವಾಸಕೋಶದ ಸೋಂಕನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ತೀವ್ರ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ನ್ನು ಉಂಟು ಮಾಡಿ ಜೀವಕ್ಕೆ ಆಪತ್ತು ತರುತ್ತದೆ. ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಕೊರೊನಾದಲ್ಲಿ ಹಲವು ಬಗೆಗಳಿವೆ. ಅದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಗಳು ಕೂಡ ಕೊರೊನಾ ಜಾತಿಗೆ ಸೇರಿದೆ.

ಹರಡುವ ಬಗೆ ಹೇಗೆ ?
ಕೊರೊನಾ ವೈರಸ್ ಸಾಮಾನ್ಯವಾಗಿ ನಾಯಿ, ಬೆಕ್ಕುಗಳು, ಹಾವು, ಬಾವಲಿ ರೀತಿಯ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಕೊರೊನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಬಹುಬೇಗನೆ ಹರಡುತ್ತದೆ. ಸೋಂಕಿತ ವ್ಯಕ್ತಿಗಳು ಸೀನಿದಾಗ ಅಥವಾ ಕೆಮ್ಮಿದಾಗ ಕೊರೊನಾ ವೈರಸ್ ಹರಡೋ ಸಾಧ್ಯತೆಯಿದೆ. ಇನ್ನು ದೈಹಿಕ ಸಂಪರ್ಕದಿಂದಲೂ ವೈರಸ್ ಹರಡುತ್ತೆ. ಅಷ್ಟೇ ಯಾಕೆ ಸೊಂಕಿತ ವ್ಯಕ್ತಿಯನ್ನು ಸ್ಪರ್ಶಿಸಿದ್ರೆ, ಇಲ್ಲಾ ಹಸ್ತಲಾಘವ ಮಾಡಿದ್ರೂ ಸಾಕು ವೈರಸ್ ನಿಮ್ಮ ದೇಹವನ್ನು ಹೊಕ್ಕಿ ಬಿಡುತ್ತೆ. ಇನ್ನು ವೈರಸ್ ಇರೋ ವಸ್ತುಗಳನ್ನು ಮುಟ್ಟುವುದರಿಂದಲೂ ಕೊರೊನಾ ಕಾಣಿಸಿಕೊಳ್ಳುತ್ತದೆ. ಸಣ್ಣ ಮಕ್ಕಳಲ್ಲಿ ಕೊರೊನಾ ಬಹುಬೇಗನೆ ಕಾಣಿಸಿಕೊಳ್ಳುತ್ತದೆ.

ಯಾವ ಲಕ್ಷಗಳು ಕಾಣಿಸಿಕೊಳ್ಳುತ್ತವೆ ?
ಕೊರೊನಾ ಸೋಂಕು ದೇಹದಲ್ಲಿ ಉಂಟಾಗಿದ್ರೆ ಆರಂಭದಲ್ಲಿ ಶೀತ ಕಾಣಿಸಿಕೊಳ್ಳಲಿದೆ. ನಂತರ ಮೂಗು ಸೋರುವುದಕ್ಕೆ ಶುರುವಾಗುತ್ತೆ. ಅತೀಯಾದ ತಲೆನೋವು, ಕೆಮ್ಮು, ಗಂಟಲು ನೋವು, ಜ್ವರ ಕಾಣಿಸಿಕೊಂಡು ತೀವ್ರ ತರಹದ ಅನಾರೋಗ್ಯ ಸಮಸ್ಯೆ ಕಾಡೋದಕ್ಕೆ ಶುರುಮಾಡುತ್ತದೆ. ಎಲ್ಲಾ ಕೊರೊನಾ ವೈರಸ್ ಗಳು ಒಂದೇ ರೀತಿಯಲ್ಲಿ ಇರುತ್ತವೆ. ರೋಗದ ಲಕ್ಷಣಗಳು ಒಂದೇ ತರನಾಗಿರುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಕೆಲವೊಂದು ಕೊರೊನಾ ವೈರಸ್ ಗಳು ದೇಹವನ್ನು ಪ್ರವೇಶಿಸಿದ ಕೂಡಲೇ ವೈರಸ್ ಗಳು ಆರಂಭದಲ್ಲಿಯೇ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡೋದಕ್ಕೆ ಶುರುಮಾಡುತ್ತದೆ. ಸೋಂಕು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಆಗಿ ಪರಿವರ್ತನೆಯಾಗಬಹುದು. ಕಫದೊಂದಿಗೆ ಕೆಮ್ಮು, ಉಸಿರು ಕಟ್ಟುವಿಕೆ, ಎದೆ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಹೃದಯ ಮತ್ತು ಶ್ವಾಸಕೋಶದ ಕಾಯಿಲೆ ಇರುವವರಲ್ಲಿ ಈ ತೀವ್ರವಾದ ಲಕ್ಷಣಗಳು ಸಾಮಾನ್ಯ.

ಲಕ್ಷಣಗಳು ಕಾಣಿಸಿಕೊಂಡ್ರೆ ಏನು ಮಾಡಬೇಕು ?
ಕೊರೊನಾ ವೈರಸ್ ನಮ್ಮ ದೇಹದಲ್ಲಿ ಇದೆಯಾ ಅನ್ನೋದನ್ನು ಖಚಿತ ಪಡಿಸಿಕೊಳ್ಳಲು ವೈದ್ಯರನ್ನು ಸಂಪರ್ಕಿಸಲೇ ಬೇಕು. ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ, ಕಫ, ಗಂಟಲಿನ ಸ್ವಾಬ್ ಹಾಗೂ ಉಸಿರಾಟದ ಪರೀಕ್ಷೆಯನ್ನು ಮಾಡಿಸೋ ಮೂಲಕ ಸೋಂಕನ್ನು ಪತ್ತೆಹಚ್ಚಬಹುದಾಗಿದೆ.

ಮುನ್ನೆಚ್ಚರಿಕೆಯ ಕ್ರಮಗಳೇನು ?
ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಕೊರೊನಾಗೆ ಇದುವರೆಗೂ ಯಾವುದೇ ಔಷಧಿಗಳಿಲ್ಲ. ಕೊರೊನಾ ತಡೆಗಾಗಿ ಈವರೆಗೂ ಎಲ್ಲಿಯೂ ಚಿಕಿತ್ಸೆ ದೊರೆತ್ತಿಲ್ಲ. ಆದರೆ ಎಂಇಆರ್ಎಸ್(ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್) ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಒಂದಷ್ಟು ಸಮಯ ಈ ಸೋಂಕು ಹರಡದಂತೆ ತಡೆಯಬಹುದು. ಈ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಉತ್ತಮ ಮುಂಜಾಗ್ರತಾ ಕ್ರಮವೆಂದರೆ ಮೂಗು ಮತ್ತು ಬಾಯನ್ನು ಮಾಸ್ಕ್ ನಿಂದ ಮುಚ್ಚಿಕೊಳ್ಳಬೇಕಾಗುತ್ತದೆ. ಜನ ಹೆಚ್ಚಾಗಿ ಸೇರುವ ಪ್ರದೇಶಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ.ಅನಾರೋಗ್ಯ ಪೀಡಿತರೊಂದಿಗೆ ಸಂಪರ್ಕವಿಟ್ಟುಕೊಳ್ಳಬೇಡಿ. ಕೈ ತೊಳೆಯದೇ ಮುಖ, ಮೂಗು, ಬಾಯಿಯನ್ನು ಮುಟ್ಟಬೇಡಿ. ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಹಚ್ಚಿ ಕೈಯನ್ನು ತೊಳೆದುಕೊಳ್ಳಬೇಕು. ಕೆಮ್ಮು, ಶೀತ ಕಾಣಿಸಿಕೊಂಡಾಗ ಕರವಸ್ತ್ರವನ್ನು ಬಳಕೆ ಮಾಡಿ. ಅನಾರೋಗ್ಯವಿದ್ದರೇ ಮನೆಯಲ್ಲಿಯೇ ಇರಿ. ಅನಾರೋಗ್ಯ ಕಾಣಿಸಿಕೊಂಡರೆ ವಿಶ್ರಾಂತಿ ಅತೀ ಅಗತ್ಯ. ಕೆಮ್ಮು, ಗಂಟಲು ನೋವು ಕಾಣಿಸಿಕೊಂಡ್ರೆ ಬಿಸಿ ನೀರಿನ ಸ್ನಾನ ಮಾಡುವುದು ಉತ್ತಮ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಿ, ಗಂಟಲು ಒಣಗಲು ಬಿಡಬೇಡಿ. ಹೀಗಾಗಿ ಪದೇ ಪದೇ ನೀರನ್ನು ಕುಡಿಯುತ್ತಿರೋದು ಉತ್ತಮ

Leave A Reply

Your email address will not be published.