ಗುಜರಾತ್ ಗಲಭೆ ಪ್ರಕರಣ : 17 ಮಂದಿಗೆ ಸುಪ್ರೀಂ ಷರತ್ತುಬದ್ದ ಜಾಮೀನು

0

ನವದೆಹಲಿ : ಗುಜರಾತ್​ ನಲ್ಲಿ 2002ರಲ್ಲಿ ನಡೆದಿದ್ದ ಗಲಭೆ ಪ್ರಕರಣದ 17 ಅಪರಾಧಿಗಳಿಗೆ ಸುಪ್ರೀಂಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. 2002ರ ಫೆಬ್ರವರಿ 27 ರಂದು ಗುಜರಾತಿನ ಗೋಧ್ರಾದಲ್ಲಿ ಸಬರಮತಿ ಎಕ್ಸ್​ಪ್ರೆಸ್​ ರೈಲಿಗೆ ಬೆಂಕಿ ಹಚ್ಚಿ ರೈಲಿನಲ್ಲಿದ್ದ ಹಿಂದೂ ಪ್ರಯಾಣಿಕರು ಸಾವನ್ನಪ್ಪಿದ್ದರು. ಇದಾದ ಬಳಿಕ ಸರ್ದಾರ್​ಪುರ್​ ಗ್ರಾಮದಲ್ಲಿ ಉಂಟಾದ ಗಲಭೆಯಲ್ಲಿ 33 ಮುಸ್ಲೀಮರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಬಂಧಿತರಾಗಿದ್ದ 17 ಆರೋಪಿಗಳಿಗೆ ಇದೀಗ ಜಾಮೀನು ಮಂಜೂರಾಗಿದೆ.

ಸುದೀರ್ಘವಾಗಿ ವಾದ ವಿವಾದ ಆಲಿಸಿರುವ ಸುಪ್ರೀಂ ಕೋರ್ಟ್ ಅಪರಾಧಿಗಳನ್ನು ಇಂದೋರ್ ಹಾಗೂ ಜಬಲ್ಪುರ್ ಎರಡು ಗುಂಪುಗಳಾಗಿ ಮಾಡಿದೆ. ಅಪರಾಧಿಗಳು ಗುಜರಾತ್​ ರಾಜ್ಯವನ್ನು ಪ್ರವೇಶಿಸುವಂತಿಲ್ಲ. ಮಾತ್ರವಲ್ಲ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಷರತ್ತು ವಿಧಿಸಿದೆ. ಇದಕ್ಕೂ ಮುನ್ನ ಅಪರಾಧಿಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆ ಮಾಡುವುದರ ಕುರಿತು ಖಚಿತಪಡಿಸುವಂತೆ ಮಧ್ಯಪ್ರದೇಶದ ಇಂದೋರ್​ ಮತ್ತು ಜಬಲ್ಪುರ್​ನ ಜಿಲ್ಲಾ ಕಾನೂನು ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ಅಪರಾಧಿಗಳು ಜೀವನೋಪಾಯಕ್ಕೆ ಕೆಲಸ ಹುಡುಕಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಅಪರಾಧಿಗಳ ನಡತೆಯ ಮೇಲೆ ಅನುಸರಣಾ ವರದಿಯನ್ನು ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಕೇಳಿದೆ.

Leave A Reply

Your email address will not be published.