ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ; ನ್ಯಾಯಕ್ಕಾಗಿ ಕಾದೂ ಕಾದೂ ಪ್ರಾಣ ಬಿಟ್ಟ ಹೋರಾಟಗಾರ್ತಿ!
ವಿಳಂಬವಾದ ನ್ಯಾಯವು ನ್ಯಾಯ ನಿರಾಕರಿಸಿದಂತೆಯೇ" ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಕೇರಳದಲ್ಲಿ ನಡೆದ ಈ ಘಟನೆ, ನ್ಯಾಯಾಂಗದ ವಿಳಂಬ ಕೇವಲ ಸಮಯವನ್ನಲ್ಲ, ಮನುಷ್ಯನ ಜೀವವನ್ನೇ ಬಲಿಪಡೆಯಬಹುದು ಎಂಬುದಕ್ಕೆ ಕಣ್ಣೀರು ತರಿಸುವ ಸಾಕ್ಷಿಯಾಗಿದೆ.

ವಿಳಂಬವಾದ ನ್ಯಾಯವು ನ್ಯಾಯ ನಿರಾಕರಿಸಿದಂತೆಯೇ” ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಕೇರಳದಲ್ಲಿ ನಡೆದ ಈ ಘಟನೆ, ನ್ಯಾಯಾಂಗದ ವಿಳಂಬ ಕೇವಲ ಸಮಯವನ್ನಲ್ಲ, ಮನುಷ್ಯನ ಜೀವವನ್ನೇ ಬಲಿಪಡೆಯಬಹುದು ಎಂಬುದಕ್ಕೆ ಕಣ್ಣೀರು ತರಿಸುವ ಸಾಕ್ಷಿಯಾಗಿದೆ.
ಕೇರಳದ ಎರ್ನಾಕುಲಂ ಮೂಲದ 57 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳೆದ 2022 ರ ಜೂನ್‌ನಲ್ಲಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಹೋರಾಟ ಸ್ವಾರ್ಥಕ್ಕಾಗಿರಲಿಲ್ಲ; ಬದಲಿಗೆ ದೇಶದ ಲಕ್ಷಾಂತರ ಬಡ ಕ್ಯಾನ್ಸರ್ ರೋಗಿಗಳ ಪರವಾಗಿತ್ತು. ಆದರೆ ದುರಂತವೆಂದರೆ, 4 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಬರೋಬ್ಬರಿ 57 ವಿಚಾರಣೆಗಳ ನಂತರವೂ ಕೋರ್ಟ್‌ನಿಂದ ಯಾವುದೇ ತೀರ್ಪು ಬರುವ ಮುನ್ನವೇ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಔಷಧಿಗಳು ಸ್ತನ ಕ್ಯಾನ್ಸರ್ ರೋಗಿಗಳಿಗೆ ಜೀವದಾತನಿದ್ದಂತೆ. ಆದರೆ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ವೆಚ್ಚ ಮಾಡಲು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೇಗೆ ಸಾಧ್ಯ? ಇದೇ ಕಾರಣಕ್ಕಾಗಿ, ಈ ಔಷಧಿಗಳನ್ನು ಭಾರತದಲ್ಲೇ ಕಡಿಮೆ ಬೆಲೆಗೆ ಉತ್ಪಾದಿಸಲು ಅನುಮತಿ ನೀಡುವಂತಹ ಕಾನೂನನ್ನು ಸರ್ಕಾರ ಜಾರಿಗೆ ತರಬೇಕೆಂದು ಆಕೆ ಕೋರ್ಟ್‌ಗೆ ಮನವಿ ಮಾಡಿದ್ದರು.
ಈ ಪ್ರಕರಣದಲ್ಲಿ ಹೈಕೋರ್ಟ್ ವಿಶೇಷ ವಕೀಲರನ್ನು ನೇಮಿಸಿತು, ಸರ್ಕಾರದ ವರದಿಯನ್ನೂ ಪಡೆಯಿತು. 2025ರ ವೇಳೆಗೆ ಎಲ್ಲಾ ವಾದ-ಪ್ರತಿವಾದಗಳು ಪೂರ್ಣಗೊಂಡಿದ್ದವು. ಪ್ರತಿ ಬಾರಿಯೂ ಕೇಸ್ “ತೀರ್ಪಿಗೆ ಸಿದ್ಧವಿರುವ” ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿತ್ತೇ ವಿನಃ ತೀರ್ಪು ಮಾತ್ರ ಪ್ರಕಟವಾಗುತ್ತಿರಲಿಲ್ಲ. ಕೊನೆಗೆ ಜುಲೈ 15 ರಂದು ಮತ್ತೊಂದು ವಿಚಾರಣೆ ನಿಗದಿಯಾಗಿತ್ತು. ಆದರೆ ಅದಕ್ಕೆ ಮುನ್ನವೇ ಅಂದರೆ ಜುಲೈ 11 ರಂದು ಆಕೆ ಇಹಲೋಕ ತ್ಯಜಿಸಿದರು. ಆಕೆ ಸಲ್ಲಿಸಿದ್ದ ಅರ್ಜಿ ಈಗಲೂ ಹೈಕೋರ್ಟ್‌ನ ಕಡತಗಳ ನಡುವೆ ಧೂಳು ತಿನ್ನುತ್ತಿದೆ.
ಹೋರಾಟಗಾರ್ತಿ ನಮ್ಮನ್ನು ಅಗಲಿದ್ದರೂ, ಆಕೆ ಹಚ್ಚಿದ ಹೋರಾಟದ ಕಿಡಿ ಆರಿಲ್ಲ. ಜ್ಯೋತ್ಸ್ನಾ ಸಿಂಗ್ ಮತ್ತು ಕೆ.ಎಮ್. ಗೋಪಕುಮಾರ್ ಎಂಬ ಇಬ್ಬರು ಸಾಮಾಜಿಕ ಕಾರ್ಯಕರ್ತರು ಈಗ ಈ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಪತ್ರ ಬರೆದಿದ್ದಾರೆ.
ಔಷಧಿಗಳ ಬೆಲೆ ಕಡಿಮೆಯಾಗದಿದ್ದರೆ ದೇಶದಲ್ಲಿ ಮತ್ತಷ್ಟು ಅಮೂಲ್ಯ ಜೀವಗಳು ಬಲಿಯಾಗಲಿವೆ. ಇನ್ನು ಮುಂದಾದರೂ ನಮ್ಮ ನ್ಯಾಯಾಂಗ ವ್ಯವಸ್ಥೆ ಎಚ್ಚೆತ್ತುಕೊಂಡು, ಇಂತಹ ಜೀವ ರಕ್ಷಕ ವಿಷಯಗಳ ಅರ್ಜಿಗಳ ಬಗ್ಗೆ ತ್ವರಿತವಾಗಿ ತೀರ್ಪು ನೀಡಲಿದೆಯೇ? ಮೃತ ಮಹಿಳೆಯ ಆತ್ಮಕ್ಕಾದರೂ ನ್ಯಾಯ ಸಿಗಲಿದೆಯೇ? ಕಾದು ನೋಡಬೇಕಿದೆ.

