Reason for Neckpain: ಪದೇ ಪದೇ ಕತ್ತು ನೋವು ಬರುತ್ತಿದೆಯೇ? ಇದಕ್ಕೆ ಕಾರಣವೇನು ಗೊತ್ತಾ..

(Reason for Neckpain) ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ಕತ್ತು ನೋವು. ಇದು ಬಹಳಷ್ಟು ಜನರಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಕಂಡು ಬರುತ್ತದೆ. ಕತ್ತಿನಲ್ಲಿ ವಿಪರೀತ ನೋವು, ಅಲುಗಾಡಿಸುವುದಕ್ಕೂ ಕಷ್ಟವಾಗುವುದು, ಹಾಗೂ ಎರಡು ಭುಜ ಮತ್ತು ಕೈಗಳಲ್ಲಿ ಜೋಮು ಹಿಡಿಯುವುದು ಮತ್ತು ಸೆಳೆತ, ಉರಿ ಮುಂತಾದ ಲಕ್ಷಣಗಳು ದೀರ್ಘ ಅವಧಿಯಲ್ಲಿ ಕಂಡು ಬಂದಾಗ ಕತ್ತಿನ ನೋವಿನ ಸಮಸ್ಯೆ ಎಂದು ತಜ್ಞರು ಪರಿಗಣಿಸುತ್ತಾರೆ.

ಸಾಮಾನ್ಯವಾಗಿ ಕತ್ತು ನೋವು ಮಧ್ಯ ವಯಸ್ಸಿನಲ್ಲಿ ಅಂದರೆ ಮೂವತ್ತರಿಂದ ನಲವತ್ತು ವರ್ಷದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೆಲವೊಮ್ಮೆ ಕತ್ತು ನೋವಿನ ಜೊತೆಗೆ ಬೆನ್ನು ನೋವು ಸಹ ಕಾಣಿಸುತ್ತದೆ. ಈ ಸಮಸ್ಯೆಯು ಪುರುಷ ಹಾಗೂ ಸ್ತ್ರೀ ಇಬ್ಬರಲ್ಲೂ ಸಮಾನ ರೀತಿಯಲ್ಲಿ ಕಂಡು ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಸರ್ವೈಕಲ್‌ ಸ್ಪಾಂಡಿಲೋಸಿಸ್‌. ಅತಿ ಹೆಚ್ಚು ಜನರಲ್ಲಿ ಕತ್ತು ನೋವಿಗೆ ಇದೇ ಪ್ರಮುಖ ಕಾರಣವಾಗಿರಬಹುದು. ಕತ್ತಿನ ಮೂಳೆಗಳ ಮಧ್ಯೆ ಇರುವ ಸರ್ವೈಕಲ್‌ ಡಿಸ್ಕ್‌ನಲ್ಲಿ ವಯಸ್ಸಾದ ನಂತರ ಸವೆತದಿಂದ ಕ್ರಮೇಣವಾಗಿ ನೋವು ಕಾಣಿಸಿಕೊಳ್ಳುತ್ತದೆ.

ಕತ್ತಿನ ಭಾಗದಲ್ಲಿ ಸುಮಾರು ಏಳು ಸರ್ವೈಕಲ್‌ ವರ್ಟಿಬ್ರಾ ಕಾಣಬಹುದು. ಅವುಗಳಲ್ಲಿ ಮುಖ್ಯವಾದ ಭಾಗದಲ್ಲಿರುವ ಡಿಸ್ಕ್‌ ಸರಿಯುವುದರಿಂದ ನರಗಳಿಗೆ ಒತ್ತಡ ಉಂಟಾಗಿ ಕತ್ತು ನೋವು ಬರುತ್ತದೆ. ನೋವಿನ ತೀವ್ರತೆ ಕ್ರಮೇಣ ಹೆಚ್ಚಾಗಿ ಕೈಗಳಿಗೆ ಜೋಮು ಮತ್ತು ಸೆಳೆತ ಉಂಟಾಗುತ್ತದೆ. ಕೆಲವೊಮ್ಮೆ ಬೆರಳುಗಳಿಗೆ ಚುಚ್ಚಿದ ರೀತಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ತುಂಬಾ ಜನರಲ್ಲಿ ಅನುವಂಶೀಯತೆ ಕೂಡ ಪ್ರಮುಖ ಕಾರಣವಾಗಬಹುದು. ಅತಿಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದು, ತಳ್ಳುವುದು, ಮತ್ತು ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು ಕತ್ತು ನೋವಿಗೆ ಕಾರಣವಾಗಬಹುದು. ರುಮ್ಯಾಟಿಕ್‌ ಆರ್ಥ್ರೈಟಿಸ್‌ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಕೆಲವೊಮ್ಮೆ ಕತ್ತು ನೋವು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ : Home remedies for cholesterol: ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಇಲ್ಲಿದೆ ಸುಲಭವಾದ ಮನೆಮದ್ದು

ಲಕ್ಷಣಗಳು;
ದೀರ್ಘಕಾಲದ ಕತ್ತುನೋವು ಮತ್ತು ಕತ್ತು ಆಡಿಸಲು ಕಷ್ಟವಾಗುವುದು, ತಲೆಯ ಹಿಂಭಾಗದಲ್ಲಿ ನೋವು, ಎರಡು ಭುಜಗಳಲ್ಲಿ ಮತ್ತು ಕೈಗಳಲ್ಲಿ ಉಂಟಾಗುವುದು, ತಲೆ ತಿರುಗುವುದು, ಭಾರವಾದ ವಸ್ತು ಎತ್ತುವುದಕ್ಕೆ ಕಷ್ಟವಾಗುವುದು, ಭುಜಗಳಲ್ಲಿ ನೋವು ಕಾಣಿಸುವುದು, ಕತ್ತಿನ ಭಾಗದ ಮಾಂಸಖಂಡಗಳಲ್ಲಿ ಅತಿಯಾದ ನೋವು ಕಾಣಿಸುವುದು ಪ್ರಮುಖ ಲಕ್ಷಣಗಳು.

Reason for Neckpain: Frequent neck pain? Do you know the reason for this?

Comments are closed.