ಅಜಿತ್ ಪವಾರ್ ನಿಧನದಲ್ಲಿ ಯಾವ ಸಂಚು ಇಲ್ಲ; ಶರದ್ ಪವಾರ್ ಸ್ಪಷ್ಟನೆ
Ajit Pawar Cremation | Sharad Pawar reaction: ಬಾರಾಮತಿ/ಮುಂಬೈ: ಮಹಾರಾಷ್ಟ್ರ ರಾಜಕಾರಣದ ಧ್ರುವತಾರೆ, ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ (NCP) ಅಧ್ಯಕ್ಷ ಅಜಿತ್ ಪವಾರ್ (66) ಅವರು ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ವಿಧಿವಶರಾಗಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ವೇಳೆ ಅವರಿದ್ದ ಖಾಸಗಿ ಚಾರ್ಟರ್ಡ್ ವಿಮಾನ ಪತನಗೊಂಡಿದೆ. ಘಟನೆಯ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್, “ಇದೊಂದು ಅತ್ಯಂತ ನೋವಿನ ಸಂಗತಿ. ಈ ಅಪಘಾತದ ಹಿಂದೆ ಯಾವುದೇ ಸಂಚು ಅಥವಾ ಪಿತೂರಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶರದ್ ಪವಾರ್ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ಅಜಿತ್ ಪವಾರ್ ಅವರ ವಿಮಾನವು ಬೆಳಿಗ್ಗೆ ಸುಮಾರು 8:45ರ ಸುಮಾರಿಗೆ ರನ್‌ವೇ ಸಮೀಪಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹವಾಮಾನ ವೈಪರೀತ್ಯ ಹಾಗೂ ದಟ್ಟ ಮಂಜಿನ ಕಾರಣದಿಂದಾಗಿ ದೃಶ್ಯಗೋಚರತೆ ಕಡಿಮೆಯಾಗಿದ್ದರಿಂದ ವಿಮಾನವು ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಹಾಗೂ ಇಬ್ಬರು ಸಿಬ್ಬಂದಿ ಕೂಡ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ವಿಮಾನ ಪತನ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿ ಐವರು ಬಲಿ
ಅಂತ್ಯಕ್ರಿಯೆಯ ವಿವರ
ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ಜನವರಿ 29ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಮಹಾರಾಷ್ಟ್ರ ಸರ್ಕಾರವು ಈ ದುರಂತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ. ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.



