ರೈಲ್ವೆ ಪ್ರಯಾಣಿಕರ ಗಮನಕ್ಕೆ:ಟಿಕೆಟ್ ಸ್ಕ್ರೀನ್‌ಶಾಟ್, ವಾಟ್ಸಾಪ್ ಕಾಪಿ ತೋರಿಸಿದರೆ ಬೀಳಲಿದೆ ದಂಡ!

ರೈಲಿನಲ್ಲಿ ಕಾಯ್ದಿರಿಸದ ಅಂದರೆ ಅನ್-ರಿಸರ್ವ್ಡ್ ಟಿಕೆಟ್ ಪಡೆದು ಪ್ರಯಾಣಿಸುವ ಸಾರ್ವಜನಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಅತ್ಯಂತ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದೆ.

ರೈಲಿನಲ್ಲಿ ಕಾಯ್ದಿರಿಸದ ಅಂದರೆ ಅನ್-ರಿಸರ್ವ್ಡ್ ಟಿಕೆಟ್ ಪಡೆದು ಪ್ರಯಾಣಿಸುವ ಸಾರ್ವಜನಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಅತ್ಯಂತ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದೆ. ಇನ್ಮುಂದೆ ಮೊಬೈಲ್‌ನಲ್ಲಿ ಕೇವಲ ವಾಟ್ಸಾಪ್ ಸಂದೇಶ ಅಥವಾ ಟಿಕೆಟ್‌ನ ಸ್ಕ್ರೀನ್‌ಶಾಟ್ ತೋರಿಸಿ ರೈಲು ಪ್ರಯಾಣ ಮಾಡಲು ಅವಕಾಶವಿರುವುದಿಲ್ಲ. ಡಿಜಿಟಲ್ ಟಿಕೆಟ್‌ಗಳ ದುರುಪಯೋಗ ಮತ್ತು ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆಯು ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ.

ವಿಶೇಷವಾಗಿ ‘ರೈಲ್ಒನ್’ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾಗುವ ಸಾಮಾನ್ಯ ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸಲಿದೆ. ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ತಮ್ಮ ಫೋನ್‌ನಲ್ಲಿ ಟಿಕೆಟ್ ಬುಕ್ ಮಾಡಿ, ಅದರ ಚಿತ್ರವನ್ನು ಅಥವಾ ಸ್ಕ್ರೀನ್‌ಶಾಟ್ ಅನ್ನು ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ವಾಟ್ಸಾಪ್ ಮೂಲಕ ಕಳುಹಿಸಿ ಪ್ರಯಾಣಿಸುತ್ತಿರುವುದು ರೈಲ್ವೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಇನ್ನು ಹೊಸ ಮಾರ್ಗಸೂಚಿಯ ಪ್ರಕಾರ, ರೈಲ್ಒನ್ ಆಯಪ್‌ನಲ್ಲಿ ಯಾವ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಫೋನ್ ಬಳಸಿ ಟಿಕೆಟ್ ಖರೀದಿಸಲಾಗಿದೆಯೋ, ಅದೇ ಫೋನ್ ಅನ್ನು ಪ್ರಯಾಣದ ವೇಳೆ ಸಾರ್ವಜನಿಕರು ತಮ್ಮ ಬಳಿ ಹೊಂದಿರಬೇಕು.ಟಿಕೆಟ್ ತಪಾಸಣೆಯ ಸಮಯದಲ್ಲಿ ರೈಲ್ವೆ ಟಿಟಿಇ ಕೇಳಿದಾಗ ಆಯಪ್‌ನಲ್ಲಿರುವ ಡಿಜಿಟಲ್ ಟಿಕೆಟ್ ಜೊತೆಗೆ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಚಾಲನಾ ಪರವಾನಗಿಯಂತಹ ಸರ್ಕಾರದ ಮೂಲ ಫೋಟೋ ಗುರುತಿನ ಚೀಟಿಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಮೂಲ ಆಯಪ್ ಬಿಟ್ಟು ಕೇವಲ ವಾಟ್ಸಾಪ್ ಕಾಪಿ ಅಥವಾ ಫೋಟೋಗಳನ್ನು ತೋರಿಸುವವರನ್ನು ‘ಟಿಕೆಟ್ ರಹಿತ ಪ್ರಯಾಣಿಕರು’ ಎಂದು ಪರಿಗಣಿಸಲಾಗುವುದು. ಅಂತಹ ಸಂದರ್ಭದಲ್ಲಿ ರೈಲ್ವೆ ಕಾಯ್ದೆಯಡಿ ಭಾರಿ ದಂಡ ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.

Attention railway passengers You will be fined if you show a ticket screenshot or a WhatsApp copy

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »