ದೇಶದಲ್ಲಿ ಮತ್ತೆ ಶುರು ಕೋವಿಡ್ ಆತಂಕ : ಆಂಧ್ರಪ್ರದೇಶದಲ್ಲಿ ಕೊರೊನಾ ಮಾರಿಗೆ ಇಬ್ಬರು ದುರ್ಮರಣ
ಇಡೀ ಜಗತ್ತನ್ನೇ ನಡುಗಿಸಿದ್ದ ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ ಸೋಂಕು ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ನಿರಾಳವಾಗಿದ್ದ ಜನತೆಗೆ ನೆರೆರಾಜ್ಯ ಆಂಧ್ರಪ್ರದೇಶದಿಂದ ಆತಂಕದ ಸುದ್ದಿಯೊಂದು ಬಂದಿದೆ.

ಇಡೀ ಜಗತ್ತನ್ನೇ ನಡುಗಿಸಿದ್ದ ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ ಸೋಂಕು ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ನಿರಾಳವಾಗಿದ್ದ ಜನತೆಗೆ ನೆರೆರಾಜ್ಯ ಆಂಧ್ರಪ್ರದೇಶದಿಂದ ಆತಂಕದ ಸುದ್ದಿಯೊಂದು ಬಂದಿದೆ. ಇತ್ತೀಚಿನ ವಾರಗಳಲ್ಲಿ ರಾಜ್ಯದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ಮತ್ತು ಆರೋಗ್ಯ ವಲಯದಲ್ಲಿ ಮತ್ತೆ ಕಳವಳ ಸೃಷ್ಟಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ಎಂಟು ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಮೃತರ ಪೈಕಿ ರಾಜಂಪೇಟೆಯ 52 ವರ್ಷದ ವ್ಯಕ್ತಿಯೋರ್ವರು ತೀವ್ರ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದು, ತಮಿಳುನಾಡಿನ ವೆಲ್ಲೂರಿನ ಸಿಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿದ್ದಾರೆ. ಮತ್ತೊಂದು ಘಟನೆಯಲ್ಲಿ, ಕಡಪದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 43 ವರ್ಷದ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಇವರಷ್ಟೇ ಅಲ್ಲದೆ, ಕಡಪ ವೈದ್ಯಕೀಯ ಕಾಲೇಜಿನ 25 ವರ್ಷದ ವಿದ್ಯಾರ್ಥಿನಿಯಲ್ಲೂ ಸೋಂಕು ಪತ್ತೆಯಾಗಿದ್ದು, ಸದ್ಯ ಅವರು ಹೋಂ ಐಸೋಲೇಷನ್ನಲ್ಲಿದ್ದಾರೆ.
ಈ ಹಠಾತ್ ಬೆಳವಣಿಗೆಯಿಂದ ಎಚ್ಚೆತ್ತಿರುವ ಆಂಧ್ರಪ್ರದೇಶ ಆರೋಗ್ಯ ಇಲಾಖೆಯು ಸೋಂಕು ಹರಡುವುದನ್ನು ತಡೆಯಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಜಿಲ್ಲೆಯಲ್ಲಿ ಹೊಸದಾಗಿ ಪತ್ತೆಯಾಗಿರುವ ವೈರಸ್ ಯಾವುದಾದರೂ ಅಪಾಯಕಾರಿ ರೂಪಾಂತರವೇ ಎಂಬುದನ್ನು ಪತ್ತೆಹಚ್ಚಲು ರೋಗಿಗಳ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ಪ್ರಯೋಗಾಲಯಕ್ಕೆ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ತಕ್ಷಣವೇ ಆರ್ಆರ್ಟಿ ತಂಡಗಳನ್ನು ನಿಯೋಜಿಸಲಾಗಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕಾಂಟ್ಯಾಕ್ಟ್ ಟ್ರೇಸಿಂಗ್ ಮೂಲಕ ಪತ್ತೆಹಚ್ಚಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವೆ ಸವಿತಾ ಅವರು ತುರ್ತು ಸಭೆ ನಡೆಸಿ, ಆಸ್ಪತ್ರೆಗಳು, ಚಿತ್ರಮಂದಿರಗಳು ಹಾಗೂ ಜನದಟ್ಟಣೆಯಿರುವ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಶೀತ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇರುವವರನ್ನು ತಕ್ಷಣವೇ ಪರೀಕ್ಷೆಗೆ ಒಳಪಡಿಸಲು ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಹಾಗೂ ಹಾಸಿಗೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ.
Covid panic resumes in the country Two people die of coronavirus in Andhra Pradesh

