ದೆಹಲಿಯಲ್ಲಿ ನಡೆದಿರುವುದು ಆತ್ಮಾಹುತಿ ದಾಳಿ ಶಂಕೆ: 3 ಗಂಟೆಗಳ ಕಾಲ ಕಾರಿನಿಂದಿಳಿಯದೇ ಕುಳಿತಿದ್ದ ಚಾಲಕ
Delhi blast: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಸಮೀಪದಲ್ಲಿರುವ ಮೆಟ್ರೋ ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ಕಾರು ಸ್ಫೋಟ ಪ್ರಕರಣ ಇಡೀ ದೇಶವನ್ನೇ ದಿಗ್ಭ್ರಮೆಗೊಳಪಡಿಸಿದೆ. ಈ ಘಟನೆಯ ಬಳಿಕ ದೆಹಲಿ(Delhi) ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ಈ ಪ್ರಕರಣ ಸಂಬಂಧ ತನಿಖೆಯಲ್ಲಿ ವಿವಿಧ ತನಿಖಾ ಸಂಸ್ಥೆಗಳು ಭಾಗಿಯಾಗಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.
ಪ್ರಾಥಮಿಕ ತನಿಖೆಯ ವರದಿಯ ಪ್ರಕಾರ ಕೆಂಪು ಬಣ್ಣದ ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಿದ್ದರಬಹುದು ಅಥವಾ ಇದೊಂದು ಆತ್ಮಾಹುತಿ ದಾಳಿ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟಗೊಂಡ ಐ20 ಕಾರಿನ ಒಳಗೆ ಒಬ್ಬ ವ್ಯಕ್ತಿ ಇದ್ದ ಎನ್ನಲಾಗಿದೆ ಆತನ ಗುರುತು ಪತ್ತೆಯಾದ ಬಳಿಕವಷ್ಟೇ ಪ್ರಕರಣದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಮೂಡಿಬರಲಿದೆ.
Also Read: ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟ : ಸ್ಥಳಕ್ಕೆ ಎನ್‌ಐಎ- ಹೈ ಅಲರ್ಟ್ ಘೋಷಣೆ
ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು ಡಿಎನ್ಎ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಈ ಕಾರಿನ ಮಾಲೀಕ ಪುಲ್ವಾಮಾದ ತಾರೀಖ್ ಎಂದು ತಿಳಿದು ಬಂದಿದ್ದು ಈತನಿಗೂ ಯಾವುದೇ ಭಯೋತ್ಫಾದಕ ಸಂಘಟನೆಗಳ ಜೊತೆಗೂ ನಂಟಿದ್ಯಾ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ಇನ್ನು HR 26CE7674 ಸಂಖ್ಯೆಯ ಈ ಕಾರು ಮಧ್ಯಾಹ್ನ 3.19ರ ಸುಮಾರಿಗೆ ಕೆಂಪುಕೋಟೆ ಬಳಿ ಬಂದು ನಿಂತಿತ್ತು ಎನ್ನಲಾಗಿದೆ. ಇದಾಗಿ ಮೂರು ಗಂಟೆಗಳ ಕಾಲವೂ ಚಾಲಕ ಕಾರಿನಿಂದ ಕೆಳಗೆ ಇಳಿಯದೇ ಅದರಲ್ಲಿಯೇ ಕುಳಿತುಕೊಂಡಿರುವುದು ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ತಿಳಿದುಬಂದಿದೆ. ಪೊಲೀಸರಿಗೆ ದೊರಕಿರುವ ಒಂದು ನಿಮಿಷದ ವಿಡಿಯೋದಲ್ಲಿ ಈ ಕಾರು ಬದರ್ಪುರ್ ಗಡಿಯ ಮೂಲಕ ಹಾದು ಹೋಗಿರುವುದು ಕಂಡು ಬಂದಿದೆ.
Also Read: RSS ಆದಾಯ ತೆರಿಗೆ ಕಟ್ಟುತ್ತಾ? ಸತ್ಯ ಬಿಚ್ಚಿಟ್ಟ ಮೋಹನ್ ಭಾಗವತ್



