ದೇಶದಲ್ಲೇ ಪ್ರಪ್ರಥಮ ಬಾರಿಗೆ ದಯಾಮರಣಕ್ಕೆ ಅನುಮತಿ ನೀಡಿದ ಸುಪ್ರೀಂಕೋರ್ಟ್ : 13 ವರ್ಷಗಳ ನರಕಯಾತನೆಗೆ ಮುಕ್ತಿ
2018ರಲ್ಲಿ ಭಾರತದಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸಲಾಗಿದೆ. ಈ ಕಾನೂನು ಜಾರಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದೆ.
ದೇಶದಲ್ಲಿ ಈವರೆಗೆ ಯಾವುದೇ ದಯಾಮರಣ ಅರ್ಜಿಗಳಿಗೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿರಲಿಲ್ಲ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ವೃದ್ಧ ಪೋಷಕರ ಮನವಿಯ ಆಧಾರದ ಮೇಲೆ ಕೃತಕ ಉಸಿರಾಟದ ಮೂಲಕ ಕಳೆದ 13 ವರ್ಷಗಳಿಂದ ಜೀವಿಸುತ್ತಿರುವ ಹರೀಶ್ ರಾಣಾ ಎಂಬವರ ವೆಂಟಿಲೇಟರ್ ತೆಗೆದು ನೈಸರ್ಗಿಕವಾಗಿ ಸಾಯಲು ಅವಕಾಶ ನೀಡಲಾಗಿದೆ. 2018ರಲ್ಲಿ ದಯಾಮರಣ ಕಾನೂನುಬದ್ಧ ಎಂದು ಘೋಷಣೆಯಾದ ಬಳಿಕ ನೀಡಿದ ಮೊದಲ ತೀರ್ಪು ಇದಾಗಿದೆ.
ಯಾರು ಈ ಹರೀಶ್ ರಾಣಾ ?
ಹರೀಶ್ ರಾಣಾ ಚಂಡೀಗಢದ ಕಾಲೇಜೊಂದರಲ್ಲಿ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿಯಾಗಿದ್ದರು. ಕಟ್ಟಡದಿಂದ ಆಯತಪ್ಪಿ ಬಿದ್ದಿದ್ದ ಹರೀಶ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದು ಜೀವಂತ ಶವವಾಗಿದ್ದರು. ಬಳಿಕ ಅವರನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಇದಾದ ಬಳಿಕ ಕಳೆದ 13 ವರ್ಷಗಳಿಂದ ಅವರು ಇದೇ ಸ್ಥಿತಿಯಲ್ಲಿದ್ದರು.
ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಹರೀಶ್ ರಾಣಾ ಪಿಜಿಯೊಂದರಲ್ಲಿ ವಾಸವಿದ್ದರು. ತಾವು ವಾಸವಿದ್ದ ಪಿಜಿಯ ನಾಲ್ಕನೇ ಮಹಡಿಯಿಂದ ಹರೀಶ್ ಆಯತಪ್ಪಿ ಬಿದ್ದಿದ್ದರು. ಕೇವಲ ಯಂತ್ರದ ಸಹಾಯದಿಂದ ಹರೀಶ್ ಜೀವಂತವಾಗಿರುವುದರಿಂದ ಅವರ ಜೀವನಕ್ಕೆ ಯಾವುದೇ ಅರ್ಥವಿಲ್ಲ ಎಂದು ಸುಪ್ರೀಂಕೋರ್ಟ್ನ ಎದುರು ವೈದ್ಯಾಧಿಕಾರಿಗಳು ಅಭಿಪ್ರಾಯ ಹೊರಹಾಕಿದ್ದರು.
ಹರೀಶ್ ಅವರ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಅವರು ಸಸ್ಯಕ ಸ್ಥಿತಿ ತಲುಪಿದ್ದರು. ಕೇವಲ ಜೀವವಿದೆ ಎನ್ನುವುದನ್ನು ಬಿಟ್ಟರೆ, ಇವರು ಎಂದಿಗೂ ಸಾಮಾನ್ಯ ಮನುಷ್ಯರಂತೆ ಆಗುವುದು ಸಾಧ್ಯವಿರಲಿಲ್ಲ. ಉಸಿರಾಟ ಕ್ರಿಯೆ ನಡೆಯುತ್ತಿರುತ್ತದೆ. ಆದರೆ ಸುತ್ತಮುತ್ತಲಿನ ಪ್ರಪಂಚದ ಕಿಂಚಿತ್ತೂ ಜ್ಞಾನವಿಲ್ಲದ ಸ್ಥಿತಿಗೆ ಹರೀಶ್ ತಲುಪಿದ್ದರು.
ಇದನ್ನೂ ಓದಿ: ವೈದ್ಯಾಧಿಕಾರಿಗಳೊಂದಿಗಿನ ಸರ್ಕಾರದ ಸಂಧಾನ ಸಭೆ ಸಕ್ಸಸ್ : ಅರ್ನಿದಿಷ್ಟಾವಧಿ ಮುಷ್ಕರ ವಾಪಸ್
ಹರೀಶ್ ಅವರ ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್ ಅನ್ನು ಬಳಸಲಾಗುತ್ತಿತ್ತು., ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಹರೀಶ್ 20 ವರ್ಷ ಪ್ರಾಯದಲ್ಲಿದ್ದಾಗ ಈ ಸ್ಥಿತಿಗೆ ತಲುಪಿದ್ದರು .
2018ರಲ್ಲಿ ಭಾರತದಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸಲಾಗಿದೆ. ಈ ಕಾನೂನು ಜಾರಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದೆ. ಪೋಷಕರ ನಿಸ್ವಾರ್ಥ ಪ್ರಯತ್ನ, ವೈದ್ಯರ ಅಭಿಪ್ರಾಯ ಹಾಗೂ ಎಂದಿಗೂ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವಿಲ್ಲದ ಹರೀಶ್ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.



