ವೈದ್ಯಾಧಿಕಾರಿಗಳೊಂದಿಗಿನ ಸರ್ಕಾರದ ಸಂಧಾನ ಸಭೆ ಸಕ್ಸಸ್ : ಅರ್ನಿದಿಷ್ಟಾವಧಿ ಮುಷ್ಕರ ವಾಪಸ್
ಸರ್ಕಾರದ ಎದುರು ಸರ್ಕಾರಿ ವೈದ್ಯಾಧಿಕಾರಿಗಳು ಒಟ್ಟೂ 14 ಬೇಡಿಕೆಗಳನ್ನು ಇಟ್ಟಿದ್ದು ಈ ಪೈಕಿ 13 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಮಾರ್ಚ್ 15ರವರೆಗೆ ರಾಜ್ಯದ ಆರೋಗ್ಯ ಇಲಾಖೆಯ ಸಮಸ್ತ ಅಧಿಕಾರಿಗಳು ಹಾಗೂ ನೌಕರರು ಅರ್ನಿದಿಷ್ಟಾವಧಿ ಮುಷ್ಕರ ನಡೆಸಲು ಕರ್ನಾಟಕ ಸರ್ಕಾರ ವೈದ್ಯಾಧಿಕಾರಿಗಳ ಸಂಘ ಕರೆ ನೀಡಿತ್ತು. ಆದರೆ ಇದಕ್ಕೂ ಮುನ್ನವೇ ರಾಜ್ಯ ಸರ್ಕಾರ ಎಚ್ಚೆತ್ತಿದ್ದು ಸರ್ಕಾರಿ ವೈದ್ಯಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿ ಅದರಲ್ಲಿ ಯಶಸ್ಸು ಕಂಡಿದೆ. ಹೀಗಾಗಿ ವೈದ್ಯಾಧಿಕಾರಿಗಳು ತಮ್ಮ ಮುಷ್ಕರ ವಾಪಸ್ ಪಡೆದಿದ್ದಾರೆ.
ಸರ್ಕಾರದ ಎದುರು ಸರ್ಕಾರಿ ವೈದ್ಯಾಧಿಕಾರಿಗಳು ಒಟ್ಟೂ 14 ಬೇಡಿಕೆಗಳನ್ನು ಇಟ್ಟಿದ್ದು ಈ ಪೈಕಿ 13 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲಾ 13 ಬೇಡಿಕೆಗಳನ್ನು ಪೂರೈಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಇದಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ: ಮುಷ್ಕರದ ಸಂದರ್ಭದಲ್ಲಿ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ
ಸಂಧಾನ ಸಭೆ ಯಶಸ್ವಿ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಈ ಸಭೆ ನಡೆಸಲಾಗಿದೆ. ಪಿಜಿ ಕೋರ್ಸ್ಗಳಿಗೆ ಸಮ್ಮತಿ ನೀಡಿದ್ದೇವೆ. ಔಷಧಿಗಳ ಖರೀದಿಗೆ ಹಣ ನೀಡಲಾಗಿದೆ. ಬಡ ಜನರಿಗೆ ಸಕಾಲದಲ್ಲಿ ಔಷಧಿ ಸಿಗಬೇಕು ಇದು ನಮ್ಮ ಪ್ರಥಮ ಪ್ರಾಶಸ್ತ್ಯ . ಅವರ ಬಹುತೇಕ ಎಲ್ಲಾ ಬೇಡಿಕೆಗಳಿಗೂ ಒಪ್ಪಿಗೆ ನೀಡಿದ್ದೇವೆ ಎಂದು ಹೇಳಿದರು.



