ಸಾಲಗಾರರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್ : ಎರಡು ವರ್ಷ ಕಟ್ಟುವಂತಿಲ್ಲ ಸಾಲದ ಇಎಂಐ !

0

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವಲ್ಲೇ ಸಾಲ ಮರುಪಾವತಿಗೆ ಭಾರತೀಯ ರಿಸರ್ವ ಬ್ಯಾಂಕ್ ನೀಡಿದ ಅವಧಿಯೂ ಮುಕ್ತಾಯವಾಗಿದೆ. ಇದೀಗ ಕೇಂದ್ರ ಸರಕಾರ ಮತ್ತೆ 2 ವರ್ಷಗಳ ಅವಧಿಗೆ ಸಾಲ ಮರುಪಾವತಿಗೆ ವಿನಾಯಿತಿ ನೀಡುವ ಸಾಧ್ಯತೆಯಿದೆ.

ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಸುಮಾರು 6 ತಿಂಗಳ ಕಾಲ ಸಾಲದ ಮರುಪಾವತಿಗೆ ಬ್ಯಾಂಕುಗಳು ವಿನಾಯಿತಿಯನ್ನು ನೀಡಿದ್ದವು. ಆದರೆ ವಿನಾಯಿತಿಯ ವೇಳೆಯಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸುವಂತೆ ಆರ್ ಬಿಐ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಾಲದ ಬಡ್ಡಿ ಮನ್ನಾ ಮಾಡುವ ಕುರಿತು ಕೇಂದ್ರ ಸರಕಾರ ಸಪ್ಟೆಂಬರ್ 1ರ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಅವರು ಕೇಂದ್ರದ ನಿಲುವನ್ನು ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಮೆಹ್ತಾ, ಮಾರಟೋರಿಯಂ ಅವಧಿಯಲ್ಲಿ ಪಾವತಿಸಬೇಕಿದ್ದ ಬಡ್ಡಿಯ ಮೇಲೆ ಬ್ಯಾಂಕ್‌ಗಳು ವಿಧಿಸುವ ಬಡ್ಡಿ (ಚಕ್ರ ಬಡ್ಡಿ) ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಕಾಲಾವಕಾಶ ಕೋರಿದರು. ಈ ಬಗ್ಗೆ ಹಣಕಾಸು ಸಚಿವಾಲಯವು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.

ಇನ್ನು ಸಾಲ ಮರುಪಾವತಿ ವಿನಾಯ್ತಿ ಅವಧಿ ವಿಸ್ತರಣೆಯಾದರೆ, ಹಣಕಾಸು ಅಡಚಣೆಯಿಂದ ಬಳಲುತ್ತಿರುವ ಸಾಲಗಾರರಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಆರ್‌ಬಿಐ ರೂಪಿಸಿರುವ ಈ ವಿನಾಯ್ತಿ ನಿಯಮ ಕೇವಲ ಕೊರೊನಾ ಸಾಂಕ್ರಾಮಿಕ ರೋಗದ ಅವಧಿಗಷ್ಟೇ ಸೀಮಿತವಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.

ಸಾಲ ಮರುಪಾವತಿ ಅವಧಿ ವಿಸ್ತರಣೆಯಾಗದಿದ್ದರೆ, ಸಾಲಗಾರರು ಸೆಪ್ಟೆಂಬರ್ 1ರೊಳಗೆ ಬ್ಯಾಂಕಿಗೆ ಕಂತು ಪಾವತಿಸಲಾಗದೆ ಸುಸ್ತಿದಾರರಾಗುವ (ಎನ್‌ಪಿಎ) ಸಾಧ್ಯತೆ ಇರುತ್ತದೆ. ಹಾಗಾಗಿ ಸಾಲ ಮರುಪಾವತಿ ವಿನಾಯ್ತಿ ಅವಧಿಯನ್ನು ವಿಸ್ತರಿಸುವುದು ಸೂಕ್ತ’ ಎಂದು ಹಣಕಾಸು ಸಚಿವಾಲಯ ಮನವಿ ಮಾಡಿದೆ.

ಕೊರೊನಾ ಸೋಂಕು ಉಲ್ಬಣಿಸಿದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ವಿನಾಯ್ತಿ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಿ ಆರ್‌ಬಿಐ, ಮಾರ್ಚ್ 27, ಏಪ್ರಿಲ್ 17 ಮತ್ತು ಮೇ 23 ರಂದು ಸುತ್ತೋಲೆ ಹೊರಡಿಸಿತ್ತು. ನಂತರ ಮರುಪಾವತಿ ವಿನಾಯ್ತಿ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. ಈಗ ಈ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ಆಗಸ್ಟ್ 6ರಂದು ಆರ್‌ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ ಬಡ್ಡಿ ವಿನಾಯ್ತಿ ಜೊತೆಗೆ ಸಾಲದ ಕಂತುಗಳ ಮರುಪಾವತಿ ಅವಧಿಯನ್ನು ಆರು ತಿಂಗಳ ಬದಲಿಗೆ ಎರಡು ವರ್ಷಗಳವರೆಗೆ ವಿಸ್ತರಿಸುವ ಪ್ರಸ್ತಾಪವಿದೆ’ ಎಂದು ಹಣಕಾಸು ಸಚಿವಾಲಯ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಹೇಳಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್ ಷಾ ಅವರಿದ್ದ ತ್ರಿಸದಸ್ಯ ಪೀಠ, ಮನವಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

Leave A Reply

Your email address will not be published.