ಡಿಜಿಟಲ್ ಜಗತ್ತಿಗೆ ಕಾದಿದೆ ಭಾರೀ ಗಂಡಾತರ..! ಇಂಟರ್ನೆಟ್ ಸೇವೆಗೂ ತಟ್ಟಿದ ಯುದ್ಧದ ಭೀತಿ..!
Iran Israel War Effect: ಮಧ್ಯಪ್ರಾಚ್ಯದಲ್ಲಿ ಸಂಭವಿಸುತ್ತಿರುವ ಯುದ್ಧದ ಆತಂಕ ಸಂಪೂರ್ಣ ವಿಶ್ವಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಎಫೆಕ್ಟ್ ನೀಡಿದೆ. ಬಹುತೇಕ ದೇಶಗಳು ಎಲ್ಪಿಜಿ ಹಾಗೂ ತೈಲ ಅಭಾವದ ಸಂಕಷ್ಟವನ್ನೇ ಸಹಿಸಿಕೊಳ್ಳಲು ಸಾಧ್ಯವಾಗದೇ ಬಿಕ್ಕಟ್ಟಿಗೆ ಸಿಲುಕಿದೆ. ಇವುಗಳನ್ನೇ ನಂಬಿಕೊಂಡಿರುವ ಉದ್ಯಮಗಳು ನೆಲಕಚ್ಚಿವೆ. ಆದರೆ ಇದೀಗ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಯುದ್ಧದ ಕರಿಛಾಯೆ ಆವರಿಸಿದ್ದು ಈ ಬಾರಿ ಇದರ ಎಫೆಕ್ಟ್ ಕೇವಲ ತೈಲೋತ್ಪನ್ನಗಳಿಗೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಸಂಪೂರ್ಣ ವಿಶ್ವದ ಸಂಪರ್ಕದ ಕೊಂಡಿಯೇ ಕಳಚಿಹೋಗುವ ಅಪಾಯ ಹೆಚ್ಚಾಗಿದೆ.
ಹೌದು..! ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ 20% ಕಚ್ಚಾ ತೈಲ ಮತ್ತು 25% ಎಲ್ಎನ್ಜಿ ಪೂರೈಕೆ ಕಾರ್ಯ ಮಾತ್ರ ನಡೆಯುವುದಿಲ್ಲ .ಬದಲಾಗಿ ಸಂಪೂರ್ಣ ವಿಶ್ವದ ಇಂಟರ್ನೆಟ್ ಯುಗವೇ ಹಾರ್ಮುಜ್ ಜಲಸಂಧಿಯ ಒಡಲಲ್ಲಿ ಅಡಗಿದೆ. ಇಂಟರ್ನೆಟ್ಗಳು ಉಪಗ್ರಹದ ಮೂಲಕ ಕಾರ್ಯ ನಿರ್ವಹಿಸುತ್ತವೆ ಎಂಬುದು ನಿಜ. ಆದರೆ ಜಾಗತಿಕ ದತ್ತಾಂಶದ ಶೇಕಡಾ 95ರಷ್ಟು ಭಾಗವು ಸಮುದ್ರದ ಅಡಿಯಲ್ಲಿ ಹಾಕಲಾಗಿರುವ ಫೈಬರ್ ಆಪ್ಟಿಕ್ ಕೇಬಲ್ಗಳ ಮೂಲಕ ವರ್ಗಾವಣೆಯಾಗುತ್ತದೆ. ಭಾರತವನ್ನು ಯುರೋಪ್, ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾಕ್ಕೆ ಸಂಪರ್ಕಿಸುವ ಪ್ರಮುಖ ಕೇಬಲ್ ವ್ಯವಸ್ಥೆಗಳಾದ SEA-ME-WE ಮತ್ತು AAE-1 ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲೇ ಇದೆ. ಹೀಗಾಗಿ ಯುದ್ಧದಿಂದಾಗಿ ಈ ಕೇಬಲ್ಗಳು ಹಾನಿಗೊಳಗಾದರೆ ಡಿಜಿಟಲ್ ಜಗತ್ತಿಗೆ ಇಂಟರ್ನೆಟ್ನ ಅಭಾವ ಉಂಟಾಗಲಿದೆ.
ಒಂದು ವೇಳೆ ಈ ಇಂಟರ್ನೆಟ್ ಮಾರ್ಗಕ್ಕೆ ಹಾನಿಯುಂಟಾದಲ್ಲಿ ಭಾರತದ ಸುಮಾರು 23.48 ಲಕ್ಷ ಕೋಟಿ ರೂಪಾಯಿ ವ್ಯವಹಾರ ಹೊಂದಿರುವ ಐಟಿ ಕಂಪನಿಗಳು ಬಂದ್ ಆಗಲಿವೆ. ಜಾಗತಿಕ ಕಂಪನಿಗಳೊಂದಿಗೆ ಭಾರತೀಯ ಕಂಪನಿಗಳು ಮಾಡಿಕೊಂಡಿರುವ ಒಪ್ಪಂದಗಳ ಪ್ರಕಾರ, ನಿಗದಿತ ಸಮಯದಲ್ಲಿ ಸೇವೆ ಸಲ್ಲಿಸಬೇಕಿರುತ್ತದೆ. ಆದರೆ ಇಂಟರ್ನೆಟ್ ಸಂಪರ್ಕವೇ ಕಡಿತಗೊಂಡರೆ ಈ ಸೇವೆಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬಹುದೊಡ್ಡ ದಂಡ ತೆರಬೇಕಾಗಿ ಬರಲಿದೆ. ಬ್ಯಾಂಕಿಂಗ್ ವ್ಯವಸ್ಥೆ, ಸ್ಟಾಕ್ ಮಾರ್ಕೆಟ್ಗಳ ಮೇಲೂ ಇದು ಪರಿಣಾಮ ಬೀರಲಿದೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಬದಲಾಗಲಿವೆ ಈ 6 ಆರ್ಥಿಕ ನಿಯಮಗಳು : ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ
ಹೀಗಾಗಿ ಈ ಡಿಜಿಟಲ್ ಬೆದರಿಕೆಯಿಂದ ಪಾರಾಗಲು ಭಾರತ ಮುಂಜಾಗ್ರತಾ ಕ್ರಮವಾಗಿ ಈಗಿನಿಂದಲೇ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿದೆ ಎನ್ನಲಾಗಿದೆ. ಎಲಾನ್ ಮಸ್ಕ್ ಅವರ ‘ಸ್ಟಾರ್ಲಿಂಕ್’ ನಂತಹ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಬ್ಯಾಕಪ್ ಆಗಿ ಬಳಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಪೆಸಿಫಿಕ್ ಮಹಾಸಾಗರದಂತಹ ಪರ್ಯಾಯ ಮಾರ್ಗಗಳಿಗೆ ದತ್ತಾಂಶ ತಿರುಗಿಸುವ ಬಗ್ಗೆಯೂ ಯೋಚಿಸಲಾಗುತ್ತಿದೆ. ಒಟ್ನಲ್ಲಿ ಈ ಡಿಜಿಟಲ್ ಆತಂಕ ಭಾರತೀಯರಿಗೆ ಹೊಸ ಸಂಕಷ್ಟ ತರಲಿದ್ದು ಭಾರತ ಸರ್ಕಾರ ಈ ಸವಾಲನ್ನು ಹೇಗೆ ಎದುರಿಸಲಿದೆ ಎನ್ನುವುದೇ ಸದ್ಯದ ಯಕ್ಷ ಪ್ರಶ್ನೆಯಾಗಿದೆ.



