ಕ್ಯಾರಕಾಸ್: ಭೀಕರ ಭೂಕಂಪಗಳಿಂದ ತತ್ತರಿಸಿರುವ ವೆನೆಜುವೆಲಾದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಉತ್ತರ ಕರಾವಳಿ ಭಾಗದಲ್ಲಿ 4.9 ತೀವ್ರತೆಯ ಹೊಸ ಭೂಕಂಪ ದಾಖಲಾಗಿದ್ದು, ಈಗಾಗಲೇ ಸಂಕಷ್ಟದಲ್ಲಿರುವ ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಿಸಿದೆ.
ಭೂಕಂಪ ಮೇಲ್ವಿಚಾರಣಾ ಸಂಸ್ಥೆ EMSC ನೀಡಿರುವ ಮಾಹಿತಿಯಂತೆ, ಮರಕೇ ನಗರದಿಂದ ವಾಯುವ್ಯ ದಿಕ್ಕಿನ ಸುಮಾರು 61 ಕಿಲೋಮೀಟರ್ ದೂರದಲ್ಲಿ ಕಂಪನದ ಕೇಂದ್ರಬಿಂದು ದಾಖಲಾಗಿದೆ. ಮರಕೇ ಮತ್ತು ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದ್ದು, ಜನರು ಆತಂಕದಿಂದ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.
ಇದಕ್ಕೂ ಮುನ್ನ ಬುಧವಾರ ಸಂಭವಿಸಿದ್ದ ಎರಡು ಪ್ರಬಲ ಭೂಕಂಪಗಳು ದೇಶದಲ್ಲಿ ಭಾರೀ ಪ್ರಮಾಣದ ಹಾನಿ ಉಂಟುಮಾಡಿದ್ದವು. ಆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 920ಕ್ಕೆ ಏರಿಕೆಯಾಗಿದೆ. ಜೊತೆಗೆ 3,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಸಾವಿರಾರು ಕಟ್ಟಡಗಳು ಭಾಗಶಃ ಅಥವಾ ಸಂಪೂರ್ಣ ಕುಸಿದಿರುವ ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ತಮ್ಮ ಆತ್ಮೀಯರನ್ನು ಹುಡುಕುತ್ತಾ ಅವಶೇಷಗಳನ್ನು ತೆರವುಗೊಳಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ಅಲ್ಲಿನ ದುಃಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತಿವೆ. ಹಲವು ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಇನ್ನೂ ಸಂಪೂರ್ಣವಾಗಿ ತಲುಪದಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಜ್ಞರ ಪ್ರಕಾರ, ಭೂಕಂಪದ ನಂತರದ ಮೊದಲ 48 ರಿಂದ 72 ಗಂಟೆಗಳು ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ರಕ್ಷಿಸಲು ಅತ್ಯಂತ ಮಹತ್ವದ ಅವಧಿಯಾಗಿದೆ. ಇದೇ ಕಾರಣಕ್ಕೆ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಸ್ಥಳೀಯ ಆಡಳಿತದ ಮೇಲೆ ಒತ್ತಡ ಹೆಚ್ಚಾಗಿದೆ.
ಇದೀಗ ವಿಶ್ವದ ವಿವಿಧ ದೇಶಗಳಿಂದ ಎರಡು ಡಜನ್ಗಿಂತ ಹೆಚ್ಚು ಅಂತರರಾಷ್ಟ್ರೀಯ ರಕ್ಷಣಾ ತಂಡಗಳು ವೆನೆಜುವೆಲಾಕ್ಕೆ ಆಗಮಿಸಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಯಂತ್ರೋಪಕರಣಗಳೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳುವ ಪ್ರಯತ್ನ ಮುಂದುವರಿದಿದೆ.



