ಚೀನಾದಲ್ಲಿ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಶವಪೆಟ್ಟಿಗೆ ಏರಿದ ಖದೀಮ.. ಪೊಲೀಸರ ಕೈಯಲ್ಲಿ ಇಡೀ ಕುಟುಂಬವೇ ಲಾಕ್!
ಜೈಲು ಶಿಕ್ಷೆಯಿಂದ ಬಚಾವಾಗಲು ತಾನೇ ಸತ್ತುಹೋದಂತೆ ನಟಿಸಿ ಶವಪೆಟ್ಟಿಗೆಯೊಳಗೆ ಮಲಗಿ ನೂರಾರು ಕಿಲೋಮೀಟರ್ ದೂರ ಪರಾರಿಯಾದ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್‌ನಲ್ಲಿ ನಡೆದಿದೆ!

ಬೀಜಿಂಗ್ (ಜುಲೈ 22): ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ ವ್ಯಕ್ತಿಯೊಬ್ಬ, ಜೈಲು ಶಿಕ್ಷೆಯಿಂದ ಬಚಾವಾಗಲು ತಾನೇ ಸತ್ತುಹೋದಂತೆ ನಟಿಸಿ ಶವಪೆಟ್ಟಿಗೆಯೊಳಗೆ ಮಲಗಿ ನೂರಾರು ಕಿಲೋಮೀಟರ್ ದೂರ ಪರಾರಿಯಾದ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್‌ನಲ್ಲಿ ನಡೆದಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಈಗ ಸಖತ್ ವೈರಲ್ ಆಗಿದೆ.
ಈ ವ್ಯಕ್ತಿ ಹಿಂದೆ ಎರಡು ಬಾರಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ. ಕಳೆದ ವರ್ಷದ ಜನವರಿಯಲ್ಲಿ ಮೂರನೇ ಬಾರಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವಾಗ ಪೊಲೀಸರು ಈತನನ್ನು ಮತ್ತೆ ಬಂಧಿಸಿದ್ದರು.
ಚೀನಾದ ಕಠಿಣ ಕಾನೂನಿನ ಪ್ರಕಾರ ಡ್ರಂಕ್ ಅಂಡ್ ಡ್ರೈವ್ ಬೃಹತ್ ಅಪರಾಧ. ಇದಕ್ಕೆ 6 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಈಗಾಗಲೇ ಸಾಲದ ಸುಳಿಯಲ್ಲಿದ್ದ ಈ ವ್ಯಕ್ತಿ, ಮತ್ತೊಮ್ಮೆ ಜೈಲಿಗೆ ಹೋದರೆ ಜೀವನವೇ ಹಾಳಾಗುತ್ತದೆ ಎಂದು ಹೆದರಿ ಖತರ್ನಾಕ್ ಪ್ಲಾನ್ ಮಾಡಿದ್ದಾನೆ.
ಮುಂಚಿತವಾಗಿಯೇ ಶವಪೆಟ್ಟಿಗೆಯನ್ನು ಖರೀದಿಸಿದ್ದ ಈತ, ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿ ಸತ್ತಂತೆ ನಟಿಸಲು ಖಾಲಿ ಔಷಧದ ಬಾಟಲಿಗಳನ್ನು ಹರಡಿದ್ದ.ತನ್ನ ದೇಹ ತಣ್ಣಗಾಗಿಸಲು ಕೂಲಿಂಗ್ ಉಪಕರಣಗಳನ್ನು ಬಳಸಿ, ಉಸಿರು ಬಿಗಿಹಿಡಿದು ಶವಪೆಟ್ಟಿಗೆಯಲ್ಲಿ ಮಲಗಿದ್ದ. ಆತನ ಮುಖ ವಿರೂಪಗೊಂಡಿದೆ ಎಂದು ಸುಳ್ಳು ಹೇಳಿ ತಾಯಿ ಮತ್ತು ಅಜ್ಜಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿದ್ದರು. ರಾತ್ರಿಯಾಗುತ್ತಿದ್ದಂತೆ ಯಾರೂ ನೋಡದಂತೆ ಆತನನ್ನು ರಹಸ್ಯವಾಗಿ ಎಬ್ಬಿಸಿ, ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯಕ್ಕೆ ಕಳುಹಿಸಿಕೊಟ್ಟಿದ್ದರು.
ಪೊಲೀಸರ ತನಿಖೆಯಲ್ಲಿ ಸಿಕ್ಕಿಬಿದ್ದದ್ದು ಹೇಗೆ?
ಆ ವ್ಯಕ್ತಿ ತೀರಿಕೊಂಡಿದ್ದಾನೆ ಎಂಬ ಸುದ್ದಿ ತಿಳಿದು ಪೊಲೀಸರು ತನಿಖೆಗೆ ಬಂದಾಗ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು:
ವ್ಯಕ್ತಿ ಸತ್ತಾಗ ಕುಟುಂಬದವರು ಯಾವುದೇ ವೈದ್ಯರಿಗಾಗಲಿ, ತುರ್ತು ಆಂಬ್ಯುಲೆನ್ಸ್‌ಗಾಗಲಿ ಕರೆ ಮಾಡಿರಲಿಲ್ಲ.ಯಾವುದೇ ಅಧಿಕೃತ ಮರಣ ಪ್ರಮಾಣಪತ್ರ (Death Certificate) ಅಥವಾ ಶವದಹನ ಮಾಡಿದ ದಾಖಲೆಗಳಿರಲಿಲ್ಲ.ತಾಯಿ ಮತ್ತು ಅಜ್ಜಿಯನ್ನು ಹೊರತುಪಡಿಸಿ ಬೇರೆ ಯಾರೂ ಶವವನ್ನು ನೋಡಿರಲಿಲ್ಲ. ಅನುಮಾನಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಬ್ಯಾಂಕ್ ವಹಿವಾಟು ಹಾಗೂ ಫೋನ್ ಡೇಟಾವನ್ನು ಆಧರಿಸಿ ತನಿಖೆ ನಡೆಸಿದಾಗ ಆತ ಜೀವಂತವಾಗಿರುವುದು ಸಂಪೂರ್ಣ ಖಾತ್ರಿಯಾಯಿತು.
ದೀರ್ಘ ಶೋಧದ ನಂತರ ಈ ವರ್ಷದ ಏಪ್ರಿಲ್‌ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರು. ನ್ಯಾಯಾಲಯ ಆತನಿಗೆ 5 ತಿಂಗಳ ಜೈಲು ಶಿಕ್ಷೆ ಹಾಗೂ 20,000 ಸುಮಾರು 2.35 ಲಕ್ಷ ರೂ.) ದಂಡ ವಿಧಿಸಿದೆ.
ಅಷ್ಟೇ ಅಲ್ಲದೆ, ಅಪರಾಧಿಗೆ ರಕ್ಷಣೆ ನೀಡಿ, ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಜೂನ್ 11 ರಂದು ಆತನ ತಾಯಿ ಮತ್ತು ಅಜ್ಜಿಯ ವಿರುದ್ಧವೂ ಕ್ರಿಮಿನಲ್ ತನಿಖೆ ಆರಂಭಿಸಲಾಗಿದೆ. “ಸಣ್ಣ ತಪ್ಪನ್ನು ಮುಚ್ಚಿಡಲು ಹೋಗಿ ಇಡೀ ಕುಟುಂಬವೇ ಜೈಲು ಸೇರುವಂತಾಯಿತು” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

