Turkey-Siriya earthquake: ಟರ್ಕಿ ಸಿರಿಯಾ ಗಡಿಯಲ್ಲಿ ಮತ್ತೆ 2 ಪ್ರಬಲ ಭೂಕಂಪ; 3 ಮಂದಿ ಸಾವು

ಟರ್ಕಿ: (Turkey-Siriya earthquake) ಈಗಾಗಲೇ ಎರಡು ದೇಶಗಳಲ್ಲಿ ಸಂಭವಿಸಿದ ಮೂರು ಪ್ರಬಲ ಭೂಕಂಪದಿಂದಾಗಿ ನಲವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದೂ, ಇದೀಗ ಮತ್ತೆ ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ 6.4 ಹಾಗೂ 5.8 ತೀವ್ರತೆಯಲ್ಲಿ ಎರಡು ಭೂಕಂಪಗಳು ಸಂಭವಿಸಿದೆ. ಪರಿಣಾಮ ಮೂರು ಮಂದಿ ಮೃತಪಟ್ಟಿದ್ದು, ಇನ್ನೂರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಟರ್ಕಿಯ ದಕ್ಷಿಣ ಹಟೇ ಪ್ರಾಂತ್ಯದಲ್ಲಿ ಎರಡು ಭೂಕಂಪಗಳು ಸಂಭವಿಸಿ ಕನಿಷ್ಠ 3 ಜನರು ಸಾವನ್ನಪ್ಪಿದ್ದಾರೆ ಮತ್ತು 213 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಅವರನ್ನು ಉಲ್ಲೇಖಿಸಿ ಅನಾಡೋಲು ಏಜೆನ್ಸಿ ವರದಿ ಮಾಡಿದೆ. ಫೆಬ್ರವರಿ 6 ರ ಮುಂಜಾನೆ ಟರ್ಕಿಯ ಆಗ್ನೇಯ ಕಹ್ರಮನ್ಮರಸ್ ಪ್ರಾಂತ್ಯದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಂದರ ಮೇಲೊಂದರಂತೆ ಮೂರು ಬಾರಿ ಭೂಕಂಪವಾಗಿದೆ. ಇದರ ಪರಿಣಾಮ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಧರೆಗುರುಳಿದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಅದೆಷ್ಟೋ ಮಂದಿ ಸಿಲುಕಿದ್ದರು.

ಇದರಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 46,002 ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 40,402 ಹಾಗೂ ಸಿರಿಯಾದಲ್ಲಿ 5,800 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳೂ ಕೂಡ ಇದೆ. ಹನ್ನೆರಡು ದಿನಗಳ ಹಿಂದೆ ನಡೆದ 7.8 ತೀವ್ರತೆಯ ಭೂಕಂಪಕ್ಕೆ ಟರ್ಕಿಯಲ್ಲಿ 5 ಲಕ್ಷ ಕಟ್ಟಡಗಳು ನೆಲಸಮವಾಗಿದ್ದು, ಸಾಕಷ್ಟು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ಕಟ್ಟಡಗಳ ಅವಶೇಷದಡಿಯಲ್ಲಿ ಸಿಲುಕಿದ್ದ ಜನರ ರಕ್ಷಣಾ ಕಾರ್ಯಚರಣೆ ಭಾನುವಾರ ಬಹುತೇಕ ಅಂತ್ಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಎನ್‌ಡಿಆರ್‌ಎಫ್‌ನ ಮೂರೂ ತಂಡಗಳು ತಮ್ಮ ಕಾರ್ಯಾಚರಣೆ ಮುಗಿಸಿ ಭಾನುವಾರ ಭಾರತಕ್ಕೆ ಮರಳಿತ್ತು. ಆದರೆ ಇದೀಗ ಮತ್ತೆ ಎರಡು ಬಾರಿ ಭೂಕಂಪ ಸಂಭವಿಸಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಟರ್ಕಿಯಲ್ಲಿ ಭೂಕಂಪನ : ಸಿರಿಯಾದಲ್ಲಿ 34,000ಕ್ಕೇರಿದ ಸಾವಿನ ಸಂಖ್ಯೆ

ಇದನ್ನೂ ಓದಿ : Landslide in Brazil: ಬ್ರೆಜಿಲ್‌ನಲ್ಲಿ ಭೂಕುಸಿತ 24 ಮಂದಿ ಸಾವು

Turkey-Siriya earthquake: Turkey-Syria border again 2 strong earthquake; 3 people died

Comments are closed.