ರಾಜ್ಯದಲ್ಲಿ ಮಿತಿಮೀರಿದ ಬಿರುಬೇಸಿಗೆಯ ಬವಣೆ: ಸರ್ಕಾರಿ ನೌಕರರ ಕಚೇರಿ ಸಮಯ ಬದಲಾವಣೆ
ರಾಜ್ಯದಲ್ಲಿ ಬಿಸಿಲ ಬೇಗೆ ಮಿತಿಮೀರಿದೆ (Temperature In Karnataka). ಹೆಚ್ಚುತ್ತಿರುವ ಬಿಸಿಲ ಬೇಗೆಯನ್ನು ಗಮನದಲ್ಲಿರಿಸಿ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಹೊರಡಿಸಿದೆ. ಅದೇನೆಂದರೆ ಸರ್ಕಾರಿ ಕಚೇರಿಗಳ ನಿರ್ವಹಣೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಈ ಹೊಸ ನಿಯಮವು ಕಿತ್ತೂರು ಕರ್ನಾಟಕ ಭಾಗದಲ್ಲಿರುವ 7 ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೆ ಮಾತ್ರ ಸೀಮಿತವಾಗಿದೆ. ಈ ಭಾಗದಲ್ಲಿ ಬಿಸಿಲ ಝಳ ಮಿತಿಮೀರಿ ಹೋಗಿದ್ದು ಹಿರಿಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದಾಗಿ ರಾಜ್ಯ ಸರ್ಕಾರವು ಈ ಪ್ರಮುಖ ನಿರ್ಧಾರ ಕೈಗೊಂಡಿದೆ.
ಈ ಹೊಸ ನಿಯಮವು ಏಪ್ರಿಲ್ 1 ರಿಂದ ಮೇ ತಿಂಗಳ ಅಂತ್ಯದವರೆಗೂ ಇರಲಿದೆ.. ಸಾಮಾನ್ಯ ಸರ್ಕಾರಿ ಕಚೇರಿಗಳ ಸಮಯದ ಬದಲಾಗಿ ಬೆಳಗ್ಗೆ 8 ರಿಂದ ಮಧ್ಯಾಹ್ನ1:30ರವರೆಗೆ ಕಾರ್ಯನಿರ್ವಹಿಸುವಂತೆ ಈ ಭಾಗದ ಸರ್ಕಾರಿ ಕಚೇರಿಗಳಿಗೆ ರಾಜ್ಯ ಸರ್ಕಾರವು ಸೂಚನೆ ಹೊರಡಿಸಿದೆ. ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳು, ಕಲಬುರಗಿ ವಿಭಾಗದ ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಮುಂದಿನ 2 ತಿಂಗಳುಗಳ ಕಾಲ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು ಮಧ್ಯಾಹ್ನ 1 :30ಕ್ಕೆ ಬಂದ್ ಆಗಲಿವೆ.
ಈ ಭಾಗದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಸಹಿಸಲು ಆಗದಷ್ಟು ತೀವ್ರವಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರಿ ಕಛೇರಿಗಳ ಸಮಯಾವಧಿಯಲ್ಲಿ ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಈ ಪ್ರಸ್ತಾವನೆಯನ್ನು ಕುಲಂಕುಷವಾಗಿ ಪರಿಶೀಲಿಸಿದ ರಾಜ್ಯ ಸರ್ಕಾರ ಮಾನವೀಯತೆಯ ದೃಷ್ಠಿಯಿಂದ ಈ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಬಿರು ಬಿಸಿಲಿನಲ್ಲಿ ಅಲೆದಾಡುವ ಕಾಟ ತಪ್ಪಲಿದೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಬದಲಾಗಲಿವೆ ಈ 6 ಆರ್ಥಿಕ ನಿಯಮಗಳು : ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ
ಇನ್ನು ಸರ್ಕಾರದಿಂದ ಹೊರಡಿಸಲಾದ ಆದೇಶ ಪ್ರತಿಯಲ್ಲಿ ,ಪರಿಷ್ಕರಿಸಿದ ಸಮಯದ ಅವಧಿಯಲ್ಲಿ ಸರ್ಕಾರಿ ನೌಕರರು ಕಡ್ಡಾಯವಾಗಿ ಸೇವೆಗೆ ಹಾಜರಿರಬೇಕು. ಸಾರ್ವಜನಿಕರಿಂದ ಯಾವುದೇ ರೀತಿಯ ಅನಾನುಕೂಲ ಉಂಟಾಗದಂತೆ ನೋಡಿಕೊಳ್ಳಬೇಕು. ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಮಯದ ಪರಿ ಇಲ್ಲದೇ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು ಎಂದು ಸೂಚಿಸಲಾಗಿದೆ



