ರಾಜ್ಯದಲ್ಲಿ ಮುಂಗಾರು ಪೂರ್ವ ಅಬ್ಬರ..! ಮುಂದಿನ 1 ವಾರ ಭಾರೀ ಮಳೆ ಮುನ್ಸೂಚನೆ!
ಪೂರ್ವ ಮುಂಗಾರು ಮಾರುತಗಳು ಚುರುಕುಗೊಂಡಿರುವುದರಿಂದ ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಾಗಲಿದೆ.

ಪೂರ್ವ ಮುಂಗಾರು ಮಾರುತಗಳು ಚುರುಕುಗೊಂಡಿರುವುದರಿಂದ ಕರ್ನಾಟಕದಲ್ಲಿ ವರುಣನ ಅಬ್ಬರ ಜೋರಾಗಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ಮೇ 22 ರಿಂದ ಮೇ 28 ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ನೈಋತ್ಯ ಮುಂಗಾರು ಆರಂಭಕ್ಕೆ ಮಾಲ್ಡೀವ್ಸ್ ಮತ್ತು ಬಂಗಾಳ ಕೊಲ್ಲಿಯಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿರುವುದು ಈ ಬಾರಿಯ ಮುಂಚಿತ ಮಳೆಗೆ ಪ್ರಮುಖ ಕಾರಣವಾಗಿದೆ.
ಇನ್ನು ಎಲ್ಲೆಲ್ಲಿ ಯಾವ್ಯಾವ ದಿನ ಮಳೆಯ ಅಬ್ಬರ ಜಾಸ್ತಿ ಇರಲಿದೆ ಅನ್ನೋದನ್ನ ನೋಡುವುದಾದರೆ, ಇಂದು ಬಾಗಲಕೋಟೆ, ಕೊಪ್ಪಳ, ವಿಜಯಪುರ, ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಭೋರ್ಗರೆದು ಮಳೆ ಸುರಿಯಲಿದೆ. ಭಾನುವಾರದಿಂದ ಮಂಡ್ಯ, ಮೈಸೂರು, ತುಮಕೂರು ಮತ್ತು ಹಾಸನ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ವರುಣ ಆರ್ಭಟಿಸಲಿದ್ದಾನೆ.ಮೇ 25 ಮತ್ತು 26ರಂದು ಮಳೆಯ ತೀವ್ರತೆ ಕೊಂಚ ತಗ್ಗಲಿದೆಯಾದರೂ, ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಜಿಟಿಜಿಟಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮೇ 27 ಹಾಗೂ 28ರಂದು ಕರಾವಳಿ ತೀರದ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೊಮ್ಮೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.
ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಬೇಡಿಕೆ! ಪ್ರಕರಣ ದಾಖಲು
ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಭಾಗಗಳಲ್ಲಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಮಳೆಯಾಗುವ ಸಂಭವವಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಜಾಗರೂಕರಾಗಿರಲು ಸೂಚಿಸಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಗಂಟೆಗೆ 60 ಕಿ.ಮೀ ವೇಗದ ಚಂಡಮಾರುತದಂತಹ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇನ್ನು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಶಿವಮೊಗ್ಗ, ಕೊಡಗು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ. ಆದರೆ ಮಳೆಯ ನಡುವೆಯೂ ಮುಂದಿನ 5 ದಿನಗಳ ಕಾಲ ಉರಿ ಸೆಖೆಯ ತಾಪಮಾನದಲ್ಲಿ ಯಾವುದೇ ದೊಡ್ಡ ಇಳಿಕೆ ಕಂಡುಬರುವುದಿಲ್ಲ ಎಂದು ವರದಿಯಾಗಿದೆ.



