Happy Makar Sankranti 2022: ಮಕರ ಸಂಕ್ರಾಂತಿಗೆ ಎಳ್ಳು–ಬೆಲ್ಲದ ಸವಿ; ಮನೆಯಲ್ಲೇ ಸಿಹಿಸಿಹಿಯಾದ ಖಾದ್ಯ ಮಾಡುವ ವಿಧಾನ ತಿಳಿಯಿರಿ

ಸಂಕ್ರಾಂತಿ ( Happy Makar Sankranti 2022) ಎಂದರೆ ಮೊದಲಿಗೆ ನೆನಪಿಗೆ ಬರುವುದು ಎಳ್ಳು–ಬೆಲ್ಲ(Ellu-Bella), ಸಕ್ಕರೆ ಅಚ್ಚು, ಪೊಂಗಲ್‌, ಹೆಸರುಕಾಳಿನ ಹುಗ್ಗಿ; ಒಂದೆ ಎರಡೇ. ಮಕ್ಕಳಿಗಂತೂ ಬಣ್ಣ–ಬಣ್ಣದ ಡಬ್ಬಿಗಳಲ್ಲಿ ಎಳ್ಳು ಬೆಲ್ಲ ತುಂಬಿಸಿಕೊಂಡು, ಹೊಸ ಬಟ್ಟೆ ತೊಟ್ಟು ಓಡಾಡುವ (Happy Makar Sankranti 2022) ಸಂಭ್ರಮವೇ ಸಂಭ್ರಮ. ಮನೆಯಲ್ಲಿ ಹೇಳಿಕೊಡುವ ‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ’ ಎನ್ನುವ ಮಾತನ್ನು ಸ್ನೇಹಿತರಿಗೆ ತಾವೇ ಮೊದಲು ಹೇಳಬೇಕೆಂಬ ಆಸೆಯಲ್ಲಿ ಹೋಗುವ ಮಕ್ಕಳು. ತಮ್ಮ ಗೆಳೆಯರ ಮನೆಯಲ್ಲಿ ಮಾಡುವ ಎಳ್ಳು–ಬೆಲ್ಲದ ವರ್ಣನೆಯನ್ನು ಹೇಳುತ್ತಾ ‘ಅಮ್ಮ, ಈ ವರ್ಷ ಎಳ್ಳು ಮಾಡಬೇಕಾದರೆ ಶೇಂಗಾ ಹಾಕು, ಬೆಲ್ಲದ ಪೀಸ್‌ ಸ್ವಲ್ಪ ಜಾಸ್ತಿ ಹಾಕು’ ಎಂದೆಲ್ಲಾ ಹೇಳುತ್ತಾರಲ್ಲವೇ? ಹಾಗಾದರೆ ಸಂಕ್ರಾಂತಿಗೆ ಎಳ್ಳು–ಬೆಲ್ಲ ಹೇಗೆ ಮಾಡುವುದು ಹೇಗೆಂದು ಪಾಕ ಪ್ರವೀಣೆ ಅರ್ಚನಾ ಹೆಗಡೆ ಅವರು ರುಚಿರುಚಿಯಾಗಿ ವಿವರಿಸಿದ್ದಾರೆ.

ಸಂಕ್ರಾಂತಿಗೆ ಎಳ್ಳು–ಬೆಲ್ಲ ಮಾಡುವುದು ಹೇಗೆ?
ಆಯಾ ಪ್ರದೇಶಕ್ಕೆ, ಸಂಪ್ರದಾಯಕ್ಕೆ ಅನುಗುಣವಾಗಿ ಎಳ್ಳನ್ನು ತಯಾರಿಸುತ್ತಾರಲ್ಲವೇ? ಆದರೆ, ಸಾಮಾನ್ಯವಾಗಿ ಎಲ್ಲರೂ ಸುಲಭವಾಗಿ ಮಾಡಬಹುದಾದ ಎಳ್ಳು–ಬೆಲ್ಲದ ಕ್ರಮ ಇಲ್ಲಿದೆ. ಹಬ್ಬದ ಸಡಗರ ಸಂಭ್ರಮದಲ್ಲಿ (Makar Sankranti 2022) ಎಳ್ಳು ಬೆಲ್ಲ ಮಾಡುವುದು ಹೇಗೆಂದು ತಿಳಿದು ನೀವೂ ಪ್ರಯತ್ನಿಸಿ.

ಬೇಕಾಗುವ ಸಾಮಗ್ರಿ
ಎಳ್ಳು –ಒಂದು ಕಪ್‌
ಬೆಲ್ಲ –ಅರ್ಧ ಅಚ್ಚು
ತುರಿದ ಕೊಬ್ಬರಿ – ಅರ್ಧ ಕಪ್‌
ಶೇಂಗಾ –ಕಾಲು ಕಪ್‌
ಪುಟಾಣಿ–ಕಾಲು ಕಪ್‌
ಏಲಕ್ಕಿ ಪುಡಿ –ಕಾಲು ಚಮಚ
ಸಕ್ಕರೆ– ಕಾಲು ಕಪ್‌

ಮಾಡುವುದು ಹೇಗೆ ?

  • ಎಳ್ಳನ್ನು ಸ್ವಚ್ಛಗೊಳಿಸಿ ಹುರಿದಿಟ್ಟುಕೊಳ್ಳಿ.
  • ಶೇಂಗಾ(ಕಡಲೆಕಾಳು ಬೀಜ)ವನ್ನು ಹುರಿದು ಮೇಲಿನ ಸಿಪ್ಪೆ ತಗೆಯಿರಿ.
  • ಕೊಬ್ಬರಿಯ ಹಿಂಭಾಗವನ್ನು ಪೀಲರ್‌ ನಿಂದ ಸ್ವಚ್ಛಗೊಳಿಸಿ, ತುರಿದುಕೊಳ್ಳಿ ಅಥವಾ ಚಿಕ್ಕದಾಗಿ ಹೆಚ್ಚಿಕೊಳ್ಳಿ.
  • ಪುಟಾಣಿಯನ್ನು ಸ್ವಲ್ಪ ಬೆಚ್ಚಗೆ ಮಾಡಿ.
  • ಬೆಲ್ಲದ ಅಚ್ಚನ್ನು ಚಿಕ್ಕದಾಗಿ ಪೀಸ್‌ ಮಾಡಿಟ್ಟುಕೊಳ್ಳಿ.

ಹುರಿದಿಟ್ಟುಕೊಂಡ ಎಳ್ಳು ಮತ್ತು ಸಕ್ಕರೆಯನ್ನು ಮಿಕ್ಸರ್‌ನಲ್ಲಿ ಒಂದು ಸುತ್ತು(ತರಿತರಿಯಾಗಿ) ತಿರುಗಿಸಿ, ಅದಕ್ಕೆ ತುರಿದುಕೊಂಡ ಕೊಬ್ಬರಿ, ಶೇಂಗಾ, ಬೆಲ್ಲದ ಪೀಸ್‌ಗಳು, ಪುಟಾಣಿ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಈಗ ಸಿದ್ಧವಾಯಿತು ಎಳ್ಳು–ಬೆಲ್ಲ. ಮಕ್ಕಳ ಡಬ್ಬಿಗೆ ಅಂಗಡಿಯಲ್ಲಿ ಸಿಗುವ ಸಂಕ್ರಾಂತಿ ಕಾಳುಗಳನ್ನು ಸ್ವಲ್ಪ ಸೇರಿಸಿ ಕೊಡಿ. ಆಗ ಮಕ್ಕಳಿಗೂ ಖುಷಿ ತಯಾರಿಸಿದವರಿಗೂ ಖುಷಿ.

ವಿಶೇಷ ಬರಹ: ಅರ್ಚನಾ ಹೆಗಡೆ

ಇದನ್ನೂ ಓದಿ: Makara Sankranti 2022 Astrology : ದ್ವಾದಶ ರಾಶಿಗಳ ಮಕರ ಸಂಕ್ರಾಂತಿ ಸೂರ್ಯ ಗೋಚಾರ ಫಲಗಳು

(Happy Makar Sankranti 2022 How to make Ellu Bella for this festival)

Comments are closed.