ಬೇಸಿಗೆಗೂ ಸೈ ತೂಕ ಇಳಿಕೆಗೂ ಜೈ! ಬಿಸಿಲಿನ ಬೇಗೆ ತಣಿಸುವ ತಂಪು ತಂಪು ಪಾನೀಯಗಳು

ತೂಕ ಇಳಿಕೆ ಮತ್ತು ಬೇಸಿಗೆಯ ಬಿಸಿಲಿಗೆ ಬೆಸ್ಟ್‌ ಎನಿಸುವ 5 ಪಾನೀಯಗಳು ಇಲ್ಲಿವೆ.

ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಅದರಲ್ಲೂ ಇಂದಿನ ದಿನಗಳಲ್ಲಂತೂ ಕಷ್ಟಸಾಧ್ಯವೇ ಸರಿ. ವಾಕಿಂಗ್‌ ಮಾಡ್ತಾ ಇದ್ರೂ ಕೆಲವರ ತೂಕ ಇಳಿಯುವ ಲಕ್ಷಣಗಳ್ಯಾವವೂ ಕಾಣಿಸುವುದಿಲ್ಲ. ಆದರೆ ಬೇಸಿಗೆ ಅದಕ್ಕೊಂದು ಉತ್ತಮ ಅವಕಾಶ ಮಾಡಿಕೊಡುತ್ತದೆ. ಏಕೆಂದರೆ ದ್ರವಾಹಾರ ಸೇವನೆ ಹೆಚ್ಚಾಗುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪೇನೆಂದರೆ ತೂಕ ಇಳಿಸಿಕೊಳ್ಳುವ ಭರದಲ್ಲಿ ಪೋಷಕಾಂಶಗಳನ್ನು ದೇಹಕ್ಕೆ ಪೂರೈಸುವುದನ್ನು ಕಡಿಮೆ ಮಾಡುತ್ತಾರೆ. ಆದರೆ ಪೋಷಕಾಂಶ ಒದಗಿಸುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಲು ಪಾನೀಯಗಳು ಉತ್ತಮವಾಗಿವೆ. ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ಡಿಟಾಕ್ಸ್‌ ಮಾಡಿ ಸೇವಿಸಿದ ಆಹಾರ ಸಮರ್ಪಕವಾಗಿ ದೇಹ ಸೇರುವಂತೆ ಮಾಡುತ್ತದೆ. ಹಾಗಾದರೆ ತೂಕ ಇಳಿಕೆ ಮತ್ತು ಬೇಸಿಗೆಗೆ ಬೆಸ್ಟ್‌ ಎನಿಸುವ 5 ಪಾನೀಯಗಳು ಇಲ್ಲಿವೆ.

ನಿಂಬೆ–ಪುದೀನಾ ನೀರು

ನಿಂಬೆಹಣ್ಣ ದೇಹವನ್ನು ತಂಪಾಗಿಸುವ ಹಾಗೂ ನಿರ್ಜಲೀಕರಣ ದೂರಮಾಡುವ ಗುಣ ಹೊಂದಿದೆ. ಇದು ವೇಗವಾಗಿ ತೂಕ ಇಳಿಸುತ್ತದೆ. ತ್ವಚೆಯ ಸೌಂದರ್ಯ ಕಾಪಾಡುತ್ತದೆ. ಹಾಗಾಗಿ ನಿಂಬೂ ನೀರಿಗೆ ಸ್ವಲ್ಪ ಪುದೀನಾ ಎಲೆಗಳನ್ನು ಸೇರಿಸಿ ಕುಡಿಯಿರಿ. ಅಜೀರ್ಣ ಸಮಸ್ಯೆಗೆ ಇದರಲ್ಲಿ ಪರಿಹಾರವಿದೆ.

ಸೌತೆಕಾಯಿ ಜ್ಯೂಸ್‌

ಬೇಸಿಗೆಯ ಸೂಪರ್ ಫುಡ್‌ಗಳಲ್ಲಿ ಸೌತೆಕಾಯಿಯೂ ಒಂದು. ಇದರಲ್ಲಿ ನೀರು, ವಿಟಮಿನ್ ಬಿ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುತ್ತದೆ. ಸೌತೆಕಾಯಿ ಕಡಿಮೆ ಕ್ಯಾಲೋರಿಯನ್ನು ಹೊಂದಿರುವುದರಿಂದ ತೂಕ ಇಳಿಕೆಗೆ ಉತ್ತಮವಾಗಿದೆ. ಇದು ಬಹಳ ಸಮಯದವರೆಗೆ ಹಸಿವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಆರೋಗ್ಯದ ವರ್ಧನೆಗೆ ಬೆಸ್ಟ್‌ ಟೊಮೆಟೊ ಸೂಪ್‌: ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ

ಆಪಲ್‌ ದಾಲ್ಚಿನ್ನು ಜ್ಯೂಸ್‌

ಆಪಲ್‌ ಅಥವಾ ಸೇಬು ದೇಹಕ್ಕೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಸೇಬು ಮತ್ತು ದಾಲ್ಚಿನ್ನಿ ಇವೆರಡು ಕೊಬ್ಬನ್ನು ಕರಗಿಸುವ ಕೆಲಸ ಮಾಡುತ್ತದೆ. ಒಂದು ಬಾಟಲ್ ನೀರಿಗೆ ಒಂದು ತುಂಡು ದಾಲ್ಚಿನ್ ಮತ್ತು ಆಪಲ್‌ ಸೀಡರ್‌ ವಿನೆಗರ್‌ ಸೇರಿಸಿ. ಆ ನೀರು ದೇಹವನ್ನು ಡಿಟಾಕ್ಸ್‌ ಮಾಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ. ಇದು ಬಹಳ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ನೀವೂ ಆಪಲ್‌ ಜ್ಯೂಸ್‌ ಕೂಡಾ ಕುಡಿಯಬಹುದು. ಅದಕ್ಕೆ ಚಿಕ್ಕ ದಾಲ್ಚಿನ್ನಿ ಸೇರಿಸಿ ಕುಡಿಯಿರಿ.

ದ್ರಾಕ್ಷಿಹಣ್ಣಿನ ಡಿಟಾಕ್ಸ್ ನೀರು

ದ್ರಾಕ್ಷಿಹಣ್ಣು ತೂಕ ಇಳಿಸಿಕೊಳ್ಳುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಊಟಕ್ಕೂ ಮೊದಲು ಸೇವಿಸಿದಾಗ, ಇದು ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಬ್ಬನ್ನು ಸುಡುವ ಸಾಮರ್ಥ್ಯವನ್ನು ವೇಗಗೊಳಿಸುತ್ತದೆ. ಸ್ವಲ್ಪ ದ್ರಾಕ್ಷಿಹಣ್ಣನ್ನು ತೆಗೆದುಕೊಂಡು ಅದರ ರಸ ತೆಗೆಯಿರಿ. ಅದನ್ನು ಆಗಾಗ ಕುಡಿಯುತ್ತಿರಿ.

ಕಿತ್ತಳೆ ಜ್ಯೂಸ್

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿ ದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸುವ ಬದಲು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬೇಸಿಗೆಯಲ್ಲಿ ರುಚಿಯಾದ ಕಿತ್ತಳೆ ಜ್ಯೂಸ್‌ ಮಾಡಿ ಸವಿಯಿರಿ.

 

 

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.