ಮಂಗಳೂರು : ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ ಎಂಬಂಥಾ ಸ್ಥಿತಿಯಲ್ಲಿ ಸದ್ಯ ಮಂಗಳೂರಿಗರಿದ್ದಾರೆ. ಏಕೆಂದರೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್ ಸೆಕ್ಷನ್ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿತ್ತು. ಇನ್ನು ವಂದೇ ಭಾರತ್ ರೈಲಿನ ಸೌಲಭ್ಯ ಅನುಭವಿಸಬಹುದು. ರಾಜಧಾನಿಗೆ ತ್ವರಿತ ಪ್ರಯಾಣ ಕೈಗೊಳ್ಳಬಹುದು ಎಂದೆಲ್ಲಾ ಕನಸು ಕಂಡಿದ್ದ ಕರಾವಳಿಗರಿಗೆ ಭಾರೀ ನಿರಾಶೆಯುಂಟಾಗಿದೆ.
ಹೌದು..! ಕರ್ನಾಟಕದ ಕರಾವಳಿಯ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಮಂಗಳೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗುತ್ತಿಲ್ಲ. ಭಾರತೀಯ ರೈಲ್ವೆ ಇಲಾಖೆಯ ಈ ನಿರ್ಧಾರ ಕರಾವಳಿಗರಿಗೆ ಶಾಕ್ ಉಂಟು ಮಾಡಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ್ ರೈಲು ಕರ್ನಾಟಕದ ಕರಾವಳಿಯಲ್ಲಿಯೂ ನಿಲುಗಡೆ ಇರಲಿದೆ ಎಂದು ಹೇಳಿದ್ದರು. ಮಂಗಳೂರು ರೈಲ್ವೆ ನಿಲ್ದಾಣದಿಂದ ಹಾದು ಹೋಗುತ್ತಿದ್ದರೂ ಇಲ್ಲಿ ಸ್ಟಾಪ್ ನೀಡದೇ ಇರುವುದು ಮಂಗಳೂರಿಗರ ಕೆಂಗಣ್ಣಿಗೆ ಗುರಿ ಮಾಡಿದೆ.
ಇದನ್ನೂ ಓದಿ: ಕಾರ್ಕಳ : ಅಂಬೇಡ್ಕರ್ ಭವನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ : ಹಲವು ಬೇಡಿಕೆಗಳ ಈಡೇರಿಕೆಯ ಅಭಯ
ಯಶವಂತಪುರ ಮಡಂಗಾವ್ ರೈಲು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮಾರ್ಗವಾಗಿ ಪಡೀಲ್ ಹಾಗೂ ತೋಕೂರು ಮೂಲಕ ಸಂಜೆ 7.15ಕ್ಕೆ ಮಡಗಾಂವ್ ತಲುಪುತ್ತದೆ. ಅಂತೆಯೇ ಮಡಂಗಾವ್ನಿಂದ ಬೆಳಗ್ಗೆ 5:15ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪುತ್ತದೆ. ಈ ರೈಲಿನಲ್ಲಿ ಸುಬ್ರಹ್ಮಣ್ಯದಲ್ಲಿ ಮಾತ್ರ ನಿಲುಗಡೆಗೆ ಸೂಚಿಸಲಾಗಿದೆ. ಪಡೀಲ್ ರೈಲ್ವೆ ನಿಲ್ದಾಣ ಮಾರ್ಗದಲ್ಲಿಯೇ ಹಾದು ಹೋಗುತ್ತಿದ್ದರೂ ಸಹ ಮಂಗಳೂರಿಗರಿಗೆ ಸ್ಟಾಪ್ ನೀಡದೇ ಇರುವುದು ವಿವಾದಕ್ಕೆ ದಾರಿ ಮಾಡಿದೆ. ಉಡುಪಿ ಹಾಗೂ ಕಾರವಾರ ನಿಲ್ದಾಣಗಳಲ್ಲಿಯೂ ನಿಲುಗಡೆ ನೀಡದೇ ಇರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.


