ViRosh wedding: ವೈರಲ್ ಆದ ‘ವಿರೋಶ್’ ವಿವಾಹ; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ
ViRosh wedding images | Rashmika and Vijay Deverakondas: ಉದಯಪುರ: ದಕ್ಷಿಣ ಭಾರತದ ಖ್ಯಾತ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಇಂದು (ಫೆಬ್ರವರಿ 26, 2026) ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇವರ ಮದುವೆಯ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದೆ.
ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರಶ್ಮಿಕಾ
ಮದುವೆಯ ನಂತರ ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರನ್ನು ಉದ್ದೇಶಿಸಿ, “ನಿಮ್ಮ ಹೆಂಡತಿ ಎಂದು ಕರೆಸಿಕೊಳ್ಳಲು ನಾನು ತುಂಬಾ ಉತ್ಸುಕಳಾಗಿದ್ದೇನೆ…” ಎಂದು ಬರೆಯುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸಾಂಪ್ರದಾಯಿಕ ವಧುವಿನ ಅಲಂಕಾರದಲ್ಲಿ ರಶ್ಮಿಕಾ ಮಿಂಚುತ್ತಿದ್ದರೆ, ವಿಜಯ್ ರಾಜಕುಮಾರನಂತೆ ಕಂಗೊಳಿಸುತ್ತಿದ್ದರು.
ಶಿರಸಿ ಮಾರಿಕಾಂಬಾ ಜಾತ್ರೆಗೆ ಆಗಮಿಸುವ ಭಕ್ತರಿಗೆ ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ
ರಾಜಸ್ಥಾನದ ಉದಯಪುರದಲ್ಲಿ ಇಂದು ನಡೆದ ಶುಭ ತೆಲುಗು ಮುಹೂರ್ತದಲ್ಲಿ ಈ ಜೋಡಿ ಹಸೆಮಣೆ ಏರಿದೆ. ತೆಲುಗು ಸಂಪ್ರದಾಯದಂತೆ ವಿವಾಹ ಕಾರ್ಯಗಳು ಜರುಗಿದ್ದು, ಕುಟುಂಬದ ಆಪ್ತರು ಮತ್ತು ಆಯ್ದ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ವಿಜಯ್ ಅವರ ತಾಯಿ ಮಾಧವಿ ಅವರು ಸಂಗೀತ ಸಮಾರಂಭದಲ್ಲಿ ರಶ್ಮಿಕಾ ಅವರಿಗೆ ತಮ್ಮ ಕುಟುಂಬದ ಪಾರಂಪರಿಕ ಚಿನ್ನದ ಬಳೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸೊಸೆಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಅವರು ಮದುವೆಯ ಸಂಭ್ರಮದ ಒಳಾಂಗಣ ಚಿತ್ರಗಳನ್ನು ಹಂಚಿಕೊಂಡಿದ್ದು, “ಗ್ರೂಮ್ ಸ್ಕ್ವಾಡ್” (ವರನ ತಂಡ) ಜೊತೆಗಿನ ಫೋಟೋಗಳು ವೈರಲ್ ಆಗಿವೆ.
ವೈರಲ್ ಆದ ‘ವಿರೋಶ್’ ವಿವಾಹ
ಅಭಿಮಾನಿಗಳು ಈ ಜೋಡಿಯನ್ನು ಪ್ರೀತಿಯಿಂದ “ವಿರೋಶ್” (ViRosh) ಎಂದು ಕರೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಮದುವೆಯ ಫೋಟೋಗಳಲ್ಲಿ ಇಬ್ಬರೂ ಪರಸ್ಪರ ಹಾರ ಬದಲಿಸಿಕೊಳ್ಳುವ, ಧಾರೆ ಎರೆಯುವ ಮತ್ತು ಮುಗುಳ್ನಗೆಯಿಂದ ಪರಸ್ಪರ ನೋಡುತ್ತಿರುವ ಕ್ಷಣಗಳು ಅಭಿಮಾನಿಗಳ ಮನ ಗೆದ್ದಿವೆ.
‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ತೆರೆಯ ಮೇಲೆ ಅದ್ಭುತ ಕೆಮಿಸ್ಟ್ರಿ ಹಂಚಿಕೊಂಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗಬೇಕೆಂದು ಸಾವಿರಾರು ಅಭಿಮಾನಿಗಳು ಹಾರೈಸುತ್ತಿದ್ದರು. ಇಂದು ಉದಯಪುರದ ಅರಮನೆಯ ಅಂಗಳದಲ್ಲಿ ಆ ಕನಸು ನನಸಾಗಿದೆ.



