ಕದ್ರಿ ಶ್ರೀ ಮಂಜುನಾಥ ಸನ್ನಿಧಿಗೂ ತಟ್ಟಿದ ಗ್ಯಾಸ್​ ಟ್ರಬಲ್​ : ಅಡುಗೆ ಒಲೆಯಲ್ಲಿ ಭೋಜನ ವ್ಯವಸ್ಥೆ

ಕಮರ್ಷಿಯಲ್​ ಅಡುಗೆ ಅನಿಲ ಪೂರೈಕೆಯಾಗದ ಹಿನ್ನೆಲೆಯಲ್ಲಿ ಇಂದು ದೇವಸ್ಥಾನದ ಅಡುಗೆ ಸಿಬ್ಬಂದಿ ಸೌದೆ ಒಲೆಯ ಮೊರೆ ಹೋಗಿದ್ದಾರೆ .

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಎಫೆಕ್ಟ್​ ನಾಡಿನ ದೇಗುಲಗಳ ಮೇಲೂ ತಟ್ಟಿದೆ. ನಿನ್ನೆಯಷ್ಟೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಡುಗೆ ಅನಿಲ ಅಭಾವದ ಬಗ್ಗೆ ಸುದ್ದಿಯಾಗಿತ್ತು. ಇದೀಗ ಈ ಸಾಲಿಗೆ ಮಂಗಳೂರಿನ ಸುಪ್ರಸಿದ್ಧ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಕೂಡ ಸೇರಿದೆ. ಕಮರ್ಷಿಯಲ್​ ಅಡುಗೆ ಅನಿಲ ಪೂರೈಕೆಯಾಗದ ಹಿನ್ನೆಲೆಯಲ್ಲಿ ಇಂದು ದೇವಸ್ಥಾನದ ಅಡುಗೆ ಸಿಬ್ಬಂದಿ ಸೌದೆ ಒಲೆಯ ಮೊರೆ ಹೋಗಿದ್ದಾರೆ .

ಅಪಾರ ಭಕ್ತಗಣವನ್ನು ಹೊಂದಿರುವ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಿತ್ಯ ಒಂದೂವರೆಸಾವಿರಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಹೀಗಾಗಿ ಪ್ರತಿನಿತ್ಯ ದೇಗುಲದ ಅನ್ನಪ್ರಸಾದಕ್ಕೆ ನಾಲ್ಕು ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಇದೀಗ ದೇವಸ್ಥಾನದ ಪಾಕಶಾಲೆಗೆ ಸಿಲಿಂಡರ್​ಗಳು ಪೂರೈಕೆ ಆಗದ ಕಾರಣ ಅಡುಗೆ ಸಿಬ್ಬಂದಿ ಸೌದೆ ಒಲೆಯ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಶಾಲಾ ಬಿಸಿಯೂಟಕ್ಕೆ ಯಾವುದೇ ತಡೆಯಿಲ್ಲದೆ ಎಲ್‌ಪಿಜಿ ಪೂರೈಕೆ: ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಮಹತ್ವದ ಸೂಚನೆ

 

ದೇವಸ್ಥಾನದ ಪಾಕಶಾಲೆಯ ಹೊರ ಭಾಗದಲ್ಲಿ ಎರಡು ಕಟ್ಟಿಗೆ ಒಲೆಗಳನ್ನು ನಿರ್ಮಿಸಲಾಗಿದ್ದು, ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸಲು ಹೆಚ್ಚಿನ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಅಡುಗೆ ಸಿಬ್ಬಂದಿ ಇಂದು ಬೆಳಿಗ್ಗೆಯಿಮದಲೇ ಅಡುಗೆ ಕಾರ್ಯದಲ್ಲಿ ತೊಡಗಿದ್ದದ್ದು ಕಂಡುಬಂದಿದೆ. ಮೊದಲೆಲ್ಲ ಗ್ಯಾಸ್​ ಇಂಧನ ಬಳಸಿ ಬಾಯ್ಲರ್​ ಮೂಲಕ ಅಡುಗೆ ತಯಾರಿಸಲಾಗುತ್ತಿತ್ತು. ಇದಕ್ಕೆ ಕಡಿಮೆ ಶ್ರಮದ ಅಗತ್ಯವಿತ್ತು. ಆದರೆ ಈಗ ಬಿರು ಬೇಸಿಗೆಯ ಧಗೆಯಲ್ಲಿ ಕಟ್ಟಿಗೆ ಒಲೆಯ ಎದುರು ಅಡುಗೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿಯೂ ಅನಿಲ ಇಂಧನದಲ್ಲಿ ಕೊರತೆ ಎದುರಾದ ಹಿನ್ನೆಲೆಯಲ್ಲಿ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ. ಬಗೆ ಬಗೆಯ ಉಪಹಾರಗಳ ಬದಲು ಅವಲಕ್ಕಿ ಹಾಗೂ ಮೊಸರು ನೀಡಲಾಗುತ್ತಿದೆ. ಸಿಲಿಂಡರ್​ ಅಭಾವದ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದ್ದು, ಸಕಾಲಕ್ಕೆ ಸಿಲಿಂಡರ್​ ಪೂರೈಕೆಯಾಗದಿದ್ದಲ್ಲಿ ಮಧ್ಯಾಹ್ನದ ಊಟದಲ್ಲಿಯೂ ಬದಲಾವಣೆ ಮಾಡುವ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories