ಕರಾವಳಿಯಲ್ಲಿ ಆತಂಕ ಸೃಷ್ಠಿಸಿದ ನಾಪತ್ತೆ ಜಾಲ : ಮಂಗಳೂರಿನಲ್ಲಿ 6 ತಿಂಗಳಲ್ಲಿ 136 ಮಂದಿ ಮಿಸ್ಸಿಂಗ್
Missing persons network sparks alarm in coastal region 136 people reported missing in Mangaluru in six months

ಮಂಗಳೂರು: ಮಂಗಳೂರು ನಗರದಲ್ಲಿ ಕಳೆದ ಆರು ತಿಂಗಳುಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಸಂಖ್ಯೆ ತೀವ್ರ ಆತಂಕವನ್ನು ಮೂಡಿಸಿದೆ. ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 136 ಜನ ನಾಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭೀತಿ ಸೃಷ್ಟಿಸಿದೆ. ಇವರಲ್ಲಿ 106 ಜನರನ್ನು ಪತ್ತೆಹಚ್ಚುವಲ್ಲಿ ಕಾನೂನು ಸುವ್ಯವಸ್ಥೆ ಯಶಸ್ವಿಯಾಗಿದ್ದರೂ, ಇನ್ನು 30 ಜನರ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ತನಿಖಾ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಾಣೆಯಾದವರಲ್ಲಿ ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ವಲಸೆ ಬಂದ ಕಾರ್ಮಿಕ ಮಹಿಳೆಯರೇ ಹೆಚ್ಚಾಗಿದ್ದಾರೆ. ಕಟ್ಟಡ ನಿರ್ಮಾಣ, ಗಾರೆ ಕೆಲಸ ಮತ್ತು ಮನೆಗೆಲಸಕ್ಕಾಗಿ ಮಂಗಳೂರಿಗೆ ಬಂದ ಬಿಹಾರ, ಜಾರ್ಖಂಡ್ ಹಾಗೂ ಬಳ್ಳಾರಿ ಮೂಲದ ಯುವತಿಯರು ಈ ಪಟ್ಟಿಯಲ್ಲಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 64 ಪುರುಷರು, 44 ಮಹಿಳೆಯರು ಹಾಗೂ 23 ಯುವತಿಯರು ನಾಪತ್ತೆಯಾಗಿದ್ದಾರೆ. ಇವರ ಪೈಕಿ 20 ಪುರುಷರು ಮತ್ತು 6 ಮಹಿಳೆಯರ ಪತ್ತೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.
ಪೊಲೀಸ್ ವಿಚಾರಣೆಯ ವೇಳೆ ಈ ಸಾಮೂಹಿಕ ನಾಪತ್ತೆಯ ಹಿಂದೆ ಕೇವಲ ಅಪರಾಧ ಕೃತ್ಯಗಳಲ್ಲದೆ ವೈಯಕ್ತಿಕ ಕಾರಣಗಳೂ ಇರುವುದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹ, ಅಪರಿಚಿತರೊಂದಿಗಿನ ಪ್ರೇಮ ಸಂಬಂಧ ಹಾಗೂ ಅಕ್ರಮ ನಂಟುಗಳು ಪ್ರಮುಖ ಕಾರಣಗಳಾಗಿವೆ. ಇದರೊಂದಿಗೆ ತೀವ್ರ ಕೌಟುಂಬಿಕ ಕಲಹ, ಆರ್ಥಿಕ ಬಿಕ್ಕಟ್ಟು ಹಾಗೂ ಆಧುನಿಕ ಜೀವನದ ಮಾನಸಿಕ ಒತ್ತಡಗಳನ್ನು ತಾಳಲಾರದೆ ಅನೇಕರು ಸ್ವಯಂಪ್ರೇರಿತರಾಗಿ ಮನೆ ಬಿಟ್ಟು ಹೋಗುತ್ತಿದ್ದಾರೆ. ಅನಾರೋಗ್ಯದ ಸಮಸ್ಯೆಗಳು ಕೂಡ ಕೆಲವು ಪ್ರಕರಣಗಳಿಗೆ ಪ್ರೇರೇಪಣೆಯಾಗಿವೆ.
ಈ ಬೆಳವಣಿಗೆಯು ಕರಾವಳಿ ಭಾಗದಲ್ಲಿ ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಅವರ ಹಿನ್ನೆಲೆ ಪರಿಶೀಲನೆಯ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ. ಅಪರಿಚಿತರಿಗೆ ಆಶ್ರಯ ನೀಡುವಾಗ ಮಾಲೀಕರು ಎಚ್ಚರ ವಹಿಸಬೇಕಾಗಿದೆ. ಈ ನಿಗೂಢ ನಾಪತ್ತೆ ಜಾಲವನ್ನು ಭೇದಿಸಲು ಮತ್ತು ಬಾಕಿ ಇರುವ ಮೂವತ್ತು ಜನರನ್ನು ಹುಡುಕಲು ಕಮಿಷನರೇಟ್ ಪೊಲೀಸರು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Missing persons network sparks alarm in coastal region 136 people reported missing in Mangaluru in six months

