Facebook ಗೆಳತಿಯ ಮನೆಗೆ ಹೋದಾಕೆಗೆ ಲೈಂಗಿಕ ಕಿರುಕುಳ : ನಗ್ನ ವಿಡಿಯೋ, ಪೋಟೋ ತೆಗೆದು ದಂಪತಿಯಿಂದ ಬ್ಲ್ಯಾಕ್ ಮೇಲ್

ಬೆಂಗಳೂರು : ಅವರಿಬ್ಬರಿಗೂ ಫೇಸ್ ಬುಕ್ ನಲ್ಲಿ ಗೆಳೆತನವಾಗಿತ್ತು. ಒಂದು ದಿನ ಗೆಳತಿಯನ್ನು ಆಕೆ ತನ್ನ ಮನೆಗೆ ಹಬ್ಬದೂಟಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾಳೆ. ಗೆಳತಿಯ ಮನೆಗೆ ಹೋದಾಕೆಗೆ ಶಾಕ್ ಎದುರಾಗಿತ್ತು. ಗೆಳತಿಗೆ ಮತ್ತು ಬರೋ ಜ್ಯೂಸ್ ಕೊಟ್ಟು ನಂತರ ತನ್ನ ಪತಿಯ ಜೊತೆಗಿರುವ ನಗ್ನ ವಿಡಿಯೋ, ಪೋಟೋ ಇಟ್ಟುಕೊಂಡು ದಂಪತಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ಹೌದು, ಈ ಘಟನೆ ನಡೆದಿರೋ ಸಿಲಿಕಾನ್ ಸಿಟಿ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ. ಕಾವ್ಯ ಹಾಗೂ ಕೃಷ್ಣ ದಂಪತಿಯೇ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಆರೋಪಿಗಳು. ಕಾವ್ಯ ಯುವತಿಯರನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಸಿಕೊಳ್ಳುತ್ತಿದ್ದಳು. ಅವರೊಂದಿಗೆ ಅತಿಯಾದ ಸಲುಗೆಯಿಂದ ತನ್ನ ಮನೆಗೆ ಕರೆದು ಈ ಕೃತ್ಯವೆಸಗುತ್ತಿದ್ದಳು.

ಕಳೆದ ಜನವರಿ ತಿಂಗಳಲ್ಲಿ ಸಂತ್ರಸ್ತ ಯುವತಿಯನ್ನೂ ಕೂಡ ಚಂದ್ರಾ ಲೇಔಟ್ ನಲ್ಲಿರುವ ಮನೆಗೆ ಕರೆದಿದ್ದಾಳೆ. ಈ ವೇಳೆಯಲ್ಲಿ ಕಾವ್ಯ ಯುವತಿಗೆ ಮತ್ತು ಬರುವ ಔಷಧಿ ಬೆರೆಸಿದ ಜ್ಯೂಸ್ ತಂದುಕೊಟ್ಟಿದ್ದಾಳೆ. ನಂತರದಲ್ಲಿ ಕಾವ್ಯ ಹಾಗೂ ಆಕೆಯ ಪತಿ ಕೃಷ್ಣ ಸೇರಿಕೊಂಡು ಯುವತಿಯನ್ನು ವಿವಸ್ತ್ರಗೊಳಿಸಿ ಪೋಟೋ ಹಾಗೂ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಯುವತಿಯ ಪೋಟೋ ಹಾಗೂ ವಿಡಿಯೋವನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಯುವತಿಯ ಬಳಿಯಲ್ಲಿದ್ದ ಮೊಬೈಲ್, ಪರ್ಸ್, ಡೆಬಿಟ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಯಾರ ಬಳಿಯಲ್ಲಾದ್ರೂ ಹೇಳಿದ್ರೆ ವಿಡಿಯೋ ಹಾಗೂ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಎಚ್ಚರಿಸಿದ್ದಾರೆ.

ನಂತರದಲ್ಲಿ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿ ಸುಮಾರು 4 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕೃಷ್ಣ ಯುವತಿಯನ್ನು ಬೆದರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರದಲ್ಲಿ ಯುವತಿ ಚಂದ್ರಾಲೇಔಟ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯ ದೂರಿನ ಮೇರೆಗೆ ಪೊಲೀಸರು ಕಾವ್ಯ, ಕೃಷ್ಣ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಸಾಗರ್ ಎಂಬಾತನನ್ನು ಬಂಧಿಸಿದ್ದಾರೆ.

Comments are closed.