Garbage Strike Bangalore : ಗಾರ್ಬೇಜ್ ಸಿಟಿಯಾಗುತ್ತಾ ಸಿಲಿಕಾನ್ ಸಿಟಿ : ಡಿಸೆಂಬರ್ 31 ರಿಂದ ಕಸ ಸಂಗ್ರಹಕರ ಸ್ಟ್ರೈಕ್

ಹೊಸವರ್ಷದ ಸಂಭ್ರಮಕ್ಕೆ ಓಮೈಕ್ರಾನ್ ಅಡ್ಡಿಯಾಗಿರೋ ಬೆನ್ನಲ್ಲೇ ಹೊಸ ವರ್ಷದ ಅಳಿದುಳಿದ ಖುಷಿಗೆ ಬೆಂಗಳೂರಿನ ಕಸದ ಸಮಸ್ಯೆ ಅಡ್ಡಿಯಾಗೋ ಸಾಧ್ಯತೆ ಇದೆ. ಹೌದು, ಹೊಸ ವರ್ಷದ ಆರಂಭಕ್ಕೆ ಕಸದ ಸ್ಟ್ರೈಕ್ ಸಮಸ್ಯೆ ಎದುರಾಗಿದ್ದು ಡಿಸೆಂಬರ್ 31 ರಿಂದ ನಗರದಾದ್ಯಂತ ಕಸ ಸಂಗ್ರಹಣೆ ನಿಲ್ಲಿಸಲು (Garbage Strike Bangalore) ನಿರ್ಧರಿಸಿದೆ. 2022 ರ ಮೊದಲ ದಿನದಿಂದಲೇ ಬೆಂಗಳೂರಿನ ಜನರಿಗೆ ಪ್ರತಿಭಟನೆಯ ಬಿಸಿ ಎದುರಾಗಲಿದೆ. ಬಾಕಿ ಇರುವ ಬಿಲ್ ಪಾವತಿಗೆ ಆಗ್ರಹಿಸಿ ಬಿಬಿಎಂಪಿ ವ್ಯಾಪ್ತಿಯ ಕಸ ಸಂಗ್ರಹಕಾರರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ.

ಹಲವು ತಿಂಗಳಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಗುತ್ತಿಗೆದಾರರಿಗೆ ಬಿಬಿಎಂಪಿ ಬಿಲ್ ಪಾವತಿ ಮಾಡಿಲ್ಲ.‌ ಬಾಕಿ‌ ಉಳಿಸಿಕೊಂಡಿರುವ ಬಿಲ್ ಪಾವತಿ ಮಾಡುವಂತೆ ಕೇಳಿದರೇ ಅಧಿಕಾರಿಗಳು ಲಂಚ ಕೇಳುತ್ತಾರೆ ಎಂದು ಕಸ ಗುತ್ತಿಗೆದಾರರು ಆರೋಪಿಸಿದ್ದಾರೆ. ಕಸ ಗುತ್ತಿಗೆದಾರರ ಈ ಸ್ಟ್ರೈಕ್ ಗೆ ಕಸದ ಲಾರಿ ಚಾಲಕರು ಕೂಡ ಬೆಂಬಲ ಸೂಚಿಸಿದ್ದು ಕಸದ ಲಾರಿಗಳು ಕೂಡಾ ಸಂಚಾರ ನಿಲ್ಲಿಸಲಿವೆ.

ಈ ಬಗ್ಗೆ ಮಾಹಿತಿ‌ ನೀಡಿರುವ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ, ಈ ಸಲ ನಾವು ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವ ವರೆಗೂ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ ಎಂದಿದ್ದಾರೆ. ಡಿಸೆಂಬರ್ 31 ರಂದು ನಮ್ಮ ಮುಷ್ಕರ ಆರಂಭವಾಗಲಿದೆ. ನಗರದ ಎಲ್ಲಾ ಏರಿಯಾದ ಕಸ ಗುತ್ತಿಗೆದಾರರು ಕಸ ಸಂಗ್ರಹಣೆ ನಿಲ್ಲಿಸಲಿದ್ದು ಲಾರಿಗಳು ಕೂಡ ಸಂಚರಿಸುವುದಿಲ್ಲ.

ಡಿಸೆಂಬರ್ 31 ರಂದು ಕನ್ನಡ ಪರ ಸಂಘಟನೆಗಳು ಎಂಇಎಸ್ ವಿರೋಧಿಸಿ ಬಂದ್ ಗೆ ಕರೆ ನೀಡಿದ್ದಾರೆ. ನಾವು ಆ ಬಂದ್ ಬೆಂಬಲಿಸುತ್ತೇವೆ. ಎರಡು ದಿನ ಕಸ ಸಂಗ್ರಹಿಸದಿದ್ದರೇ ನಗರದ ಸ್ಥಿತಿ ಏನಾಗುತ್ತದೆ ಎಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿಸಲು ಈ ಸ್ಟ್ರೈಕ್ ನಡೆಸುತ್ತಿದ್ದೇವೆ. ನಮಗೆ ಹಲವು ತಿಂಗಳಿನಿಂದ ಬಾಕಿ ಇರುವ ಬಿಲ್ ಬಿಡುಗಡೆ ಮಾಡಲೂ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ಅದರಲ್ಲೂ ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ‌ಮದ್ದಿನೇನಿ ವಿರುದ್ಧ ಗುತ್ತಿಗೆದಾರರು ನೇರವಾಗಿ ಆರೋಪ‌ಮಾಡಿದ್ದಾರೆ.

ಅಲ್ಲದೇ ಬಿಲ್ ಪಾವತಿಗೆ ಸಿಇ ಮತ್ತು ಜೆಸಿ ಕೂಡಾ ಮಾಮೂಲಿ ಲಂಚ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರ ಸಂಘ ಆರೋಪಿಸಿದೆ. ಹೀಗಾಗಿ ಬೆಂಗಳೂರಿಗೆ ಹೊಸ ವರ್ಷದ ಮೊದಲ ದಿನವೇ ಕಸದ ಸಮಸ್ಯೆ ಎದುರಾಗಲಿದ್ದು ಎರಡು ದಿನ ಕಸ ಎತ್ತದಿದ್ದರೇ ಉದ್ಯಾನನಗರಿ ಕಸದ ಕೊಂಪೆಯಾಗೋದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ :  ಕೊರೋನಾ ನಿಯಂತ್ರಕ್ಕೆ ಪಾಲಿಕೆ ಮಾಸ್ಟರ್ ಪ್ಲ್ಯಾನ್ : ಸಂಕಷ್ಟಕ್ಕೆ ಸಿಲುಕಿದ ಕಾಮನ್ ಮ್ಯಾನ್

ಇದನ್ನೂ ಓದಿ : BBMP Helpline : ಮೋದಿ ಸೂಚನೆ ಇದ್ದರೂ ಡೋಂಟ್ ಕೇರ್ : ನಿದ್ರೆ ಯಲ್ಲಿದೆ ಬಿಬಿಎಂಪಿ ಹೆಲ್ಪ್ ಲೈನ್ ಸೆಂಟರ್

( Garbage Strike Bangalore, Silicon City becoming Garbage City, Garbage collector’s strike from December 31st)

Comments are closed.