Namma Metro : ನಮ್ಮ ಮೆಟ್ರೋಗೆ ದಶಕದ ಸಂಭ್ರಮ : 60 ಕೋಟಿ ಜನರ ಪ್ರಯಾಣ, 1286.6 ಕೋಟಿ ರೂ. ಆದಾಯ

ಬೆಂಗಳೂರು : ನಮ್ಮ ಮೆಟ್ರೋ. .ಸಿಲಿಕಾನ್‌ ಸಿಟಿ ಜನರ ಪಾಲಿಗೆ ಸಂಪರ್ಕ ಸೇತುವೆ. ಟ್ರಾಫಿಕ್‌ ಜಂಜಾಟದಿಂದ ತತ್ತರಿಸಿದ್ದ ಜನರಿಗೆ ಮುಕ್ತಿಯನ್ನು ಕಲ್ಪಿಸೋ ಸಲುವಾಗಿ ರಾಜ್ಯ ಸರಕಾರ ಕೇಂದ್ರ ಸರಕಾರದ ಸಹಯೋಗದೊಂದಿಗೆ ಆರಂಭಿಸಿದ ನಮ್ಮ ಮೆಟ್ರೋ ಯೋಜನೆ ಸಕ್ಸಸ್‌ ಆಗಿದೆ. ಬೆಂಗಳೂರಿನ ಜನರ ಮಹತ್ವಾಕಾಂಕ್ಷಿಯ ನಮ್ಮ ಮೆಟ್ರೋ ಯೋಜನೆಗೆ ಇದೀಗ ದಶಕದ ಸಂಭ್ರಮ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 60 ಕೋಟಿ ಜನರು ಪ್ರಯಾಣ ಬೆಳೆಸಿದ್ದು, 1286.6 ಕೋಟಿ ರೂ. ಆದಾಯ ಹರಿದು ಬಂದಿದೆ.

ಭಾರತ ಸರಕಾರ, ಕರ್ನಾಟಕ ಸರಕಾರ ಹಾಗೂ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ನ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರಲ್ಲಿ2011ರ ಅಕ್ಟೋಬರ್‌ 20 ರಂದು ಕಾರ್ಯಾರಂಭ ಮಾಡಿದ್ದ ನಮ್ಮ ಮೆಟ್ರೋ ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿದೆ. ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರಿಂದ ಆರಂಭಗೊಂಡಿತ್ತು. ಮೊದಲ ಹಂತದಲ್ಲಿ ಎಂ.ಜಿ.ರಸ್ತೆಯಿಂದ ಬೈಯ್ಯಪ್ಪನಹಳ್ಳಿಯವರೆಗಿನ ಸುಮಾರು 6 ಕಿ.ಮೀ. ಉದ್ದದ ರಸ್ತೆಯಲ್ಲಿ ಕಾರ್ಯಾರಂಭ ಮಾಡಿದ್ದ ಮೆಟ್ರೋ ಇಂದು ಸಿಲಿಕಾನ್‌ ಸಿಟಿಯಲ್ಲಿ ಬರೋಬ್ಬರಿ 56.1 ಕಿ.ಮೀ. ವರೆಗೆ ಕಾರ್ಯನಿರ್ವಹಸಿಸುತ್ತಿದೆ.

ನಮ್ಮ ಮೆಟ್ರೋ ಯೋಜನೆ ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ನೇರವಾಗಿ ಸಂಪರ್ಕವನ್ನು ಕಲ್ಪಿಸುತ್ತಿದೆ. ಕೊರೊನಾ ಸಂಕಷ್ಟ ಎದುರಾಗುವ ಮುನ್ನ ನಿತ್ಯವೂ 5.25 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಕೊರೊನಾ ಸಂಕಷ್ಟದ ನಂತರದಲ್ಲಿ ನಿತ್ಯದ ಪ್ರಯಾಣಿಕರ ಸಂಖ್ಯೆ 2.12ಲಕ್ಷಕ್ಕೆ ಇಳಿಕೆಯಾಗಿತ್ತು. ಆದ್ರೀಗ ನಿತ್ಯವೂ 2.70 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋ ರೈಲಿನಲ್ಲಿ ಸಂಚಾರವನ್ನು ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಆರಂಭದಲ್ಲಿ ಮೆಟ್ರೋ ಯೋಜನೆ ಆರಂಭವಾಗುತ್ತೆ ಅಂತಾ ಹೇಳಿದಾಗ ಹಲವರು ಮೂಗು ಮುರಿದಿದ್ದರು. ರಾಜ್ಯ ಸರಕಾರ ಕೂಡ ಇಷ್ಟೊಂದು ಮಟ್ಟಕ್ಕೆ ಸಕ್ಸಸ್‌ ಆಗುತ್ತೆ ಅಂತಾ ಭಾವಿಸಿಯೂ ಇರಲಿಲ್ಲ. ಆರಂಭದಲ್ಲಿ ಸಿಲಿಕಾನ್‌ ಸಿಟಿಯ ಟ್ರಾಫಿಕ್‌ ಸಮಸ್ಯೆಯ ಪರಿಹಾರಕ್ಕಾಗಿ ಪರ್ಯಾಯ ವ್ಯವಸ್ಥೆ ಎಂಬಂತೆ ಆರಂಭಗೊಂಡ ನಮ್ಮ ಮೆಟ್ರೋ ಯೋಜನೆ ಇಂದು ದೆಹಲಿಯ ನಂತರ ದೇಶದ ಎರಡನೇ ಅತೀ ದೊಡ್ಡ ಮೆಟ್ರೋ ಅನ್ನೋ ಖ್ಯಾತಿಗೂ ಪಾತ್ರವಾಗಿದೆ. ಇನ್ನು ಬೆಂಗಳೂರಿನ ಹಲವು ಭಾಗಗಳಲ್ಲಿ ಸುರಂಗದ ಮೂಲಕ ಮೆಟ್ರೋ ಸಂಚಾರ ಮಾಡುತ್ತಿದ್ದು, ದಕ್ಷಿಣ ಭಾರತದ ಮೊದಲ ಭೂಗತ ಮೆಟ್ರೋ ವ್ಯವಸ್ಥೆ ಹೊಂದಿರುವ ಕೀರ್ತಿಗೆ ಪಾತ್ರವಾಗಿದೆ.

ನಮ್ಮ ಮೆಟ್ರೋ ಯೋಜನೆಯನ್ನು ರಾಜ್ಯ ಸರಕಾರ ಬೆಂಗಳೂರಿನ ಗಲ್ಲಿಗಲ್ಲಿಗೂ ವಿಸ್ತರಿಸುವ ಪ್ಲ್ಯಾನ್‌ ಹಾಕಿಕೊಂಡಿದೆ. ಮೆಟ್ರೋದ ಮುಖ್ಯ ನಿಲ್ದಾಣವಾಗಿರುವ ಕೆಂಪೇಗೌಡ ಮೆಟ್ರೋ ನಿಲ್ಡಾಣ ಏಷ್ಯಾ ಖಂಡದಲ್ಲಿಯೇ ಅತೀ ದೊಡ್ಡ ಮೆಟ್ರೋ ನಿಲ್ದಾಣ ಅನ್ನೋ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇನ್ನೊಂದೆಡೆಯಲ್ಲಿ ಜಯದೇವ ಆಸ್ಪತ್ರೆಯ ಬಳಿಯಲ್ಲಿ ಏಷ್ಯಾದಲ್ಲಿಯೇ ಅತೀ ಎತ್ತರದ ಮೆಟ್ರೋ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಷ್ಟೇ ಅಲ್ಲಾ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕೂಡ ಮೆಟ್ರೋ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರಕಾರ ಕೈಗೊಂಡಿದೆ.

ಸಿಲಿಕಾನ್‌ ಸಿಟಿಯ ಟ್ರಾಫಿಕ್‌ ಸಮಸ್ಯೆಗೆ ನಮ್ಮ ಮೆಟ್ರೋ ಬ್ರೇಕ್‌ ಹಾಕಿದೆ. ಇನ್ನು ಮಳೆಗಾಲದ ಸಮಯದಲ್ಲಂತೂ ಜನರು ಹೆಚ್ಚಾಗಿ ಮೆಟ್ರೋ ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಗೂ ಮೆಟ್ರೋ ವಿಸ್ತರಣೆ ಯಾದ್ರೆ ಜನರ ವಾಹನ ಮರೆತು ಮೆಟ್ರೋ ಏರೋದಂತೂ ಗ್ಯಾರಂಟಿ.

ಇದನ್ನೂ ಓದಿ : ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !

ಇದನ್ನೂ ಓದಿ : ತಗ್ಗಿದ ಕೊರೊನಾ, ಡೆಂಗ್ಯೂ ಅಬ್ಬರ : 15 ದಿನದಲ್ಲಿ177 ಡೆಂಗ್ಯೂ ಪ್ರಕರಣ ದಾಖಲು

Namma metro Completes 10 Years. 60 crore people travel and Rs 1286.6 crore Income

Comments are closed.