BBMP’s work in rain damage : ರಾಜ್ಯ ರಾಜಧಾನಿಯಲ್ಲಿ ವರುಣನ ಅವಾಂತರ : ನೆರೆ ಸಂತ್ರಸ್ತರ ಕರೆಗಿಲ್ಲ ಬಿಬಿಎಂಪಿ ಸ್ಪಂದನೆ

ಬೆಂಗಳೂರು : BBMP’s work in rain damage : ರಾಜ್ಯ ರಾಜಧಾನಿ ಬೆಂಗಳೂರು ಪ್ರಸ್ತುತ ನೆರೆಪೀಡಿತ ಪ್ರದೇಶವಾಗಿ ಬದಲಾಗಿದೆ. ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಬೊಮ್ಮನಹಳ್ಳಿ ಹಾಗೂ ಮಹದೇವಪುರ ವ್ಯಾಪ್ತಿಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಣ್ಣ ಸಣ್ಣ ಮನೆಗಳಿಂದ ಹಿಡಿದು ದೊಡ್ಡ ದೊಡ್ಡ ವಿಲ್ಲಾಗಳೂ ಸಹ ಮಳೆಯಿಂದ ಮುಳುಗಡೆಯಾಗಿವೆ. ಆದರೆ ಇಷ್ಟೆಲ್ಲ ಸಮಸ್ಯೆಯಾಗಿದ್ದರೂ ಸಹ ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ ಎಂದು ಸಿಲಿಕಾನ್​ ಸಿಟಿ ಮಂದಿ ದೂರುತ್ತಿದ್ದಾರೆ.


ಬೆಂಗಳೂರಿನಲ್ಲಿ ಮಳೆ ಅವಾಂತರ ಹೆಚ್ಚಾಗುತ್ತಿದ್ದಂತೆಯೇ ಬಿಬಿಎಂಪಿ ಕಂಟ್ರೋಲ್​ ರೂಮ್​ ಒಂದನ್ನು ತೆರೆದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 64 ಕಂಟ್ರೋಲ್​ ರೂಂಗಳನ್ನು ಆರಂಭಿಸಲಾಗಿದೆ. ಆದರೆ ಕಂಟ್ರೋಲ್​​ ರೂಮ್​ಗಳಿಗೆ ಕರೆ ಮಾಡಿದರೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎನ್ನುವುದು ಬೊಮ್ಮನಹಳ್ಳಿ ಹಾಗೂ ಮಹದೇವಪುರ ವ್ಯಾಪ್ತಿಯ ಜನರ ಆರೋಪವಾಗಿದೆ.


ಬೊಮ್ಮನಹಳ್ಳಿ ಹಾಗೂ ಮಹದೇವಪುರಗಳಲ್ಲಿ ಅಸಿಸ್ಟಂಟ್​ ಇಂಜಿನಿಯರ್​ ಕಚೇರಿಗಳಲ್ಲೇ ಕಂಟ್ರೋಲ್​ ರೂಂ ಆರಂಭಿಸಲಾಗಿದೆ. ನೆರೆಹಾನಿ ಬಗ್ಗೆ ಪರಿಹಾರ ಬೇಕೆಂದು ಕರೆ ಮಾಡಿದರೆ ಇಲ್ಲಿ ಸ್ಪಂದನೆ ಮಾತ್ರ ಸಿಗುತ್ತಿಲ್ಲ. ಈ ವಿಚಾರವಾಗಿ ಸ್ಥಳೀಯರೊಬ್ಬರು ಮಾತನಾಡಿದ್ದು ಬಿಬಿಎಂಪಿ ಕಂಟ್ರೋಲ್​ ರೂಮ್​ನಿಂದ ಬಗ್ಗೆ ಸರಿಯಾದ ಸಮಯಕ್ಕೆ ಸ್ಪಂದನೆ ಸಿಗುತ್ತಿಲ್ಲ. ಅಗ್ನಿಶಾಮಕ ದಳ ಹಾಗೂ ಎನ್​ಡಿಆರ್​ಎಫ್​ ನಮಗೆ ಎಲ್ಲಾ ರೀತಿಯ ನೆರವುಗಳನ್ನು ನೀಡುತ್ತಿದೆ. ಆದರೆ ಬಿಬಿಎಂಪಿ ಅಧಿಕಾರಿಗಳು ಕೇವಲ ದೂರನ್ನು ಸ್ವೀಕರಿಸುವುದನ್ನು ಬಿಟ್ಟರೆ ಕ್ರಮ ಕೈಗೊಳ್ಳುವ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಮತ್ತೊಬ್ಬ ಸ್ಥಳೀಯ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ಬೆಳ್ಳಂದೂರು ಕೆರೆ ಸಮೀಪದಲ್ಲಿ 40ಕ್ಕೂ ಅಧಿಕ ಕುಟುಂಬಗಳು ತೀವ್ರ ನೆರೆಹಾನಿಗೆ ಸಿಲುಕಿವೆ. ಅಲ್ಲಿನ ಜನತೆಗೆ ಊಟ ಸಿಗುವುದು ಹಾಗಿರಲಿ. ಕುಡಿಯಲು ನೀರು ಕೂಡ ಸಿಗುತ್ತಿಲ್ಲ . ಪಾಲಿಕೆ ಕಂಟ್ರೋಲ್​ ರೂಮ್​ಗೆ ಕರೆ ಮಾಡಿದರೆ ಸೂಕ್ತವಾಗಿ ಯಾರೂ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.


ಆದರೆ ಸ್ಥಳೀಯರ ಈ ಆರೋಪಗಳನ್ನು ಬಿಬಿಎಂಪಿ ತಳ್ಳಿ ಹಾಕಿದೆ. ನೆರೆಪೀಡಿತ ಪ್ರದೇಶಗಳಿಗೆ ಬಿಬಿಎಂಪಿ ವತಿಯಿಂದ ಆಹಾರ ವ್ಯವಸ್ಥೆ ಕಲ್ಪಿಸಿದ್ದೇವೆ. ವಾರ್ಡ್​ ನೋಡಲ್​ ಆಫೀಸರ್​ ತಂಡ ಹಾಗೂ ಮಾರ್ಷಲ್​ಗಳು ಸ್ಥಳದಲ್ಲೇ ಬೀಡು ಬಿಟ್ಟು ಕೆಲಸವನ್ನು ಮಾಡ್ತಿದ್ದಾರೆ. ಇಂದಿರಾ ಕ್ಯಾಂಟೀನ್​, ಇಸ್ಕಾನ್​ ಹಾಗೂ ಅದಮ್ಯ ಚೇತನ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಿದ್ದು ಸಂತ್ರಸ್ತರಿಗೆ ಆಹಾರ ವ್ಯವಸ್ಥೆ ಸಕಾಲಕ್ಕೆ ಸಾಗುತ್ತಿದೆ. ಜನರಿಗೆ ಎಲ್ಲಾ ರೀತಿಯ ಸ್ಪಂದನೆಯನ್ನು ಬಿಬಿಎಂಪಿ ಅಧಿಕಾರಿಗಳು ನೀಡ್ತಿದ್ದಾರೆ ಅಂತಾ ಕಂದಾಯ ಇಲಾಖೆ ಜಂಟಿ ಆಯುಕ್ತ ವೆಂಕಟಚಲಪತಿ ಹೇಳಿದ್ದಾರೆ.

ಇದನ್ನು ಓದಿ : Janotsava programme : ಜನೋತ್ಸವವೋ..? ಜನಸ್ಪಂದನವೋ..? ಗೊಂದಲ ಮೂಡಿಸಿದ ಬಿಜೆಪಿ ನಾಯಕರ ಹೇಳಿಕೆಗಳು

ಇದನ್ನೂ ಓದಿ : Angry Afghanistan Fans: ಪಾಕ್ ವಿರುದ್ಧ ಪಂದ್ಯ ಸೋತ ಸಿಟ್ಟಿಗೆ ಶಾರ್ಜಾ ಕ್ರೀಡಾಂಗಣವನ್ನೇ ಚಿಂದಿ ಉಡಾಯಿಸಿದ ಆಫ್ಘನ್ ಕ್ರಿಕೆಟ್ ಫ್ಯಾನ್ಸ್

People’s dissatisfaction with BBMP’s work in rain damage operation in Bengaluru

Comments are closed.