singer ajay warrior :ಫುಟ್​ಪಾತ್​ನಲ್ಲಿ ನಡೆಯಲು ಹೋಗಿ ಚರಂಡಿಗೆ ಬಿದ್ದ ಖ್ಯಾತ ಗಾಯಕ

ಬೆಂಗಳೂರು :singer ajay warrior : ಮಳೆ ಶುರುವಾಯ್ತು ಅಂದರೆ ಸಾಕು ಬಿಬಿಎಂಪಿಯ ಒಂದೊಂದೆ ಕಳಪೆ ಕಾಮಗಾರಿಗಳು ಬೆಳಕಿಗೆ ಬರುತ್ತದೆ. ಒಂದೆಡೆ ಮರಗಳು ಧರೆಗುರುಳಿದರೆ, ಮತ್ತೊಂದೆಡೆ ರಸ್ತೆಯ ಹೊಂಡ ಜೀವ ಹಿಂಡುತ್ತದೆ. ಇನ್ನೊಂದೆಡೆ ರಾಜಕಾಲುವೆ ಅಲ್ಲಲ್ಲಿ ಓಡಾಡಲೂ ಆಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಬಿಡುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿಯೂ ಈ ಎಲ್ಲಾ ಸಮಸ್ಯೆಗಳು ಮರುಕಳಿಸುತ್ತದೆ. ಆದರೆ ಎಮ್ಮೆ ಚರ್ಮದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ಕ್ಯಾರೇ ಎನ್ನೋದಿಲ್ಲ.


ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಪುಟ್​​ಪಾತ್​ನಲ್ಲಿದ್ದ ಡ್ರೈನ್​ಹೋಲ್​​ನಲ್ಲಿ ಬಿದ್ದು ಖ್ಯಾತ ಗಾಯಕ ಅಜಯ್​ ವಾರಿಯರ್​ ತೀವ್ರ ಪೆಟ್ಟನ್ನು ಅನುಭವಿಸುವಂತಾಗಿದೆ. ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಡ್ರೈನ್​ ಹೋಲ್​ ಮುಚ್ಚದೇ ಇದ್ದದ್ದು ಕಾಣದ ಹಿನ್ನೆಲೆಯಲ್ಲಿ ಅಜಯ್​ ವಾರಿಯರ್​ ಅದರೊಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡು ವಿಶ್ರಾಂತಿ ಪಡೆಯುವಂತಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಗಾಯಕ ಬಿಬಿಎಂಪಿ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.


ಮಗಳ ಹುಟ್ಟು ಹಬ್ಬ ಇದ್ದ ಕಾರಣ ಗಾಯಕ ಅಜಯ್​ ವಾರಿಯರ್​ ಕಳೆದ ಭಾನುವಾರ ಬೆಂಗಳೂರಿನಿಂದ ಕೇರಳಕ್ಕೆ ಹೊರಡುವವರಿದ್ದರು. ರೈಲಿನಲ್ಲಿ ಕೇರಳಕ್ಕೆ ತೆರಳುವವರಿದ್ದ ಅಜಯ್​ ವಾರಿಯರ್​​ಗೆ ಬೆಂಗಳೂರಿನಲ್ಲಿ ಮಳೆ ಬೇರೆ ಎದುರಾಗಿತ್ತು. ಕ್ಯಾಬ್​ ಸೌಕರ್ಯ ಕೂಡ ಸೂಕ್ತ ಸಮಯಕ್ಕೆ ಸಿಗದ ಹಿನ್ನೆಲೆಯಲ್ಲಿ ಅಜಯ್​ ಕಾಲ್ನಡಿಗೆಯಲ್ಲಿಯೇ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದರು. ಮೆಟ್ರೋ ನಿಲ್ದಾಣದ ಫುಟ್​ ಪಾತ್​ನಲ್ಲಿದ್ದ ಡ್ರೈನ್​ ಹೋಲ್​ ತುಂಬಾ ನೀರು ತುಂಬಿದ್ದರಿಂದ ಅಜಯ್​ ವಾರಿಯರ್​ಗೆ ಅದು ತೆರೆದ ಡ್ರೈನ್​ ಹೋಲ್​ ಎಂಬುದು ಗಮನಕ್ಕೆ ಬಾರಲಿಲ್ಲ. ಅಲ್ಲೇ ಕಾಲಿಟ್ಟ ಅಜಯ್​ ಡ್ರೈನ್​ ಹೋಲ್​ನ ಒಳಕ್ಕೆ ಬಿದ್ದಿದ್ದಾರೆ. ಅವರ ಎದೆಯವರೆಗೆ ನೀರು ಬರುವಷ್ಟು ಆಳಕ್ಕೆ ಅಜಯ್​ ಬಿದ್ದಿದ್ದರು.


ಹೇಗೋ ಅಜಯ್​ ವಾರಿಯರ್​ ಡ್ರೈನ್​ ಹೋಲ್​ನಿಂದ ಹೊರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರ ಕಾಲಿಗೆ ಬಲವಾದ ಏಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಯಲ್ಲಿ ನಾನು ಯಾರನ್ನು ದೂಷಿಸಬೇಕು..? ನನ್ನನ್ನೇ ಅಲ್ಲವೇ..?ನೀರು ತುಂಬಿದ ರಸ್ತೆಯಲ್ಲಿ ಈಜುವ ಬದಲು ಫುಟ್​ಪಾತ್​ ಮೇಲೆ ಹತ್ತಲು ಹೋದದ್ದು ನನ್ನದೇ ತಪ್ಪು. ನನಗೇ ಹುಚ್ಚು ಎಂದು ವ್ಯಂಗ್ಯವಾಗಿ ಬರೆಯುವ ಮೂಲಕ ಬಿಬಿಎಂಪಿ ಅಧಿಕಾರಿಗಳಿಗೆ ಪರೋಕ್ಷ ಟಾಂಗ್​ ನೀಡಿದ್ದಾರೆ.

ಇದನ್ನು ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : supreme court : ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ : 2 ವಾರಗಳಲ್ಲಿ ನೋಟಿಫಿಕೇಶನ್​​

singer ajay warrior fel to drain hole

Comments are closed.