BBMP Commissioner : ಕಮೀಷನ್ ಆರೋಪಕ್ಕೆ ಕಮಿಷನರ್ ಎತ್ತಂಗಡಿ : ತುಷಾರ್ ಗಿರಿನಾಥ್ ಬಿಬಿಎಂಪಿ ನೂತನ ಆಯುಕ್ತರು

ಬೆಂಗಳೂರು : ರಾಜ್ಯಕ್ಕೆ ಅಮಿತ್ ಶಾ ಭೇಟಿ, ಸಿಎಂ ಜೊತೆ ಚರ್ಚೆ, ಚುನಾವಣೆಗೆ ಸಜ್ಜಾಗುವಂತೆ ಸೂಚನೆಯ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತ ಯಂತ್ರಕ್ಕೆ ವರ್ಗಾವಣೆ ಮೂಲಕ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ಅದರಲ್ಲೂ ಕಳೆದ ಒಂದು ವರ್ಷದಿಂದ ಅಧಿಕಾರಿಗಳ ಕೈಯಲ್ಲೇ ಇರುವ ಬಿಬಿಎಂಪಿಗೆ ಎತ್ತಂಗಡಿ ಶಾಕ್ ನೀಡಿರುವ ಬೊಮ್ಮಾಯಿ ಕಮೀಷನ್ ಸೇರಿದಂತೆ ಹಲವು ಆರೋಪ ಹಾಗೂ ವೈಫಲ್ಯದ ಹಣೆಪಟ್ಟಿ ಹೊತ್ತಿದ್ದ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ ಭಾಗ್ಯ ಸಿಕ್ಕಿದೆ. ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ಐಎಎಸ್ ಗಳಿಗೆ ವರ್ಗಾವಣೆ ಮೂಲಕ ಬೇರೆ ಬೇರೆ ಸ್ಥಾನ ತೋರಿಸಿದೆ. ಈ ಮಧ್ಯೆ ಬಿಬಿಎಂಪಿಯ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Commissioner) ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತುಷಾರ್ ಗಿರಿನಾಥ್, ಬಿಬಿಎಂಪಿಯಲ್ಲಿ ಕೆಲ ಸವಾಲು ತುಂಬಾ ವರ್ಷದಿಂದ ಇದೆ. ಈಗ ಸವಾಲುಗಳನ್ನು ಎದುರಿಸಲು ಬಿಬಿಎಂಪಿ ಸಜ್ಜಾಗಿದೆ.‌ನಾನು ಜನರಿಗೆ ಒಳ್ಳೆಯ ಸೇವೆ ನೀಡುವ ಗುರಿ ಹೊಂದಿದ್ದೇನೆ. ನಮ್ಮಲ್ಲಿ ಬಹಳ ಅನುಭವಿ ಅಧಿಕಾರಿಗಳು ಇದ್ದಾರೆ. ಅವ್ರ ಸೇವೆಯನ್ನ ಸಮರ್ಥವಾಗಿ ಬಳಕೆ ಮಾಡಿಕೊಳ್ತೀವಿ. ಹಿಂದಿನ ಆಯುಕ್ತರು ಉತ್ತಮ ಕೆಲ್ಸ ಮಾಡಿದ್ದಾರೆ ಅದನ್ನ ಮುಂದುವರೆಸಿಕೊಂಡು ಹೋಗ್ತೀನಿ ಎಂದಿದ್ದಾರೆ.

ಈ ಮಧ್ಯೆ ನಗರದಲ್ಲಿ ಅಕಾಲಿಕ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಮರಗಳು ಧರೆಗುರುಳಿ, ಮನೆಗಳಿಗೆ ನೀರು ನುಗ್ಗಿ ನರಕ ಸೃಷ್ಟಿಯಾಗಿದೆ. ಹೀಗಾಗಿ ಮಳೆಗಾಲದಲ್ಲಿ ಆಗುವ ಅನಾಹುತ ತಪ್ಪಿಸುವುದು ಮೊದಲ ಆದ್ಯತೆ ಎಂದಿರುವ ನೂತನ ಆಯುಕ್ತರು ಕೋವಿಡ್ ನಿಯಂತ್ರಣ, ರಸ್ತೆ ಗುಂಡಿ, ಕಸದ ಸಮಸ್ಯೆ ನಿವಾರಣೆ ಮಾಡೋದು ಮೊದಲ ಆದ್ಯತೆ ಎಂದಿದ್ದಾರೆ. ೩೦ ವರ್ಷ ಸೇವೆಯಲ್ಲಿ ನಾನು ಇದ್ದೀನಿ. ನನ್ನ ಕಾರ್ಯವೈಖರಿಯನ್ನ ನೀವೇ ನೋಡ್ತೀರಿ ಎಂದು ಭರವಸೆ ನೀಡಿದ ತುಷಾರ್ ಗಿರಿನಾಥ್, ಸರ್ಕಾರ ನಮ್ಮನ್ನ ನಿಯೋಜಿಸಿ ಜನ್ರ ಸೇವೆಗೆ ಕಳುಹಿಸಿದೆ. ರಸ್ತೆ ಗುಂಡಿ ಮುಚ್ಚುವುದು ದೊಡ್ಡ ಸವಾಲು.ಇಲಾಖೆಗಳ ನಡುವೆ ಸಮನ್ವಯ ಕಾಯ್ದುಕೊಳ್ಳೋ ನಿಟ್ಟಿನಲ್ಲಿ ಕ್ರಮಕೈಗೊಳ್ತೆವೆ ಎಂದು ಭರವಸೆ ನೀಡಿದ್ದಾರೆ.

ಕಮೀಷನರ್ ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ನಮ್ಮಲ್ಲಿ ದೊಡ್ಡ ಸೈನ್ಯ ಇದೆ ಅದರ ಸಹಯೋಗದಲ್ಲಿ ಕೆಲ್ಸ ಮಾಡ್ಬೇಕಿದೆ. ಕ್ರಿಯಾಶೀಲರಾಗಿ ಜನ್ರಿಗೆ ಉತ್ತಮವಾಗೋ ಕೆಲ್ಸ ಮಾಡ್ಬೇಕಿದೆ. ಕಾಲ್ ಸೆಂಟರ್ ಇನ್ನಷ್ಟು ಕಾರ್ಯಪ್ರವೃತ್ತರಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಮಳೆಗಾಲದಲ್ಲಿ ಅನಾಹುತ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದೆಲ್ಲ ತುಷಾರ್ ಗಿರಿನಾಥ್ ಹೇಳಿಕೊಂಡಿದ್ದಾರೆ. ಈಗಾಗಲೆ ಬಿಬಿಎಂಪಿಗೆ ಕಮೀಷನ್ ಕಾಮಗಾರಿ ಆರೋಪ ಪಟ್ಟಿ ಹೊರೆಸಿರುವ ಗುತ್ತಿಗೆದಾರರು ಆಯುಕ್ತರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಕಾರ ನೂತನ ಆಯುಕ್ತರನ್ನೇನೋ ನೇಮಿಸಿದೆ. ಆದರೆ ಈ ಹೊಸ ತನ ಕೇವಲ ಕಮೀಷನರ್ ನೇಮಕಕ್ಕೆ ಸೀಮಿತವಾಗುತ್ತಾ ಅಥವಾ ಆಡಳಿತಕ್ಕೂ ಬಳಕೆಯಾಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ವಾಕ್ಸಿನ್, ಮಾಸ್ಕ್ ಕಡ್ಡಾಯ, ಮಾರ್ಷಲ್ ಗಸ್ತು ಆರಂಭ : ಬಿಬಿಎಂಪಿಯಿಂದ ಹೊಸ ಗೈಡ್‌ಲೈನ್ಸ್‌

ಇದನ್ನೂ ಓದಿ : ನಗರದ ಟ್ರಾಫಿಕ್ ಸಮಸ್ಯೆಗೆ ಮತ್ತೊಂದು ಪರಿಹಾರ : ಸದ್ಯದಲ್ಲೇ ಬರಲಿದೆ ನಿಯೋ ಟ್ರೇನ್

Tushar Giri Nath is new BBMP Commissioner Gaurav Gupta Transferred

Comments are closed.