ನವದೆಹಲಿ : ಕುತಂತ್ರಿ ಚೀನಾದ ವಿರುದ್ದ ಸಮರ ಸಾರಿರುವ ಭಾರತ 59 ಆ್ಯಪ್ ಗಳನ್ನು ಬ್ಯಾನ್ ಮಾಡುವ ಮೂಲಕ ಹೊಡೆತ ಕೊಟ್ಟಿತ್ತು. ಆದ್ರೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಚೀನಾದ ಕಂಪೆನಿಗಳಿಗೆ ಶಾಕ್ ಕೊಟ್ಟಿದೆ.

ಕೇಂದ್ರ ಸರಕಾರ ಚೀನಾದ ಯಾವುದೇ ಉಪಕರಣಗಳನ್ನು ಬಳಸಬಾರದೆಂಬ ನಿರ್ದೇಶನದಂತೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 4ಜಿ ಟೆಲಿಕಾಂ ನೆಟ್‌ವರ್ಕ್ ಅಪ್ ಗ್ರೇಡ್ ಗಾಗಿ ಒಪ್ಪಿಕೊಂಡಿದ್ದ ಬಹು ಕೋಟಿ ಟೆಂಡರ್ ಅನ್ನು ರದ್ದುಪಡಿಸಿದ್ದು, ಕುರಿತು ಬಿಎಸ್ಎನ್ಎಲ್ ನೋಟಿಸ್ ಜಾರಿ ಮಾಡಿದೆ.

4ಜಿ ಅಪ್‌ಗ್ರೇಡ್‌ನಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಸರ್ಕಾರ ಈ ಹಿಂದೆ ಬಿಎಸ್‌ಎನ್‌ಎಲ್‌ಗೆ ನಿರ್ದೇಶನ ನೀಡಿತ್ತು. ಇದೀಗ ಚೀನಾದ ಕಂಪೆನಿಗಳ ಜೊತೆಗಿನ ಒಪ್ಪಂದವನ್ನು ಮುರಿದುಕೊಂಡ ಬೆನ್ನಲ್ಲೇ ಶೀಘ್ರವೇ ಹೊಸ ಟೆಂಡರ್ ಕರೆಯಲಾಗುತ್ತದೆ ಮತ್ತು ಇದು ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ ನೀಡುತ್ತದೆ ಎಂದು ತಿಳಿದುಬಂದಿದೆ.

ಸುಮಾರು ಹದಿನೈದು ದಿನಗಳ ಹಿಂದೆ, ಟೆಲಿಕಾಂ ಇಲಾಖೆಯು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳನ್ನು ತಮ್ಮ 4ಜಿ ಅಪ್‌ಗ್ರೇಡ್‌ನಲ್ಲಿ ಚೀನಾದ ಟೆಲಿಕಾಂ ಉಪಕರಣಗಳ ಬಳಕೆಯನ್ನು ದೂರವಿಡುವಂತೆ ಕೇಳಿಕೊಂಡಿದ್ದು, ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಿಲುವನ್ನು ಗಟ್ಟಿ ಮಾಡುವಂತೆ ಮಾಡಿದೆ.