ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಛೀಮಾರಿ: ಫ್ರೀಂ ಸ್ಕೀಂಗಳಿಂದ ಆರ್ಥಿಕತೆ ವಿನಾಶ ‘ಗ್ಯಾರಂಟಿ’
ದೇಶದ ಹಲವಾರು ರಾಜ್ಯಗಳಲ್ಲಿ ಪ್ರಸ್ತುತ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಫ್ರೀಂ ಸ್ಕೀಂಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿರುವ ಗೃಹಲಕ್ಷ್ಮೀ ಯೋಜನೆಯು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ನೇರ ನಗದು ವರ್ಗಾವಣೆಯಂತಹ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟು ಬೀಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಆಮೀಷವೊಡ್ಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಗ್ಯಾರಂಟಿ ರಾಜ್ಯಗಳ ಸಂಖ್ಯೆ 5 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರದ ಆರ್ಥಿಕ ಸಮೀಕ್ಷೆಯು ಎಚ್ಚರಿಕೆ ನೀಡಿದೆ.
ಈ ವಿಚಾರವಾಗಿ ಸಮೀಕ್ಷೆ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಂತಹ ಯೋಜನೆಗಳಿಂದ ಆ ಕ್ಷಣಕ್ಕೆ ಲಾಭವಾದಂತೆ ಕಂಡುಬಂದರೂ ಸಹ ಆಯಾ ರಾಜ್ಯ ಸರ್ಕಾರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ. ಅಲ್ಲದೇ ಆಯಾ ರಾಜ್ಯಗಳಲ್ಲಿ ಅಭಿವೃದ್ಧಿಗೆ ಬಳಕೆ ಮಾಡಬೇಕಾದ ಹಣ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಹ ಕುಂಠಿತಗೊಳ್ಳುತ್ತಿದೆ. ನೇರ ನಗದು ವಗಾರ್ವಣೆ ಯೋಜನೆಗಳ ಅಡಿಯಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆಂದೇ 1.7 ಲಕ್ಷ ಕೋಟಿ ತೆಗೆದಿರಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಬೆನ್ನಲ್ಲೇ ಅನ್ನಭಾಗ್ಯ ಹಣವೂ ಬಾಕಿ ..! ಸದನದಲ್ಲೇ ಒಪ್ಪಿಕೊಂಡ ಸಚಿವ ಮುನಿಯಪ್ಪ
ಇದೇ ವೇಳೆ ಕರ್ನಾಟಕದ 55 ಲಕ್ಷ ರೈತರಿಗೆ ನೇರ ನಗದು ವರ್ಗಾವಣೆ ಮಾಡುತ್ತಿರುವ ಫ್ರುಟ್ಸ್ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಶ್ಲಾಘಿಸಿದ್ದಾರೆ. ಬೆಳೆ ಸಮೀಕ್ಷೆಗಳನ್ನು ಸಂಗ್ರಹಿಸುವ ಏಕೀಕೃತ ದತ್ತಾಂಶಗಳನ್ನು ಹೊಂದಿರುವ ಈ ಯೋಜನೆಯೂ ನಿಜಕ್ಕೂ ಮೆಚ್ಚುವಂತದ್ದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.



