Hijab Verdict Today: ಸುಪ್ರೀಂಕೋರ್ಟ್ ನಲ್ಲಿ ಇಂದು ಹಿಜಾಬ್ ಭವಿಷ್ಯ ನಿರ್ಧಾರ ಸಾಧ್ಯತೆ..?

ನವದೆಹಲಿ : Hijab Verdict Today ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಹಿಜಾಬ್ ಭವಿಷ್ಯದ ನಿರ್ಧಾರದಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರ ದ್ವಿಸದಸ್ಯ ಪೀಠ ಶಾಲಾಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಬೇಕೇ ಬೇಡವೇ ಅನ್ನೋ ಬಗ್ಗೆ ತೀರ್ಪು ಪ್ರಕಟಿಸಲಿದ್ದಾರೆ.

ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು. ಬಳಿಕ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆ ಮುಕ್ತಾಯವಾಗಿದ್ದು ಇಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ ಎಂದು LIVE LAW ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ ನ್ಯಾಯಮೂರ್ತಿ ಸುಧಾಂಶು ಧೂಲಿಯಾ ಅವರನ್ನು ಒಳಗೊಂಡ ಪೀಠವು ಹಿಜಾಬ್ ನಿಷೇಧ ವಿಚಾರದ ಕುರಿತಾಗಿ 10 ದಿನಗಳ ಕಾಲ ವಿಚಾರಣೆ ನಡೆಸಿತ್ತು. ಬಳಿಕ ಸೆಪ್ಟೆಂಬರ್ 22 ರಂದು ನ್ಯಾಯಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಗುಪ್ತಾ ಅವರು ಅಕ್ಟೋಬರ್ 16 ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ ಇಂದು ಅಥವಾ ಈ ವಾರದೊಳಗೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ..

ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಕರ್ನಾಟಕ ಹೈಕೋರ್ಟ್​ ನೀಡಿದ ತೀರ್ಪನ್ನು ತಡೆ ಹಿಡಿಯುವಂತೆ ಕೋರಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಅವರು ಶಾಲೆಗೆ ತೆರಳದೇ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಶಾಲೆಯಲ್ಲೂ ಹಿಜಾಬ್​ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರ ಪರ ವಕೀಲರು ವಾದ ಮಂಡಿಸಿದ್ದರು. ಇದಲ್ಲದೇ ಈ ಬಿಕ್ಕಟ್ಟನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ವಾದಿಸಿದ್ದರು.

ಮತ್ತೊಂದೆಡೆ, ರಾಜ್ಯದ ಪರ ವಾದ ಮಂಡಿಸಿದ್ದ ವಕೀಲರು, ಹಿಜಾಬ್​ ಧರಿಸುವುದರಿಂದ ಶಾಲಾ ಕಾಲೇಜುಗಳಲ್ಲಿ ಉಂಟಾಗುವ ಧಾರ್ಮಿಕ ಬಿಕ್ಕಟ್ಟು ನಿವಾರಣೆಗೆ ಸರ್ಕಾರ ಈ ಆದೇಶ ಹೊರಡಿಸಿತ್ತು. ಹಿಜಾಬ್​ ಧರಿಸುವುದು ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್​ ತೀರ್ಪು ನೀಡಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ತರುವ ದೃಷ್ಟಿಯಿಂದ ಸಮವಸ್ತ್ರ ಕಡ್ಡಾಯ ಮಾಡಿ, ಶಾಲಾ ಕಾಲೇಜುಗಳ ತರಗತಿಯೊಳಗೆ ಮಾತ್ರ ಹಿಜಾಬ್​ ನಿಷೇಧಿಸಲಾಗಿದೆ ಎಂದು ವಾದ ಮಂಡಿಸಿದ್ದರು.

ಉಡುಪಿಯಿಂದ ಆರಂಭವಾದ ವಿವಾದ : ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಜನವರಿ 1ರಂದು ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು 6 ವಿದ್ಯಾರ್ಥಿನಿಯರು ಆರೋಪಿಸಿದಾಗ ಈ ಹಿಜಾಬ್‌ ವಿವಾದ ಬೆಳಕಿಗೆ ಬಂದಿತ್ತು. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ್ದ ವಿದ್ಯಾರ್ಥಿನಿಯರು, ಹಿಜಾಬ್‌ ಧರಿಸಲು ಕಾಲೇಜಿನ ಬಳಿ ಅನುಮತಿ ಕೇಳಲಾಗಿದೆ. ಆದರೆ ಕಾಲೇಜು ಅಧಿಕಾರಿಗಳು ಹಿಜಾಬ್‌ ಧರಿಸಿ ಹಾಗೂ ಮುಖ ಮುಚ್ಚಿಕೊಂಡು ತರಗತಿಗೆ ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದ್ರು. ಬಳಿಕ ಈ ವಿವಾದ ಭುಗಿಲೆದ್ದ ರಾಜ್ಯಾದ್ಯಂತ ದೊಡ್ಡ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ತಿರುಗಿಬಿದ್ದಿದ್ದ ಹಿಂದೂ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು, ಕೇಸರಿ ರುಮಾಲು ಧರಿಸಿ ಆಗಮಿಸೋಕೆ ಶುರು ಮಾಡಿದ್ರು. ಇದು ಕಾಲೇಜು ಕ್ಯಾಂಪಸ್ ನಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು. ಇದೇ ಹಿಜಾಬ್ ವಿವಾದದ ವೇಳೆ ಮಂಡ್ಯದ ಮುಸ್ಕಾನ್ ಅನ್ನೋ ವಿದ್ಯಾರ್ಥಿನಿಯ ಅಲ್ಲಾ ಹು ಅಕ್ಬರ್ ಘೋಷಣೆಯನ್ನ ಅಲ್ ಖೈದಾ ಸಂಘಟನೆ ಮುಖ್ಯಸ್ಥ ಅಲ್ ಜವಾಹಿರಿ ಕೂಡಾ ಕೊಂಡಾಡಿದ್ದ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಧಾರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹೋಗುವ ಅಭಿಯಾನ ಆರಂಭಿಸಿದ್ದರು. ಹೀಗಾಗಿ ಸರ್ಕಾರ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸದಂತೆ ಆದೇಶ ನೀಡಿದ ಬಳಿಕ ಹಿಜಾಬ್ ಧಾರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆ ಹಾಗೂ ಕಾನೂನು ಸಮರ ಆರಂಭಗೊಂಡಿತ್ತು. ಸರ್ವೋಚ್ಛ ನ್ಯಾಯಾಲಯವು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಎತ್ತಿಹಿಡಿಯಲಿದೆಯೇ ಅಥವಾ ಹಿಜಾಬ್ ಪರ ಹಕ್ಕು ಮಂಡಿಸುತ್ತಿರುವ ವಿದ್ಯಾರ್ಥಿನಿಯರ ವಾದವನ್ನು ಪುರಸ್ಕರಿಸಲಿದೆಯೇ ಎಂಬ ಕುತೂಹಲ ತೀವ್ರಗೊಂಡಿದೆ.

ಇದನ್ನೂ ಓದಿ : KSRTC Bus Accident : ಕಬ್ಬಿನ ಗದ್ದೆಗೆ ನುಗಿದ ಕೆಎಸ್‌ಆರ್‌ಟಿಸಿ ಬಸ್‌ : ಪ್ರಯಾಣಿಕರು ಅಪಾಯದಿಂದ ಪಾರು

Hijab Verdict Today The countdown has started for the decision on the future of hijab

Comments are closed.