ಕೋಳಿ ತ್ಯಾಜ್ಯದಿಂದ ಬಯೋಡಿಸೇಲ್ ….! ಲೀಟರ್ ಗೆ ಸಿಗುತ್ತೆ 38 ಕಿಲೋಮೀಟರ್ ಮೈಲೈಜ್…!!

ವಯನಾಡ್: ಪೆಟ್ರೋಲ್,ಡಿಸೇಲ್ ದರ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ, ಕೋಳಿತ್ಯಾಜ್ಯದಿಂದ ಪೆಟ್ರೋಲ್ ಉತ್ಪಾದಿಸಿ 38 ಕಿಲೋಮೀಟರ್ ಮೈಲೈಜ್ ಪಡೆದ ಆಶಾದಾಯಕ ಸಂಶೋಧನೆಯೊಂದು ಬೆಳಕಿಗೆ ಬಂದಿದ್ದು, ವಾಹನ ಸವಾರರು ಖುಷಿಯಾಗಿದ್ದಾರೆ.

ಕೇರಳದ ವಯನಾಡಿನ ಪಶುವೈದ್ಯರೊಬ್ಬರು ಕೋಳಿಯ ಮಾಂಸ ಹಾಗೂ ತ್ಯಾಜ್ಯ ಬಳಸಿ ಲೀಟರ್ ಗೆ 38 ಕಿಲೋಮೀಟರ್ ಮೈಲೈಜ್ ನೀಡುವ ಬಯೋ ಡಿಸೇಲ್ ಉತ್ಪಾದಿಸಿ ಗಮನ ಸೆಳೆದಿದ್ದಾರೆ.

ಕೇರಳದ ಪಶುವೈದ್ಯಕೀಯ ಮತ್ತು ಪಶು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರಾಗಿರುವ ಜಾನ್ ಅಬ್ರಹಾಂ ಇಂತಹದೊಂದು ಆಶಾದಾಯಕ ಸಂಶೋಧನೆ ಮಾಡಿದ್ದು, 7 ವರ್ಷಗಳ ಪ್ರಯತ್ನದ ಬಳಿಕ ಈ ಬಯೋಡಿಸೇಲ್ ಗೆ ಪೆಟೇಂಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಯೋ ಡಿಸೇಲ್, ಪ್ರಸ್ತುತ ಬಳಕೆಯಲ್ಲಿರುವ ಡಿಸೇಲ್ ಗಿಂತಲೂ 40 ಶೇಕಡಾ ಅಗ್ಗವಾಗಿದ್ದು, ವಾಯುಮಾಲಿನ್ಯದ ಪ್ರಮಾಣ ಕೂಡ ಕಡಿಮೆ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆ.

2009 ರಿಂದ 12 ರ ಅವಧಿಯಲ್ಲಿ ಜಾನ್ ಅಬ್ರಹಾಂ ಬಾಯ್ಲರ್ ಕೋಳಿಯ ಮಾಂಸ ಹಾಗೂ ಸತ್ತ ಪಕ್ಷಿಗಳನ್ನು ಬಳಸಿ ಡಿಸೇಲ್ ಉತ್ಪಾದನೆ ನಡೆಸಿದ್ದರು. ಡಿಸೇಲ್ ಉತ್ಪಾದನೆಗೆ ಬಳಸಿದ ವಸ್ತುಗಳು ಸ್ಥಳೀಯ ಮಟ್ಟದ್ದಾಗಿದ್ದರಿಂದ ಇದಕ್ಕೆ ರಾಷ್ಟ್ರೀಯ  ಜೀವವೈವಿದ್ಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಿತ್ತು.

ಈ ಹಿನ್ನೆಲೆಯಲ್ಲಿ ಇಷ್ಟು ವರ್ಷಗಳ ಕಾಲ ಅನುಮತಿಗಾಗಿ ಕಾಯಲಾಗಿತ್ತು ಎನ್ನಲಾಗಿದೆ. ಜಾನ್ ಅಬ್ರಾಹಿಂ, 2014 ರಲ್ಲೇ 18 ಲಕ್ಷ ರೂಪಾಯಿ  ವೆಚ್ಚದಲ್ಲಿ ಈ ಬಯೋ ಡಿಸೇಲ್ ಉತ್ಪಾದನೆ ಪ್ರಾಯೋಗಿಕ ಘಟಕ ಆರಂಭಿಸಿದ್ದಾರೆ.

ಈ ಪ್ರಯತ್ನಕ್ಕೆ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ ಆರ್ಥಿಕ ನೆರವು ಪಡೆದಿದ್ದಾರೆ. 2015 ರಲ್ಲಿ ಕೇರಳ ಕೊಚ್ಚಿಯ ಭಾರತ್ ಪೆಟ್ರೋಲಿಯಂ ಸಂಸ್ಕರಣಾ ಘಟಕ ಈ ಬಯೋಡಿಸೇಲ್ ಗೆ ಗುಣಮಟ್ಟದ ಪ್ರಮಾಣ ಪತ್ರ ನೀಡಿದೆ.

ಈಗಾಗಲೇ ಕೇರಳ ವಿವಿಯ ಬಸ್ ಗೆ ಇದೇ ಬಯೋ ಡಿಸೇಲ್ ಬಳಸಲಾಗುತ್ತಿದೆ.ಪ್ರಾಣಿ,ಪಕ್ಷಿಗಳಲ್ಲಿ ಕೊಬ್ಬಿನ ಅಂಶ ಹೆಚ್ಚಿರೋದರಿಂದ ತೈಲ ತೆಗೆಯೋದು ಸುಲಭವಾಗಿದ್ದು, ಹೀಗಾಗಿ ಡಿಸೇಲ್ ತಯಾರಿಕೆಗೆ ಪ್ರಾಣಿ,ಪಕ್ಷಿ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಜಾನ್ ಅಬ್ರಹಾಂ ವಿವರಣೆ ನೀಡಿದ್ದಾರೆ.

Comments are closed.