BSY : ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ : ಸಿಎಂ ಯಡಿಯೂರಪ್ಪ ಘೋಷಣೆ

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಹುದ್ದೆ ರಾಜೀನಾಮೆಯನ್ನು ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.


ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಕಣ್ಣೀರಿಡುತ್ತಲೇ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ನಾನು ತೀರ್ಮಾನ ಮಾಡಿದ್ದೇನೆ. ಊಟ ಮಾಡಿದ ನಂತರ ರಾಜಭವನಕ್ಕೆ ಹೋಗಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದೇನೆ. ಅಧಿಕಾರ ಇರಲಿ, ಇಲ್ಲದೇ ಇರಲಿ ನಾನು ಬಿಜೆಪಿ ಪಕ್ಷ ಸಂಘಟನೆಯ ಕಾರ್ಯವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. ಅಲ್ಲದೇ 2 ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರು 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರಕ್ಕೆ ಅವಕಾಶ ಕೊಡಲ್ಲ ಎಂದಿದ್ದರು. ಆದರೂ ಕೂಡ ಅವರು ನನಗೆ 2 ವರ್ಷ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟರು. ಪ್ರಧಾನಿ ಮೋದಿ, ಅಮಿತ್ ಶಾ ಜೋಡಿ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಗೆದ್ದು ದೇಶವನ್ನು ಮುನ್ನಡೆಸುವ ಅವಕಾಶ ಸಿಗಬೇಕು ಎಂದರು.

ಇದನ್ನೂ ಓದಿ : ಸಾಧನಾ ಸಮಾವೇಶದಲ್ಲಿ ಕಣ್ಣೀರಿಟ್ಟ ಯಡಿಯೂರಪ್ಪ

ಕರ್ನಾಟಕ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವಂತ ಕೆಲಸ ಮಾಡಿದ ಪರಿಣಾಮ, ಇವತ್ತು ಸಿಎಂ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಲು ಇಚ್ಚೆ ಪಡುತ್ತೇನೆ. ಅಂದು ಅಟಲ್ ಬಿಹಾರಿ ವಾಜಪೇಯಿ ಅವರು ನೀವು ದೆಹಲಿಗೆ ಬನ್ನಿ ಎಂದರು. ಆದ್ರೇ ನಾನು ಯಾವುದೇ ಕಾರಣಕ್ಕೂ ದೆಹಲಿಗೆ ಬರೋದಿಲ್ಲ. ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು ಎಂಬುದಾಗಿ ಇಲ್ಲಿಯೇ ಉಳಿದೆ. ಆ ಮೂಲಕ ಕೆಲಸ ಮಾಡಿದೆ. ಆ ಸಂದರ್ಭದಲ್ಲಿ ಪಕ್ಷದ ಹಿರಿಯರು ಬಂದಾಗ 200, 300 ಜನರು ಸೇರ್ತಾ ಇರಲಿಲ್ಲ. ಈಗ ಭಗವಂತನ ದಯೆಯಿಂದ ಒಬ್ಬರು ಇಬ್ಬರಿದ್ದವರು ಇಷ್ಟು ಪ್ರಮಾಣದಲ್ಲಿ ಬೆಳೆದಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಣ್ಣೀರಿಟ್ಟರು.

Comments are closed.