Maharashtra Crisis : 20 ಬಂಡಾಯ ಶಾಸಕರ ಜೊತೆ ನಾವು ಸಂಪರ್ಕದಲ್ಲಿದ್ದೇವೆಂದ ಶಿವಸೇನೆ

Maharashtra Crisis : ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅಸ್ಥಿರತೆ ಎದುರಾಗಿದ್ದು ಉದ್ಧವ್​ ಠಾಕ್ರೆ ಸಿಎಂ ಸ್ಥಾನಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ ಎದುರಾಗಿದೆ. ಶಿವಸೇನಾ ನಾಯಕರಾದ ಏಕನಾಥ್​ ಶಿಂದೆ ಬಂಡಾಯವೆದ್ದಿರುವುದು ಠಾಕ್ರೆ ನೇತೃತ್ವದ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಬಂಡಾಯ ಶಾಸಕರು ಬಿಜೆಪಿ ಆಡಳಿತವಿರುವ ಆಸ್ಸಾಂನ ಗುವಾಹಟಿಯಲ್ಲಿರುವ ರಾಡಿಸನ್​ ಬ್ಲೂ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದರಿಂದ ಮಹಾ ವಿಕಾಸ್​ ಅಘಾಡಿ ಸರ್ಕಾರಕ್ಕೆ ಉರುಳುವ ಭೀತಿ ಎದುರಾಗಿದೆ. ಅಲ್ಲದೇ ಶಿವಸೇನಾ ಸರ್ಕಾರಕ್ಕೆ ಮತ್ತೊಂದು ಶಾಕಿಂಗ್​ ನ್ಯೂಸ್​ ಎಂಬಂತೆ ಇಂದು ಬೆಳಗ್ಗೆ ಮೂವರು ಶಿವಸೇನಾ ಶಾಸಕರು ಬ್ಲೂ ರಾಡಿಸನ್​ ಹೋಟೆಲ್​ನತ್ತ ಮುಖ ಮಾಡಡಿದ್ದಾರೆ. ಈ ಮೂಲಕ ರಾಡಿಸನ್​ ಬ್ಲೂ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿರುವ ಶಿವಸೇನಾ ಬಂಡಾಯ ಶಾಸಕರ ಸಂಖ್ಯೆ 41ಕ್ಕೆ ಏರಿಕೆ ಕಂಡಿದೆ. ಆದರೆ ಶಿವಸೇನಾ ಬಂಡಾಯ ಶಾಸಕ ಏಕನಾಥ್​ ಶಿಂದೆ 46 ಶಾಸಕರು ನನ್ನ ಪರವಾಗಿದ್ದಾರೆಂದು ಹೇಳಿಕೊಂಡಿದ್ದಾರೆ.


ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ತಡರಾತ್ರಿ ಸಿಎಂ ಅಧಿಕೃತ ನಿವಾಸ ವರ್ಷದಿಂದ ನಿರ್ಗಮಿಸಿದ್ದಾರೆ. ಕುಟುಂಬಸ್ಥರ ಸಮೇತ ಉದ್ಧವ್​ ಠಾಕ್ರೆ ತಮ್ಮ ಖಾಸಗಿ ನಿವಾಸ ಮಾತೋಶ್ರೀಗೆ ಆಗಮಸಿದ್ದಾರೆ. ಈ ವೇಳೆ ಸಾವಿರಾರು ಮಂದಿ ಶಿವಸೇನಾ ಕಾರ್ಯಕರ್ತರು ಮಾತೋಶ್ರೀ ನಿವಾಸದ ಎದುರು ಆಗಮಿಸುವ ಮೂಲಕ ಠಾಕ್ರೆಗೆ ತಮ್ಮ ಬೆಂಬಲವನ್ನು ಸೂಚಿಸಿದರು.
ಸಿಎಂ ಉದ್ಧವ್​ ಠಾಕ್ರೆ ತಮ್ಮ ಪತ್ನಿ ರಶ್ಮಿ ಠಾಕ್ರೆ, ಪುತ್ರ ಆದಿತ್ಯ ಹಾಗೂ ತೇಜಸ್​ ಠಾಕ್ರೆ ಜೊತೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷದಿಂದ ಮಾತೋಶ್ರೀಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುವ ಜೊತೆಯಲ್ಲಿ ಪುಷ್ಪಗಳನ್ನು ಎಸೆಯುವ ಮೂಲಕ ಗೌರವ ಸಲ್ಲಿಸಿದರು.


ಬುಧವಾರದಂದು ಸರ್ಕಾರಕ್ಕೆ ಎದುರಾಗಿರುವ ಅಸ್ಥಿರತೆ ಕುರಿತು ಮಾತನಾಡಿರುವ ಉದ್ಧವ್​ ಠಾಕ್ರೆ, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಆದರೆ ಬಂಡಾಯ ಶಾಸಕರು ರೆಸಾರ್ಟ್​ಗಳಲ್ಲಿ ವಾಸ್ತವ್ಯ ಹೂಡಿ ಆಕ್ರೋಶ ಹೊರ ಹಾಕುವ ಬದಲು ನೇರವಾಗಿ ನನ್ನೊಡನೆ ಮಾತನಾಡಲಿ ಎಂದು ಹೇಳಿದ್ದಾರೆ.


ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಶಿವಸೇನಾ ರಾಷ್ಟ್ರೀಯ ವಕ್ತಾರ ಸಂಜಯ್​ ರಾವತ್​, ಪಕ್ಷವು ರಾಡಿಸನ್​ ಬ್ಲೂ ಹೋಟೆಲ್​​ನಲ್ಲಿರುವ 20 ಶಾಸಕರ ಜೊತೆ ಸಂಪರ್ಕದಲ್ಲಿದೆ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ. ಇವರಿಗೆಲ್ಲ ಯಾವ ರೀತಿಯಲ್ಲಿ ಒತ್ತಡ ಹೇರಿ ಅಲ್ಲಿ ಉಳಿಸಿಕೊಳ್ಳಲಾಗಿದೆ ಎನ್ನುವುದು ಅವರೆಲ್ಲ ಒಮ್ಮೆ ಮುಂಬೈಗೆ ಬಂದ ಬಳಿಕ ತಿಳಿಯಲಿದೆ ಎಂದು ರಾವತ್​ ಹೇಳಿದ್ದಾರೆ.


ಇವರೆಲ್ಲ ಜಾರಿ ನಿರ್ದೇಶನಾಲಯದ ಒತ್ತಡಕ್ಕೆ ಮಣಿದು ರೆಸಾರ್ಟ್​ನತ್ತ ಮುಖ ಮಾಡುತ್ತಿದ್ದಾರೆ. ಇಡಿ ಒತ್ತಡಕ್ಕೆ ಮಣಿದು ಪಕ್ಷ ತೊರೆಯುವವನು ನಿಜವಾದ ಬಾಳಾಸಾಹೇಬ್​ ಭಕ್ತನಲ್ಲ. ನಾವು ಕೂಡ ಜಾರಿ ನಿರ್ದೇಶನಾಲಯದ ಒತ್ತಡವನ್ನು ಎದುರಿಸುತ್ತಿದ್ದೇವೆ. ಆದರೆ ನಾವು ಉದ್ಧವ್​ ಠಾಕ್ರೆ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ : CM Uddhav Leaves Official Home : ಸಿಎಂ ಅಧಿಕೃತ ನಿವಾಸದಿಂದ ನಿರ್ಗಮಿಸಿದ ಉದ್ಧವ್​ ಠಾಕ್ರೆ

ಇದನ್ನೂ ಓದಿ : ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ

Maharashtra Crisis : Sena Says ’20 MLAs in Touch’ As More Rebels Reach Assam

Comments are closed.