Nitish Kumar resigns : ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ಬೆನ್ನಲ್ಲೇ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ರಾಜೀನಾಮೆ

ಬಿಹಾರ : Nitish Kumar resigns : ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಗಳ ನಡುವೆಯೇ ಮುಖ್ಯಮಂತ್ರಿ ನಿತೀಶ್​ ಕುಮಾರ್​​ ಸಿಎಂ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾರೆ.ಬಿಹಾರದ ರಾಜ್ಯಪಾಲ ಫಾಗು ಚೌಹಾಣ್​​ಗೆ ನಿತೀಶ್​ ಕುಮಾರ್​ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಜೆಡಿ(ಯು) ಹಾಗೂ ಬಿಜೆಪಿ ನಡುವಿನ ಮೈತ್ರಿಯನ್ನು ಮುರಿದುಕೊಳ್ಳುವ ಬಗ್ಗೆ ಇಂದು ಔಪಚಾರಿಕವಾಗಿ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ನಿತೀಶ್​ ಕುಮಾರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ .


ನಮ್ಮ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯಲು ಬಿಜೆಪಿ ನಡೆಸಿದ ಹಲವಾರು ಪಿತೂರಿಯ ಕ್ರಮಗಳೇ ಇಂದು ಈ ನಿರ್ಧಾರಕ್ಕೆ ಕಾರಣ ಎಂದು ನಿತೀಶ್​ ಕುಮಾರ್​ ಕಿಡಿಕಾರಿದ್ದಾರೆ. ಆಡಳಿತಾರೂಢ ಜೆಡಿಯು , ಬಿಜೆಪಿ ಹಾಗೂ ಪ್ರತಿಪಕ್ಷವಾದ ಆರ್​ಜೆಡಿ ಆಗಸ್ಟ್​ 9ರಂದು ತಮ್ಮ ಶಾಸಕರ ಪ್ರತ್ಯೇಕ ಸಭೆಗಳನ್ನು ಪಾಟ್ನಾದಲ್ಲಿ ನಡೆಸಿತ್ತು .


ಜೆಡಿಯು ಮಾಜಿ ರಾಷ್ಟ್ರಾಧ್ಯಕ್ಷ ಆರ್​ಸಿಪಿ ಸಿಂಗ್​​ ತಮ್ಮ ಸ್ಥಾನದಿಂದ ನಿರ್ಗಮಿಸಿದ ಬಳಿಕ ನಿತೀಶ್​ ಕುಮಾರ್​ ಸಭೆ ಕರೆದಿದ್ದರು. ಆರ್​ಸಿಪಿ ಸಿಂಗ್​ ತಮ್ಮ ಮೇಲೆ ಹೊರಿಸಲಾಗಿದ್ದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ವಿವರಣೆಯನ್ನು ಕೋರಿ ಜೆಡಿಯು ನೋಟಿಸ್​ ಕಳುಹಿಸಿದ ಬಳಿಕ ರಾಜೀನಾಮೆಯನ್ನು ಸಲ್ಲಿಸಿದ್ದರು.


ಈ ನಡುವೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್​ ತಮ್ಮ ಬೆಂಬಲ ಪತ್ರವನ್ನು ನೀಡಲು ನಿತೀಶ್​ ಕುಮಾರ್​ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಬಿಹಾರದ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಮೋಹನ್​ ಝಾ ನಮ್ಮ ಪಕ್ಷದ ಶಾಸಕರು ರಾಜ್ಯದಲ್ಲಿ ಬಿಜೆಪಿ ವಿರೋಧಿ ಸರ್ಕಾರಕ್ಕೆ ಮಾತ್ರ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ . ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್​ 19 ಶಾಸಕರನ್ನು ಹೊಂದಿದೆ.


ಮೂಲಗಳ ಪ್ರಕಾರ ನಿತೀಶ್​ ಕುಮಾರ್​ ಆಗಸ್ಟ್​ ಎಂಟರಂದು ಸಂಜೆ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕಾಂಗ್ರೆಸ್​ನಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.


ಬಿಹಾರ ವಿಧಾನಸಭೆಯಲ್ಲಿ 12 ಶಾಸಕರನ್ನು ಹೊಂದಿರುವ ತಮ್ಮ ಪಕ್ಷವು ಬಿಜೆಪಿ ತೊರೆದರೆ ಜೆಡಿಯುಗೆ ಬೆಂಬಲ ನೀಡಲು ಸಿದ್ಧ ಎಂದು ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.

ಇದನ್ನು ಓದಿ : Pingali Venkayya : ತ್ರಿವರ್ಣ ಧ್ವಜದ ವಿನ್ಯಾಸಗಾರ ಪಿಂಗಲಿ ವೆಂಕಯ್ಯ ಯಾರು ಗೊತ್ತಾ?

ಇದನ್ನೂ ಓದಿ : Siddaramaiah Congress PM candidate : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ : ಪ್ರಧಾನಿ ಅಭ್ಯರ್ಥಿಯಾಗಿ ಸಿದ್ಧರಾಮಯ್ಯ

Nitish Kumar resigns as Bihar CM after ending alliance with BJP

Comments are closed.