Women Freedom Fighters : ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಲ ತಂದು ಕೊಟ್ಟ ಮಹಿಳಾ ಹೋರಾಟಗಾರರು

Women Freedom Fighters : ಇಡೀ ರಾಷ್ಟ್ರ ಸ್ವಾತಂತ್ರ್ಯದ ಅಮೃತ ಮಹೋತ್ಸವ (75th Independence Day) ಆಚರಿಸಲು ತಯಾರಿನಡೆಸುತ್ತಿದೆ. ಈ 75 ವರ್ಷಗಳಲ್ಲಿ ಭಾರತ, ಉತ್ತಮ ಸಾಧನೆಗಳನ್ನು ಮಾಡಿದೆ ಮತ್ತು ಕೆಲವು ಕಷ್ಟದ ದಿನಗಳನ್ನು ಎದುರಿಸಿದೆ. ಆದರೂ ನಮ್ಮ ರಾಷ್ಟ್ರ ಪ್ರಗತಿ ಸಾಧಿಸಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ (freedom) ಪಡೆದುಕೊಂಡಿರುವುದರ ಹಿಂದೆ ಲಕ್ಷಾಂತರ ಜನರ ತ್ಯಾಗವಿದೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಬರೀ ಪುರುಷರು ಮಾತ್ರ ಭಾಗವಹಿಸಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯರೂ ಈ ಹೋರಾಟದ ಅವಿಭಾಜ್ಯ ಅಂಗವಾಗಿದ್ದರು. ಅವರ ದೃಢನಿಶ್ಚಯದ ಹೋರಾಟ, ಸಾವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ, ಮಾತೃಭೂಮಿಯ ಮೇಲಿನ ಅವರ ಅಗಾಧ ಪ್ರೀತಿ ಹಾಗೂ ಸ್ವತಂತ್ರ ಮತ್ತು ಸಮೃದ್ಧ ಭಾರತಕ್ಕಾಗಿ ಶ್ರಮಿಸುವ ಕನಸುಗಳು, ಬ್ರಿಟಿಷ್ ರಾಜ್ ವಿರುದ್ಧ ಅವರು ಸಿಡಿದೇಳುವಂತೆ ಮಾಡಿತು. ಈ ಸಂಕಲ್ಪಗಳೇ ಅವರಿಗೆ ತ್ಯಾಗ ಮಾಡಲು ಶಕ್ತಿಯನ್ನು ನೀಡಿತು ಮತ್ತು ಅಂತಿಮವಾಗಿ ಬ್ರಿಟಿಷ್‌ ಸರ್ಕಾರದಿಂದ ಮುಕ್ತಗೊಳಿಸಲು ಪ್ರಮುಖ ಪಾತ್ರವಹಿಸುವಂತೆ ಮಾಡಿತು.

ಭಾರತ ಸ್ವತಂತ್ರವಾಗುವ ಮೊದಲು ಮಹಿಳೆಯರಿಗೆ ಅನೇಕ ಕಟ್ಟುಪಾಡುಗಳಿದ್ದವು. ಅವೆಲ್ಲವುಗಳನ್ನು ಮೀರಿ ಸ್ವತಂತ್ರ ಭಾರತಕ್ಕಾಗಿ ಅನೇಕ ಮಹಿಳೆಯರು ಶ್ರಮಿಸಿದ್ದಾರೆ. ಭಾರತ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವತಂತ್ರ ಭಾರತವನ್ನು ರೂಪಿಸಲು ಹೋರಾಡಿದ ಮಹಿಳಾ ನಾಯಕರನ್ನು ಸ್ಮರಿಸಲೇಬೇಕು. ಅಂತಹ ಮಹಾನ್‌ ಮಹಿಳೆಯರ ಪರಿಚಯ ಇಲ್ಲಿದೆ.

ಕಮಲಾದೇವಿ ಚಟ್ಟೋಪಾಧ್ಯಾಯ
ಪ್ರಸಿದ್ಧ ರಂಗಭೂಮಿ ನಟರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವಾಗಿದ್ದರು. ಏಪ್ರಿಲ್ 1903 ರಲ್ಲಿ, ಮಂಗಳೂರಿನಲ್ಲಿ (ಆಗಿನ ಮದ್ರಾಸ್ ಪ್ರೆಸಿಡೆನ್ಸಿ) ಕರ್ನಾಟಕದಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರಕ್ಕಾಗಿ ಬ್ರಿಟಿಷ್ ಸರ್ಕಾರದಿಂದ ಬಂಧಿಸಲ್ಪಟ್ಟ ಮೊದಲ ಮಹಿಳೆ. ಕಮಲಾದೇವಿಯವರು ಭಾರತೀಯ ಕರಕುಶಲ, ಕೈಮಗ್ಗ ಮತ್ತು ರಂಗಭೂಮಿಗಳ ಪುನರುಜ್ಜೀವನದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಭಾರತೀಯ ಮಹಿಳೆಯರ ಸಾಮಾಜಿಕ-ಆರ್ಥಿಕ ಗುಣಮಟ್ಟವನ್ನು ಸುಧಾರಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದು. 1930 ರಲ್ಲಿ ಮಹಾತ್ಮಾ ಗಾಂಧಿಯವರ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದವರಲ್ಲಿ ಅವರು ಒಬ್ಬರು.

ಅರುಣಾ ಅಸಫ್ ಅಲಿ
ಗ್ರ್ಯಾಂಡ್ ಓಲ್ಡ್ ಲೇಡಿ ಆಫ್ ಇಂಡಿಪೆಂಡೆನ್ಸ್ ಮೂಮೆಂಟ್‌ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅರುಣಾ ಅಸಫ್ ಅಲಿ ಅವರು ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಬಾಂಬೆಯ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಧ್ವಜವನ್ನು ಹಾರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳುಬಹುದು. ದೆಹಲಿಯ ಮೊದಲ ಮೇಯರ್ ಆಗಿದ್ದ ಅಲಿ ಅವರು ಉಪ್ಪಿನ ಸತ್ಯಾಗ್ರಹದಲ್ಲೂ ಭಾಗಿಯಾಗಿದ್ದರು. ಹಲವಾರು ಪ್ರತಿಭಟನೆಯ ಮೆರವಣಿಗೆಗಳನ್ನು ನಡೆಸಿದರು. ಇದರಿಂದ ಬ್ರಿಟಿಷರು ಅವರನ್ನು ಜೈಲಿಗೆ ಹಾಕಿದರು. ಅಸಫ್ ಅಲಿಯವರನ್ನು ಮದುವೆಯಾದ ನಂತರ INC ಗೆ ಸೇರಿದ ಅರುಣಾ ಅವರು, ರಾಜಕೀಯ ಕೈದಿಗಳನ್ನು ಸಂಘಟಿಸಿ, ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುವ ಮೂಲಕ ಜೈಲುಗಳಲ್ಲಿ ನೀಡಲಾಗುತ್ತಿದ್ದ ದೌರ್ಜನ್ಯವನ್ನು ವಿರೋಧಿಸಿದರು.

ತಾರಾ ರಾಣಿ ಶ್ರೀವಾಸ್ತವ
ಬಿಹಾರದ ಸರಳ ಕುಟುಂಬದಲ್ಲಿ ಜನಿಸಿದ ತಾರಾ ರಾಣಿ 1942 ರಲ್ಲಿ ತನ್ನ ಪತಿ ಫುಲೇಂದು ಬಾಬು ಅವರೊಂದಿಗೆ ಕ್ವಿಟ್ ಇಂಡಿಯಾ ಚಳುವಳಿಯನ್ನು ಸೇರಿದರು. ತಾರಾ ರಾಣಿ ಬ್ರಿಟೀಷ್ ರಾಜ್ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅನೇಕ ಮಹಿಳೆಯರನ್ನು ಪ್ರೋತ್ಸಾಹಿಸಿದರು ಮತ್ತು ಪ್ರತಿಭಟನೆಯ ನೇತೃತ್ವವನ್ನೂ ವಹಿಸಿದ್ದರು. ಅವರು ‘ಇಂಕ್ವಿಲಾಬ್’ ಎಂದು ಕೂಗುತ್ತಾ ಪೊಲೀಸ್ ಠಾಣೆಯತ್ತ ಸಾಗಲು ಪ್ರಾರಂಭಿಸಿದಾಗ ಪೊಲೀಸರು ಗುಂಡು ಹಾರಿಸಿದರು. ಸ್ವಾತಂತ್ರ್ಯ ಹೋರಾಟಗಾರೊಬ್ಬರ ಪತಿ ಗಾಯಗೊಂಡಾಗ ಅದನ್ನು ಸಹಿಸದ ತಾರಾ ರಾಣಿ, ಅವರ ಪತಿಗೆ ಬ್ಯಾಂಡೇಜ್ ಹಾಕಿ ಪ್ರತಿಭಟನೆ ಮುಂದುವರಿಸಿದರು. ತಾರಾ ರಾಣಿಯವರು ಸ್ವಾತಂತ್ರ್ಯ ಹೋರಾಟವನ್ನು ನಿರಂತರವಾಗಿ ಬೆಂಬಲಿಸಿದರು.

ಮೇಡಂ ಭಿಕಾಜಿ ಕಾಮಾ
ಭಿಕಾಜಿ ರುಸ್ತಂ ಕಾಮಾ ಅವರು ಬಾಂಬೆಯಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಮೇಡಂ ಕಾಮಾ ಅವರ ತಂದೆ ಸೊರಾಬ್ಜಿ ಫ್ರಾಂಜಿ ಪಟೇಲ್ ಅವರು ಪಾರ್ಸಿ ಸಮುದಾಯದ ಪ್ರಬಲ ಸದಸ್ಯರಾಗಿದ್ದರು. ಮೇಡಂ ಕಾಮಾ ಲಿಂಗ ಸಮಾನತೆಗಾಗಿ ಹೋರಾಡಿದವರು. ಯುವತಿಯರ ಅನಾಥಾಶ್ರಮಕ್ಕೆ ಸಹಾಯ ಮಾಡಲು ತಮ್ಮ ಆಸ್ತಿಯನ್ನೇ ನೀಡಿದರು. ಅವರು 1900 ರ ದಶಕದ ಆರಂಭದಲ್ಲಿ ವಿದೇಶಿ ದೇಶಗಳ ರಾಷ್ಟ್ರೀಯವಾದಿ ಸಾಹಿತ್ಯವನ್ನು ಬರೆದರು. 1902 ರಲ್ಲಿ ಅವರು ಚಿಕಿತ್ಸೆಗಾಗಿ ಬ್ರಿಟನ್‌ಗೆ ಹೋದರು ಆದರೆ ನಂತರ ಅವರಿಗೆ ಬ್ರಿಟನ್‌ ತೆರಳಲು ನಿರಾಕರಿಸಲಾಯಿತು. ಏಕೆಂದರೆ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂಬ ಅವರ ಷರತ್ತನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. 1907 ರಲ್ಲಿ ಅವರು ಭಾರತೀಯ ರಾಯಭಾರಿಯಾಗಿ, ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸಲು ಜರ್ಮನಿಗೆ ಹೋಗಿದ್ದರು.

ಅನ್ನಿ ಬೆಸೆಂಟ್
1847 ರಲ್ಲಿ ಜನಿಸಿದ ಅನ್ನಿ ಬೆಸೆಂಟ್ ಐರಿಶ್ ಮಹಿಳೆ. ಅವರು INC ಗೆ ಸೇರಿದರು. ಭಾರತದಲ್ಲಿ ರಾಜಕೀಯ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದ ಅನ್ನಿ ಬೆಸೆಂಟ್, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕರಲ್ಲಿ ಒಬ್ಬರು. ಬ್ರಿಟನ್‌ನಲ್ಲಿ ನಾಸ್ತಿಕತೆ ಮತ್ತು ವೈಜ್ಞಾನಿಕ ನಂಬಿಕೆಯ ಪ್ರತಿಪಾದಕರಾಗಿದ್ದ ಬೆಸೆಂಟ್ ಬಡವರಿಗೆ ಉತ್ತಮ ಜೀವನ ಪರಿಸ್ಥಿತಿಗಳನ್ನು ಒದಗಿಸುವತ್ತ ಗಮನಹರಿಸಿದರು. ಭಾರತದಲ್ಲಿ ಪ್ರಜಾಪ್ರಭುತ್ವದ ಪ್ರಚಾರಕ್ಕಾಗಿ ಅವರು ಹೋಮ್ ರೂಲ್ ಲೀಗ್ ಅನ್ನು ಪ್ರಾರಂಭಿಸಲು ಸಹಾಯ ಮಾಡಿದರು. ಮೊದಲನೇ ವಿಶ್ವ ಯುದ್ಧದ ನಂತರವೂ, ಅವರು 1933 ರಲ್ಲಿ ಸಾಯುವವರೆಗೂ ಭಾರತೀಯ ಸ್ವಾತಂತ್ರ್ಯಕ್ಕಾಗಿ ಮತ್ತು ಥಿಯಾಸಫಿಯ ಕಾರಣಗಳಿಗಾಗಿ ಪ್ರಚಾರವನ್ನು ಮುಂದುವರೆಸಿದರು. ಅವರು ಅನೇಕ ಕೃತಿಗಳನ್ನು ಬರೆದಿದ್ದಾರೆ. ‘ನ್ಯೂ ​​ಇಂಡಿಯಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : Independence Day 2022:ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ವೀರರ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Post Independence Development : ಸ್ವಾತಂತ್ರ್ಯಾ ನಂತರ ಭಾರತದ ಆರ್ಥಿಕತೆಯ ಅಭಿವೃದ್ಧಿ ನಡೆದುಬಂದ ಹಾದಿ

(Women Freedom Fighters of India Independence Day 2022)

Comments are closed.