Rajasthan Congress: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಕ್ಷಿಪ್ರಕ್ರಾಂತಿ 90ಕ್ಕೂ ಹೆಚ್ಚು ಶಾಸಕರು ರಾಜೀನಾಮೆ

ಜೈಪುರ : Rajasthan Congress ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಮರಳು ಭೂಮಿಯ ಕಾಂಗ್ರೆಸ್ ಸರ್ಕಾರದ ಮೇಲೆ ಪತನದ ತೂಗು ಗತ್ತಿ ನೇತಾಡುತ್ತಿದೆ. ಭಾನುವಾರ ರಾತ್ರಿ ನಡೆದ ರಾಜಕೀಯ ಹೈಡ್ರಾಮದಲ್ಲಿ 90ಕ್ಕೂ ಹೆಚ್ಚು ಶಾಸಕರ ರಾಜಸ್ಥಾನ ಸ್ಪೀಕರ್ ಸಿ.ಪಿ.ಜೋಶಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.

ಸಚಿನ್ ಪೈಲೆಟ್ ಸಿಎಂ ಗಾದಿಗೇರಲು ವಿರೋಧಿಸಿ ಗೆಹ್ಲೋಟ್ ಬಣದ 90ಕ್ಕೂ ಹೆಚ್ಚು ಶಾಸಕರು ತಮ್ಮಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನ ಸ್ಪೀಕರಗೆ ರವಾನಿಸಿದ್ದಾರೆ. ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿನ ಒಬ್ಬರಿಗೆ ಒಂದು ಹುದ್ದೆ ಅನ್ನೋ ನಿಯಮದಂತೆ ಗೆಹ್ಲೋಟ್ ಸಿಎಂ ಸ್ಥಾನ ಬಿಡುವುದು ಖಚಿತವಾಗಿದೆ. ಹೀಗಾಗಿ ಮುಂದಿನ ಸಿಎಂ ಆಗಿ ಸಚಿನ್ ಪೈಲೆಟ್ ಆಯ್ಕೆ ಆಗೋದು ಬಹತೇಕ ಪಕ್ಕಾ ಆಗಿದೆ. ಆದ್ರೆ ಗೆಹ್ಲೋಟ್ ಬಣದ 90ಕ್ಕೂ ಹೆಚ್ಚು ಶಾಸಕರಿಗೆ ಸಚಿನ್ ಪೈಲೆಟ್ ಸಿಎಂ ಆಗೋದು ಇಷ್ಟವಿಲ್ಲ. ಹೀಗಾಗಿ ಭಾನುವಾರ ನಡೆದ ಸಿಎಲ್ ಪಿ ಸಭೆಗೂ ಹಾಜರಾಗಾದ ರಾಜಸ್ಥಾನದ ಕಾಂಗ್ರೆಸ್ ಶಾಸಕರು, ಸಚಿನ್ ಪೈಲೆಟ್ ಸಿಎಂ ಆಗೋದಾದ್ರೆ ನಾವು ರಾಜೀನಾಮೆ ಕೊಡ್ತೀವಿ ಅಂತಾ ಸ್ಪೀಕರ್ ಕಚೇರಿಗೆ ತೆರಳಿದ್ರು.

2020ರಲ್ಲಿ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್‌ಗೆ ಮುಖ್ಯಮಂತ್ರಿ ಹುದ್ದೆ ಏಕೆ ಕೊಡಬೇಕು? ರಾಜಕೀಯ ಅಸ್ಥಿರತೆ ಎದುರಾದಾಗ ಗೆಹ್ಲೋಟ್ ಅವರ ಬೆನ್ನಿಗೆ ನಿಂತಿದ್ದ 102 ಶಾಸಕರಲ್ಲೇ ಒಬ್ಬರನ್ನು ಏಕೆ ಆಯ್ಕೆ ಮಾಡಿಕೊಳ್ಳಬಾರದು ಎಂದು ಅಶೋಕ್ ಗೆಹ್ಲೋಟ್ ಪರ ಶಾಸಕರು ಆಗ್ರಹಿಸುತ್ತಿದ್ದಾರೆ. ಸದ್ಯ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಶಾಸಕರನ್ನು ತಮ್ಮ ಪಾಳಯಕ್ಕೆ ಎಳೆದುಕೊಳ್ಳಲು ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಬಣ ಹರಸಾಹಸ ನಡೆಸುತ್ತಿದೆ. ಒಟ್ಟು 107 ಕಾಂಗ್ರೆಸ್ ಶಾಸಕರ ಪೈಕಿ 70 ಶಾಸಕರು ಗೆಹ್ಲೋಟ್ ಬಣದಲ್ಲಿ ಇದ್ದಾರೆ ಎನ್ನಲಾಗಿದೆ. ಸಚಿನ್ ಪೈಲಟ್ ಬಣದಲ್ಲಿ ಕೇವಲ 20 ಶಾಸಕರಷ್ಟೇ ಇದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರ ಗುಂಪು, ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ಸಭೆ ನಡೆಸಿ ನಂತರ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಸಿಪಿ ಜೋಶಿ ಅವರ ನಿವಾಸಕ್ಕೆ ತೆರಳಿದ್ದಾರೆ. ಎಲ್ಲಾ ಶಾಸಕರು ಹೆಹ್ಲೋಟ್‌ ಸ್ಥಾನ ತ್ಯಜಿಸುತ್ತಿರುವುದಕ್ಕೆ ಕೋಪಗೊಂಡು ರಾಜೀನಾಮೆ ನೀಡುತ್ತಿದ್ದಾರೆ. ಅದಕ್ಕಾಗಿ ಸ್ಪೀಕರ್ ಮೊರೆ ಹೋಗುತ್ತಿದ್ದೇವೆ. ತಮ್ಮನ್ನು ಸಂಪರ್ಕಿಸದೆ ಸಿಎಂ ಅಶೋಕ್ ಗೆಹ್ಲೋಟ್ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ಖಚರಿಯಾವಾಸ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

2018 ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬಳಿಕ, ಗೆಹ್ಲೋಟ್ ಮತ್ತು ಪೈಲಟ್ ನಡುವೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗಿದೆ. ನಂತರ ಮೂರನೇ ಬಾರಿಗೆ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಪೈಲಟ್ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಲಾಯ್ತು. ಇನ್ನು ಮೂಲಗಳ ಪ್ರಕಾರ ಕೆ.ಸಿ.ವೇಣುಗೋಪಾಲ್ ಗೆಹ್ಲೋಟ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಅಂತಾ ಗೊತ್ತಾಗಿದೆ. ಈ ವೇಳೆ ಗೆಹ್ಲೋಟ್ ನನ್ನ ಕೈಯಲ್ಲಿ ಏನೂ ಇಲ್ಲ ಎಲ್ಲ ಶಾಸಕರು ಕೋಪ ಗೊಂಡಿದ್ದಾರೆ ಅಂತಾ ಹೇಳಿದ್ದಾರೆ ಎನ್ನಲಾಗಿದೆ. ಗೆಹ್ಲೋಟ್ ಬಣದ ಶಾಸಕರ ಮನವೊಲಿಸುವ ಸರ್ಕಸ್ ನಡೆಯುತ್ತಿದೆ. ಆದ್ರೆ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಬಿಜೆಪಿಗೆ ಇದು ದೊಡ್ಡ ಅಸ್ತ್ರವಾಗಿ ಸಿಕ್ಕಂತಾಗಿದೆ.

ಇದನ್ನೂ ಓದಿ: Dasara 2022:ಮೈಸೂರು ದಸರಾಕ್ಕೆ ಸಕಲ ಸಿದ್ದತೆ : ಸಂಸದ ಪ್ರತಾಪ್‌ ಸಿಂಹ ಪರಿಶೀಲನೆ

Rajasthan Congress Congress Firefights As Rajasthan Chief Minister Question Sparks Big Crisis

Comments are closed.