ಈ ಹಳ್ಳಿಗಳಲ್ಲಿ ಆಚರಿಸಲ್ಲ ರಕ್ಷಾಬಂಧನ ಹಬ್ಬ ! ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ

ಉತ್ತರ ಪ್ರದೇಶ : ದೇಶದಾದ್ಯಂತ ಇಂದು ರಕ್ಷಾಬಂಧನದ ಸಂಭ್ರಮ. ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗೆ ರಾಖಿ ಕಟ್ಟಿ ರಕ್ಷೆಯ ಅಭಯವನ್ನು ಬೇಡುತ್ತಾರೆ. ಆದರೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ಜನರ ವಿಚಿತ್ರ ನಂಬಿಕೆ ಹಾಗೂ ಆಚರಣೆಗಳು.

ಸುಮಾರು ನಾಲ್ಕು ಶತಮಾನಗಳಿಂದ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುವ ಸಂಪ್ರದಾಯ ಈ ಹಳ್ಳಿಗಳಲ್ಲಿ ಇಲ್ಲ. ಸೋದರರ ಬದಲು ಮರದ ಕೋಲುಗಳಿಗೆ ರಾಖಿ ಕಟ್ಟುತ್ತಾರೆ. ಇಲ್ಲಿನ ಬಹುಪಾಲು ಜನರು ತಮ್ಮ ಶೌರ್ಯಕ್ಕೆ ಹೆಸರುವಾಸಿಯಾಗಿರುವ ರಾಜ ಮಹಾರಾಣಾ ಪ್ರತಾಪನ 17ನೇ ತಲೆಮಾರಿನವರು ಎಂದು ಹೇಳಿಕೊಳ್ಳುತ್ತಾರೆ.

1576ರ ಹಲ್ಡಿಘಾಟಿ ಯುದ್ಧದ ಸಮಯದಲ್ಲಿ ಪುರುಷರೆಲ್ಲರೂ ಯುದ್ಧಭೂಮಿಯಲ್ಲಿದ್ದರು. ಹೀಗಾಗಿ ಯಾರಿಗೂ ರಕ್ಷಾ ಬಂಧನ ಆಚರಿಸಲು ಸಾಧ್ಯವಾಗಿರಲಿಲ್ಲವಂತೆ. ಹೀಗಾಗಿ ಇಲ್ಲಿನ ಮಹಿಳೆಯರು ಮರದ ಕಡ್ಡಿಗಳಿಗೆ ರಾಖಿ ಕಟ್ಟಲು ನಿರ್ಧರಿಸಿದರು. ಅಂದಿನಿಂದ ಇಂದಿನವರೆಗೂ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಇದನ್ನು ಛಡಿ ಪೂಜೆ ಅಂತಲೂ ಕರೆಯಲಾಗುತ್ತದೆ.

ಇನ್ನು ಮೀರತ್ ನ ಸುರಾನಾ ಎಂಬ ಹಳ್ಳಿಯಲ್ಲಿ ಕೂಡ ಮಹಿಳೆಯರು ರಕ್ಷಾ ಬಂಧನ ಹಬ್ಬವನ್ನು ಆಚರಿಸುವುದೇ ಇಲ್ವಂತೆ. 12ನೇ ಶತಮಾನದ ಅಂತ್ಯದಲ್ಲಿ ಹಬ್ಬದ ದಿನದಂದೇ ಮಹಮ್ಮದ್ ಘೋರಿ ಈ ಹಳ್ಳಿಗೆ ದಾಳಿ ಮಾಡಿ ಇಲ್ಲಿನ ಅನೇಕ ಜನರನ್ನು ಕೊಂದು ಹಾಕಿದನಂತೆ. ನಂತರದ ದಿನಗಳಲ್ಲಿ ಹಬ್ಬ ಆಚರಿಸಲು ಪ್ರಯತ್ನಿಸಿದಾಗ ಈ ಹಳ್ಳಿಯ ಹುಡುಗನೊಬ್ಬ ಅಂಗವೈಕಲ್ಯಕ್ಕೆ ಗುರಿಯಾದನಂತೆ. ಅಂದಿನಿಂದ ಇದನ್ನು ಶಾಪವಾಗಿ ಪರಿಗಣಿಸಲಾಗಿದ್ದು, ಇಂದಿಗೂ ಈ ಹಳ್ಳಿಯಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸುವುದಿಲ್ಲ ಎಂದು ಹೇಳಲಾಗಿದೆ.

ಯುಪಿಯ ಸಂಭಾಲ್ ಜಿಲ್ಲೆಯಲ್ಲಿ ಕೂಡ ಈ ಹಬ್ಬವನ್ನು ಆಚರಿಸಲಾಗುವುದಿಲ್ಲ. ಯಾಕೆಂದರೆ ರಾಖಿ ಕಟ್ಟಿದ ಬಳಿಕ ಸಹೋದರಿಗೆ ಏನಾದರೊಂದು ಉಡುಗೊರೆ ನೀಡಬೇಕಾಗುತ್ತದೆ. ಒಂದು ವೇಳೆ ಸೋದರಿಯರು ಆಸ್ತಿಯಲ್ಲಿ ಪಾಲು ಕೇಳಿದರೆ ಏನು ಮಾಡುವುದು ಅನ್ನೋ ಭಯದಿಂದಾಗಿ ಈ ಹಬ್ಬವನ್ನೇ ಆಚರಿಸಲಾಗುತ್ತಿಲ್ಲ. ಇನ್ನು ರಕ್ಷಾಬಂಧನ ದಿನದಂದು ಮಗು ಜನಿಸಿದರೆ ಶಾಪ ನಿವಾರಣೆಯಾಗುತ್ತದೆ ಅನ್ನೋ ನಂಬಿಕೆ ಕೂಡ ಇಲ್ಲಿನ ಗ್ರಾಮಸ್ಥರಲ್ಲಿದೆ.

Comments are closed.