Personal Finances Advisors Help: ವೈಯಕ್ತಿಕ ಹಣಕಾಸು ನಿರ್ವಹಣೆ; ಉತ್ತಮ ಸಲಹೆಗಾರರ ಅವಶ್ಯಕತೆ ಯಾವಾಗ? ಏಕೆ?

ವ್ಯಕ್ತಿಗತ ಹಣಕಾಸು ನಿರ್ವಹಣೆ (Personal Finance) ಅಂತಹ ತಲೆನೋವಿನ ವಿಷಯ ಏನಲ್ಲ. ಎಲ್ಲರಿಗೂ ಗೃಹಕೃತ್ಯದ ಹಣಕಾಸಿನ ನಿರ್ವಹಣೆಗೆ ಸಲಹೆಗಾರರ ಅವಶ್ಯಕತೆಯೇನೂ ಇರುವುದಿಲ್ಲ. ಅದರೆ ಬದುಕು ಒಂದೇ ರೀತಿ ಏರು-ಪೇರಿಲ್ಲದೇ ನಡೀತಾ ಇರೋಲ್ಲವಲ್ಲ? ಅನಿರೀಕ್ಷಿತ ಖರ್ಚು-ವೆಚ್ಚಗಳು ಢೀಡೀರನೆ ಎದುರಾದಾಗ ಹಾಗೂ ಖರ್ಚುಗಳು ಆದಾಯದ ಪ್ರಮಾಣವನ್ನು ಮೀರಿದಾಗ, ಕೆಲವೊಮ್ಮೆ ಖರ್ಚುಗಳನ್ನು ಹಿಡಿತದಲ್ಲಿಡಬೇಕಾದ ಹಾಗೂ ಆದಾಯದ ಸೂಕ್ತ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿಗಳು ಎದುರಾಗುತ್ತವೆ. ಇದು ನಿತ್ಯಜೀವನದ ಗೃಹಕೃತ್ಯದ ಮಾತಾಯಿತು. ಅದೇ ನೀವೊಬ್ಬ ಹೂಡಿಕೆದಾರರಾದರೆ, ಅದರಲ್ಲೂ ನಿಮ್ಮ ಹಣಕಾಸಿನ ವ್ಯವಹಾರಗಳನ್ನು ನೀವೇ ನೋಡಿಕೊಳ್ಳುವವರಾದರೆ ಕೆಲವೊಮ್ಮೆ ಸಲಹೆಗಾರರ ಅವಶ್ಯಕತೆ (Personal Finances Advisors Help)ತಲೆದೋರಬಹುದು. 

ನಿಮ್ಮ ಹೂಡಿಕೆಗಳ ಬಗ್ಗೆ ಕಾಲ-ಕಾಲಕ್ಕೆ ತೆಗೆದುಕೊಳ್ಳಬೇಕಾದ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸಾಮರ್ಥ್ಯ ನಿಮಗಿರುವುದಾದರೆ ಹಾಗೂ ಅವುಗಳನ್ನು ಜಾರಿಗೆ ತರುವಷ್ಟು ಸಮಯಾವಕಾಶವೂ ನಿಮಗಿರುವುದಾದರೆ ನಿಮಗೆ ಸಲಹೆಗಾರರ ಅವ‍ಶ್ಯಕತೆಯಿಲ್ಲ.

ಒಂದು ವೇಳೆ, ನಿಮಗೆ ಸಮಯದ ಅಭಾವದಿಂದಲೋ ಅಥವಾ ಬೇರೆ ಯಾವುದೇ ಕಾರಣಕ್ಕೆ ಸೂಕ್ತ ಸಮಯಕ್ಕೆ ಸೂಕ್ತ ಕ್ರಮ/ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿರದ ಪರಿಸ್ಥಿತಿ ಎದುರಾದರೆ, ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ವಿಳಂಬವಾಗುತ್ತಿದ್ದರೆ, ಅಥವಾ ನೀವೇ ಹಾಕಿಕೊಂಡಿರುವ ಸಮಯದ ಮಿತಿಯಲ್ಲಿ ನಿಮ್ಮ ಆರ್ಥಿಕ ಗುರಿ ತಲುಪಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾದಾಗ ನಿಮಗೆ ಸಲಹೆಗಾರರ ಅವಶ್ಯಕತೆಯಿದೆ ಎಂದು ತಿಳಿಯಬೇಕು. ಹೆಚ್ಚಿನ ವೇಳೆ, ಒಬ್ಬ ಉತ್ತಮ ಹೂಡಿಕೆ ಸಲಹೆಗಾರನ ಅವಶ್ಯಕತೆ ಮಾತ್ರವೇ ಇರುತ್ತದೆ ಹಾಗೂ ಅವರು ದೊರೆತ ನಂತರ ಪರಿಸ್ಥಿತಿಗಳು ಉತ್ತಮವಾಗುತ್ತಾ ಸಾಗುತ್ತವೆ.

ಹೆಚ್ಚಿನ ವೇಳೆ, ಹೂಡಿಕೆದಾರರು ವರ್ಷಾನುಗಟ್ಟಲೆ ವ್ಯವಹಾರ ಮಾಡಿ ಸಾಕಷ್ಟು ಲಾಭ ಸಂಪಾದಿಸಿದ್ದರೂ ಅದಕ್ಕೆ ತಕ್ಕಂತೆ ಆಸ್ತಿರೂಪದಲ್ಲಾಗಲೀ ಅಥವಾ ಹೂಡಿಕೆಯ ರೂಪದಲ್ಲಾಗಲೀ ಕಾಣದಿದ್ದರೆ ಅದಕ್ಕೆ ಕಾರಣ ಶಿಸ್ತಿನ ಉಳಿತಾಯದ ಅಭ್ಯಾಸ ಇಲ್ಲದಿರುವುದು. ನೀವೇನಾದರೂ ಇಂತಹ ಪರಿಸ್ಥಿತಿಯಲ್ಲಿದ್ದರೆ ನಿಮಗೆ ಸಲಹೆಗಾರರ ಅವಶ್ಯಕತೆಯಿದೆ ಎಂದೇ ಅರ್ಥ.

ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿಯನ್ನು ನಿರ್ವಹಿಸಲು ನಿಮಗೆ ಸಮಯವಿಲ್ಲದಿದ್ದರೆ ಅಥವಾ ಅದನ್ನು ಕಲಿಯುವ ಆಸಕ್ತಿಯಿಲ್ಲದಿದ್ದರೆ (ಅದೇನೂ ಬ್ರಹ್ಮವಿದ್ಯೆಯಲ್ಲ ಬಿಡಿ), ಅಥವಾ ಯಾವುದೇ ಕಾರಣಕ್ಕೆ ನಿಮಗೆ ಅದನ್ನು ನಿರ್ವಹಿಸಲು ಸಾಧ್ಯವಿಲ್ಲದ ಪಕ್ಷದಲ್ಲಿ ಸಲಹೆಗಾರರ ಸಹಾಯ ತೆಗೆದುಕೊಳ್ಳಿ, ಹಾಗೂ ಇದಕ್ಕಾಗಿ ಯಾವುದೇ ಅಪರಾಧಿ ಮನೋಭಾವವನ್ನು ಹೊಂದಬೇಡಿ.

ಬಹಳಷ್ಟು ಜನರಿಗೆ ತೆರಿಗೆ ಉಳಿಸುವ ಉತ್ಕಟವಾದ ಆಸೆ ಇರುತ್ತದೆ ಹಾಗೂ ಅದನ್ನು ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿರುತ್ತಾರೆ. ಒಂದು ವೇಳೆ ನೀವು ಅನೇಕ ವರ್ಷಗಳ ಕಾಲ ಈ ರೀತಿ ಮಾಡುತ್ತಿದ್ದರೂ ಅದರಿಂದ ನಿಮಗೆ ಉತ್ತಮ ಫಲಿತಾಂಶ ದೊರಕುತ್ತಿಲ್ಲವೆಂದಾದರೆ ತೆರಿಗೆ ಉಳಿಸುವುದು ಹಾಗೂ ಯೋಜಿಸಿ ಹೂಡಿಕೆ ಮಾಡುವುದು ಎರಡು ಬೇರೆ ಬೇರೆ ಎಂದು ಒಪ್ಪಿಕೊಂಡು ಯಾರಾದರೂ ವೃತ್ತಿಪರರಿಗೆ ಆ ಜವಾಬ್ದಾರಿ ವಹಿಸಿ ನೆಮ್ಮದಿಯಿಂದಿರಿ.

ನೀವು ನಿಮ್ಮ ನಿವೃತ್ತಿಯ ನಂತರದ ಜೀವನಕ್ಕಾಗಿ ಸಾಕಷ್ಟು ಉಳಿತಾಯ ಮಾಡುತ್ತಿದ್ದೀರಾ ಅಥವಾ ಇಲ್ಲವೇ ಎಂದು ನಿಮಗೆ ತಿಳಿಯುತ್ತಿಲ್ಲವಾದರೆ ಹಣಕಾಸು ಸಲಹೆಗಾರರ ಅಥವಾ ಹೂಡಿಕೆ ಸಲಹೆಗಾರರ ಸಹಾಯ ಪಡೆಯಿರಿ.

ಸತತವಾಗಿ, ವರ್ಷದ ನಂತರ ವರ್ಷ ಹಣ ಕಳೆದುಕೊಳ್ಳುವುದು ಸಹಜವಾದದ್ದಲ್ಲ. ಇದಕ್ಕಾಗಿ ಮಾರುಕಟ್ಟೆಯನ್ನು ದೂಷಿಸುವುದು ಸರಿಯಲ್ಲ. ನಿವೇನಾದರೂ ಸತತವಾಗಿ ತಪ್ಪು ನಿರ್ಧಾರಗಳಿಂದ ಕೆಟ್ಟ ಹೂಡಿಕೆಗಳನ್ನು ಮಾಡುತ್ತಿದ್ದರೆ ಒಬ್ಬ ಒಳ್ಳೆಯ ಸಲಹೆಗಾರನು ನೀವು ಅಂತಹ ತಪ್ಪನ್ನು ಮತ್ತೊಮ್ಮೆ ಮಾಡದಂತೆ ನಿಮ್ಮನ್ನು ಎಚ್ಚರಿಸಬಹುದು.

ಜೀವನದ ಪ್ರಮುಖ ಘಟನೆಗಳಾದ ಮದುವೆ, ಸಂತಾನ, ಮನೆ ಕಟ್ಟುವುದು/ಕೊಳ್ಳುವುದು, ಹಾಗೂ ನಿವೃತ್ತಿ ನಂತರದ ಜೀವನವನ್ನು ಯೋಜಿಸುವುದರಂತಹ ದೊಡ್ಡ ಹೊಣೆಗಾರಿಕೆಯ ಸಮಯಗಳಲ್ಲಿ ಹಣಕಾಸಿನ ನಿರ್ವಹಣೆಗೆ ಹಾಗೂ ನಿಮ್ಮ ಗುರಿಗಳು ಹಾಗೂ ಹೂಡಿಕೆಗಳ ಬಗ್ಗೆ ವೃತ್ತಿಪರರ ಸಲಹೆ ಅತ್ಯಮೂಲ್ಯ. ನಿಜ ಜೀವನದ ಗುರಿಗಳಾದ ಮಕ್ಕಳ ವಿದ್ಯಾಭ್ಯಾಸ ಹಾಗೂ ವಿವಾಹ ಮೊದಲಾದುವುಗಳ ಸಮಯದಲ್ಲಿ ಒಬ್ಬ ಒಳ್ಳೆಯ ಸಲಹೆಗಾರನು ನಿಮಗೆ ಹೂಡಿಕೆಯ ಹಾಗೂ ಖರ್ಚಿನ ವಿಷಯಗಳಲ್ಲಿ ಸೂಕ್ತ ಸಲಹೆಗಳನ್ನು ನೀಡಬಹುದು.

ನೀವು ಹಾಗೂ ನಿಮ್ಮ ಕುಟುಂಬದ ಪ್ರಮುಖರು ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರಗಳ ವಿಷಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದರೆ ಆಗ ಹಣಕಾಸು ಸಲಹೆಗಾರರ ಸಹಾಯ ನಿಮ್ಮ ಸಮಸ್ಯೆಯನ್ನು ಬಗೆಹರಿಸಬಹುದು.

ನಿಮ್ಮ ಸತತ ಪ್ರಯತ್ನಗಳ ನಂತರವೂ ನಿಮ್ಮ ಹಣಕಾಸಿನ ಪರಿಸ್ಥಿತಿ ನಿಮ್ಮ ಕೈಮೀರುತ್ತಿದ್ದರೆ ಹಾಗೂ ಅದನ್ನು ಸುಸ್ಥಿಗೆ ತರಲು ಏನು ಮಾಡಬೇಕೆಂದು ನಿಮಗೆ ತೋಚದಿದ್ದರೆ ನಿಮಗೆ ಸಲಹೆಗಾರರ ಅವಶ್ಯಕತೆ ಖಚಿತವಾಗಿ ಇದೆಯೆಂದೇ ಅರ್ಥ.

ಮೇಲೆ ಹೇಳಲಾಗಿರುವ ಅಂಶಗಳು ನಿಮಗೆ ಹಣಕಾಸಿನ ಸಲಹೆಗಾರರ ಅವಶ್ಯಕತೆಯಿದೆ ಎಂಬುದನ್ನು ಸೂಚಿಸುವ ಕೆಲವೇ ಕೆಲವು ಪರಿಸ್ಥಿತಿಗಳು ಮಾತ್ರ.  ಇಂತಹ ಆತಂಕದ ಪರಿಸ್ಥಿತಿಗಳು ಜೀವನದಲ್ಲಿ ಎದುರಾದಾಗ ಸಮಸ್ಯೆಯಿಂದ ಹೊರನಿಂತು ಯೋಚಿಸಬಲ್ಲ ವೃತ್ತಿಪರರ ಸಹಾಯ ಪಡೆದಾಗ ಅದು ಸಮಸ್ಯೆಯಿಂದ ಸರಾಗವಾಗಿ ಹೊರಬರಲು ಸಹಾಯ ಮಾಡುತ್ತದೆ.

ನೆನಪಿರಲಿ, ಹಣಕಾಸಿನ ನಿರ್ವಹಣೆ ಕೇವಲ ಶ್ರೀಮಂತರು ಮಾತ್ರ ಮಾಡಬೇಕಾದುದಲ್ಲ. ಇದು ಎಲ್ಲರೂ ತಮ್ಮ ನೆಮ್ಮದಿಯು ಜೀವನಕ್ಕಾಗಿ ಕೈಗೊಳ್ಳಬೇಕಾಗಿರುವ ಒಂದು ಪ್ರಮುಖ ಹೊಣೆಗಾರಿಕೆ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಯಾರಾದರೂ ಉತ್ತಮ ಹಣಕಾಸು ಸಲಹೆಗಾರರ ಸಲಹೆ ಪಡೆಯುವುದು ಅತ್ಯವಶ್ಯಕ.

ಇದನ್ನೂ ಓದಿ: top 5 financial resolutions : ಹೊಸವರ್ಷದಲ್ಲಿ ನಿಮಗೆ ಲಾಭತರಲಿರುವ 5 ಆರ್ಥಿಕ ನಿರ್ಧಾರಗಳು

ಇದನ್ನೂ ಓದಿ: ಸಿನಿಪ್ರಿಯರಿಗೆ ಇಲ್ಲಿದೆ ಭರ್ಜರಿ ಆಫರ್: ಹಾರರ್ ಸಿನಿಮಾ ನೋಡಿ ಬಹುಮಾನ ಗೆಲ್ಲಿ

Handle Personal Finances easily with Advisors help

Comments are closed.