Bommai CM : ಅಂದು ಮೆಕ್ಯಾನಿಕಲ್‌ ಇಂಜಿನಿಯರ್‌ : ಇಂದು ರಾಜ್ಯದ ಮುಖ್ಯಮಂತ್ರಿ

ಬೆಂಗಳೂರು : ಅಂದು ಬಸವರಾಜ್‌ ಬೊಮ್ಮಾಯಿ ಇಂಜಿನಿಯರಿಂಗ್‌ ಪದವಿ ಪಡೆದು ಟಾಟಾ ಸಮೂಹದಲ್ಲಿ ಕೆಲಸ ಮಾಡಿದ್ದರು. ಆದ್ರೆ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದಾರೆ. ಬಸವರಾಜ್‌ ಬೊಮ್ಮಾಯಿ ಬೆಳೆದು ಬಂದ ಹಾದಿಯ ರೋಚಕ ಘಟನೆಗಳು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.‌ ಬೊಮ್ಮಾಯಿ ಅವರ ಮಗನಾಗಿರೋ ಬಸವರಾಜ್‌ ಬೊಮ್ಮಾಯಿ ಅತ್ಯಂತ ಪ್ರಾಮಾಣಿಕ ರಾಜಕಾರಣಿ. ತಂದೆ ಹಾಕಿಕೊಟ್ಟ ಹಾದಿಯಲ್ಲೇ ನಡೆಯುತ್ತಾ ಯಾವುದೇ ಕಪ್ಪು ಚುಕ್ಕೆಯನ್ನು ಅಂಟಿಸಿಕೊಳ್ಳದೇ ಮುನ್ನಡೆಯುತ್ತಿದ್ದಾರೆ. ಎಸ್.ಆರ್.‌ ಬೊಮ್ಮಾಯಿ ಅವರು ಜನತಾ ಪರಿವಾರದ ಪ್ರಭಾವಿ ನಾಯಕರ ಲ್ಲೊಬ್ಬರು. ತಂದೆಯಂತೆ ಮಗ ಬಸವರಾಜ್ ಬೊಮ್ಮಾಯಿ ಅವರು ಕೂಡ ಯುವ ಜನತಾದಳದ ಅಧ್ಯಕ್ಷರಾಗಿ ರಾಜಕೀಯ ರಂಗಕ್ಕೆ ಎಂಟ್ರಿಕೊಟ್ಟಿದ್ದರು.

ವಿಧಾನ ಪರಿಷತ್‌ ಸದಸ್ಯರಾಗಿ ಎರಡು ಅವಧಿಗೆ ಆಯ್ಕೆಯಾಗಿದ್ದ ಬಸವರಾಜ್‌ ಬೊಮ್ಮಾಯಿ ಅವರು ಜನತಾದಳವನ್ನು ತೊರೆದು 2008 ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಅಲ್ಲದೇ ಉತ್ತರ ಕರ್ನಾಟಕ ಭಾಗದ ಹಾವೇರಿಯಲ್ಲಿ ಶಿಗ್ಗಾಂವ್ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಮೂರು ಬಾರಿ ಶಾಸಕರಾಗಿ, ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಸಿದ್ದು, ಯಡಿಯೂರಪ್ಪ ಅವಧಿಯಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿಯೂ ಪ್ರಣಾಳಿಕೆ ಸಮಿತಿಯ ಸದಸ್ಯರಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ.

ಬಸವರಾಜ್‌ ಬೊಮ್ಮಾಯಿ ಅವರು ಸಾದರ ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ಕೇವಲ ಜಾತಿಯಿಂದಷ್ಟೇ ಅಲ್ಲಾ ವೈಯಕ್ತಿತ ಕಾರ್ಯ ವೈಖರಿಯಿಂದಲೂ ಬಸವರಾಜ್‌ ಬೊಮ್ಮಾಯಿ ಸಿಎಂ ಹುದ್ದೆಯನ್ನು ಅಲಂಕರಿಸಿದ್ದಾರೆ. ರಾಜಕೀಯದಲ್ಲಿ ಅನುಭವ ಹೊಂದಿರುವ ಬೊಮ್ಮಾಯಿ ವಿಪಕ್ಷ ನಾಯಕರ ಜೊತೆಗೆ ಕೂಡ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಬಸವರಾಜ್‌ ಬೊಮ್ಮಾಯಿ ರಾಜಕೀಯ ರಂಗಕ್ಕೆ ಬರುವ ಮುನ್ನ ಅವರು ಮೆಕ್ಯಾನಿಕಲ್‌ ಇಂಜಿಯರ್‌ ಆಗಿದ್ದರು. ಮಾತ್ರವಲ್ಲ ಟಾಟಾ ಸಮೂಹದಲ್ಲಿ ತರಬೇತಿಯನ್ನೂ ಪಡೆದು ತಮ್ಮ ವೃತ್ತಿಯನ್ನು ಆರಂಭಿಸಿದ್ದರು. ಆದ್ರೆ ತಂದೆಯಿಂದ ರಾಜಕೀಯ ಸೆಳೆತವನ್ನು ಹೊಂದಿದ್ದ ಬೊಮ್ಮಾಯಿ ಅವರು ಕೂಡ ರಾಜಕೀಯಕ್ಕೆ ಎಂಟ್ರಿಕೊಟ್ಟು ತನ್ನ ತಂದೆಯಂತೆಯೇ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

Comments are closed.