ಪ್ರಕೃತಿಯ ಅದ್ಭುತ ರಮ್ಯತಾಣ ಕಾಸರಗೋಡಿನ “ಮಾಲಂ”

0

ಕಾಸರಗೋಡು : ದೇವರನಾಡು ಕೇರಳ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ವಿಶ್ವದ ಪ್ರವಾಸಿಗರನ್ನು ತನ್ನ ಸೆಳೆಯುವ ರಾಜ್ಯಗಳಲ್ಲೊಂದು. ಕೇರಳ ನಿಸರ್ಗದತ್ತವಾದ ನೈಜ ಸೌಂದರ್ಯವನ್ನೇ ಮೈದುಂಬಿಕೊಂಡು ಅದ್ಭುತ ರಮ್ಯತೆಯಿಂದ ಕೂಡಿರುವ ಪ್ರವಾಸಿ ಸ್ಥಳ ಹೊಂದಿದೆ. ಇಂತಹ ಪ್ರವಾಸಿ ತಾಣಗಳಲ್ಲೇ ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್ ಎನಿಸಿಕೊಂಡಿರುವುದೇ ಮಾಲಂ.

ಕರ್ನಾಟಕದ ಗಡಿಭಾಗದಲ್ಲಿ ಪರಿಸರ ಸಯ್ಯ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಮಾಲಂ ಪ್ರವಾಸಿಗರ, ಚಾರಣಪ್ರಿಯರ ನೆಚ್ಚಿನ ತಾಣವೂ ಹೌದು. ಕಾಸರಗೋಡು ಜಿಲ್ಲೆಯ ಲ್ಲಿರುವ ಮಾಲ೦ ಪ್ರವಾಸಿಗರನ್ನು ರೋಮಾಂಚನಗೊಳಿಸುವ ಅದ್ಭುತ ಸ್ಥಳ. ಚಾರಣ, ಗ್ರೀನ್ ವಾಕಿಂಗ್ ಗಳಿಗೆ ಈ ಸ್ಥಳ ಹೇಳಿಮಾಡಿಸಿದಂತಿದೆ. ಮಾಲಂನಿಂದ ಕೇವಲ 27 ಕಿಲೋ ಮೀಟರ್ ದೂರದಲ್ಲಿ ರಾಣಿಪುರಂ ಎಂಬ ಗಿರಿಧಾಮವೂ ಇದೆ.

ಎತ್ತನೋಡಿದರತ್ತ ಹಚ್ಚ ಹಸಿರಿನ ವನರಾಶಿ. ಬೆಟ್ಟಗುಡ್ಡಗಳ ಸಾಲು. ಹಸಿರ ಸಿರಿಗೆ ಹಾಲಿನ ಹೊದಿಕೆಯಂತೆ ಬಾಸವಾಗುತ್ತಿರುವ ಮೋಡಗಳ ಸಾಲು. ಆಹ್ಲಾದಕರ ವಾತಾವರಣ ಪ್ರವಾಸಿಗರಿಗೆ, ಚಾರಣಿಗರಿಗೆ ವಿಶೇಷ ಅನುಭವವನ್ನು ಉಣಬಡಿಸುತ್ತದೆ.

ಕಾಸರಗೋಡಿನಿಂದ ಅರವತ್ತು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶ ಪಶ್ಚಿಮಘಟ್ಟದ ಸುಂದರ ಪ್ರದೇಶಗಳಲ್ಲಿ ಒಂದು. ಸುಳ್ಯದಿಂದ 70 ಕಿಲೋಮೀಟರ್, ಮಡಿಕೇರಿಯಿಂದ 90 ಕಿಲೋಮೀಟರ್ ದೂರದಲ್ಲಿದ್ದು ಕಾಸರಗೋಡಿನಿಂದಲೂ ಮಾಲಂಗೆ ಪ್ರಯಾಣಿಸಬಹುದಾಗಿದೆ.

ಮಾಲಂ ವನ್ಯಜೀವಿಧಾಮ ಬಹಳಷ್ಟು ಕಾಡು ಪ್ರಾಣಿಗಳು ಇರುವ ವಿಶೇಷ ವನ್ಯಧಾಮ. ಒಟ್ಟಿನಲ್ಲಿ ಪ್ರವಾಸಿಗರಿಗೆ, ಪ್ರಕೃತಿ ಪ್ರಿಯರಿಗೆ ಹೇಳಿಮಾಡಿಸಿದ ಸ್ಥಳ ಮಾಲಂ.

Leave A Reply

Your email address will not be published.